ADVERTISEMENT

ಹೊಸ ಅರ್ಥವಿಸ್ತಾರದ ‘ಬೆಟ್ಟದ ಚೆಲುವೆ’

ರಂಗಭೂಮಿ

ವೈ.ಕೆ.ಸಂಧ್ಯಾಶರ್ಮ
Published 3 ಮಾರ್ಚ್ 2016, 19:30 IST
Last Updated 3 ಮಾರ್ಚ್ 2016, 19:30 IST
ಹೊಸ ಅರ್ಥವಿಸ್ತಾರದ ‘ಬೆಟ್ಟದ ಚೆಲುವೆ’
ಹೊಸ ಅರ್ಥವಿಸ್ತಾರದ ‘ಬೆಟ್ಟದ ಚೆಲುವೆ’   

ಪುರಾಣದ ಕಥೆಯೊಂದು ಜಾನಪದ ಹಿನ್ನಲೆಯಲ್ಲಿ, ಸಾಮಾಜಿಕ ದೃಷ್ಟಿಯಿಂದ ಮಹತ್ವದ ಅರ್ಥ ಸ್ಫುರಿಸುವ ಚೆಂದದ ನಾಟಕವಾಗಿ ಅರಳಬಲ್ಲುದು ಎಂಬುದಕ್ಕೆ ‘ಬೆಟ್ಟದ ಚೆಲುವೆ’ ಸಾಕ್ಷಿಯಾಯಿತು. ಇತ್ತೀಚೆಗೆ ಕೆ.ಎಚ್. ಕಲಾಸೌಧದಲ್ಲಿ ‘ವಿವೇಕಾನಂದ ಕಲಾಕೇಂದ್ರ’ ಏರ್ಪಡಿಸಿದ್ದ ‘ರಂಗಸಂಭ್ರಮ’ ನಾಟಕೋತ್ಸವದ ಪ್ರಥಮ ದಿನ ನಾಟಕ ಪ್ರದರ್ಶಿತವಾಯಿತು.

ಎಸ್.ಎಸ್.ಎಂ.ಆರ್.ವಿ. ಪದವಿ ಕಾಲೇಜಿನ ‘ರಂಗಾಂತರಂಗ’ ತಂಡ ಈ ನಾಟಕವನ್ನು ಪ್ರಸ್ತುತಪಡಿಸಿತು. ಹೊಸ ಅರ್ಥವಿಸ್ತಾರದಲ್ಲಿ ನಾಟಕವನ್ನು ಸ್ವಾರಸ್ಯಪೂರ್ಣವಾಗಿ ಹೆಣೆದವರು ಜಿ.ಎಚ್. ಹನ್ನೆರಡುಮಠ. ನಾಟಕವನ್ನು ಆಸಕ್ತಿಪೂರ್ಣವಾಗಿ ಅಷ್ಟೇ ಕಲಾತ್ಮಕವಾಗಿ ನಿರ್ದೇಶಿಸಿದವರು ಮಾಲತೇಶ ಬಡಿಗೇರ.

ಪುರಾಣ ಪ್ರಸಿದ್ಧ ಜಮದಗ್ನಿ-ರೇಣುಕೆಯರ ಸುತ್ತ ಹೆಣೆದ ಈ ಕಥೆಯ ವಿಶೇಷತೆಗಳೆಂದರೆ ಮಾನವೀಯ ನೆಲೆಯ ಸ್ಪರ್ಶ, ಸಹಜತೆಗೆ ಹತ್ತಿರವಾದ ಪಾತ್ರಚಿತ್ರಣಗಳು, ದೇಸಿ ಆಡುಭಾಷೆಯ ಬಳಕೆ, ಹೊಸ ಸನ್ನಿವೇಶಗಳ ಸೃಷ್ಟಿ, ಕಥೆಯ ವಿಭಿನ್ನ ನಡಿಗೆ, ನಿರೂಪಣೆಯ ಹೊಸ ಆಯಾಮ ಮುಂತಾದವು.
ಪುರಾಣ ಕಥೆಗಳಲ್ಲಿದ್ದಂತೆ ಯಾವುದೇ ದೈವಿಕತೆಯ ಪ್ರದರ್ಶನವಾಗಲೀ ಅಲೌಕಿಕ ಕಲ್ಪನೆಗಳಾಗಲೀ ಇರದೆ ಮನುಷ್ಯರಿಗೆ ಹತ್ತಿರವಾದ ಕಥೆ ಇದಾಗಿದೆ.

ನಾವು ಕೇಳಿರುವಂತೆ ಜಮದಗ್ನಿ ಮಹರ್ಷಿ ರೇಣುಕೆಯನ್ನು ಶಂಕಿಸಿ, ಮಗ ಪರಶುರಾಮನಿಗೆ ಆಕೆಯ ತಲೆಕಡಿಯುವಂತೆ ಆಜ್ಞಾಪಿಸುವುದು, ಅದರಂತೆ ಪಿತೃವಚನ ಪರಿಪಾಲಕನಾದ ಅವನು ಹಿಂದೆ ಮುಂದೆ ಆಲೋಚಿಸದೆ ತಾಯಿಯ ತಲೆಯನ್ನು ಕಡಿದುಹಾಕುವುದು, ಆನಂತರ ಜಮದಗ್ನಿ ಮರಳಿ ಅವಳನ್ನು ಬದುಕಿಸುವ ಶಾಪ-ವಿಶಾಪದ ಈ ಪುರಾಣದ ಕಥೆಯನ್ನು ಯಾರೂ ಪ್ರಶ್ನಿಸುವಂತಿಲ್ಲ.

ಹೀಗೆ ಪುರಾಣಗಳಲ್ಲಿ ತರ್ಕ-ವಿತರ್ಕ, ಚರ್ಚೆ-ಪ್ರಶ್ನೆಗಳಿಗೆ ಅವಕಾಶವೇ ಇಲ್ಲ. ಎಲ್ಲವನ್ನೂ ತಲೆಬಾಗಿ ಒಪ್ಪಿಕೊಳ್ಳುವ ಪರಿಸ್ಥಿತಿ. ಹೀಗಾಗಿ ನಮಗೆ ಅಲ್ಲಿನ ಕಥೆ, ಪಾತ್ರಗಳು, ಆವರಣ ಎಲ್ಲವೂ ದೂರ ದೂರ. ಆದರೆ ಅದೇ ಕಥೆಯನ್ನು ಜಾನಪದೀಯ ನೆಲೆಯಲ್ಲಿ ಕಾಣಿಸಿದ ಇಲ್ಲಿನ ಕಥಾನಕದಲ್ಲಿ ಪಾತ್ರಗಳು ನಮ್ಮ ನಿಲುಕಿನ ಪರಿಧಿಯಲ್ಲಿವೆ.

ಜಮದಗ್ನಿ ಋಷಿಯಾದರೂ ಇಲ್ಲಿ ಮನುಷ್ಯ ಸಹಜ ಬಾಯಿಚಪಲದ,ಆಡುಮಾತಿನಲ್ಲಿ ಬಡಬಡಿಸುವ ಸಾಮಾನ್ಯ ಮನುಷ್ಯನಂತೆ ಕಾಣಿಸಿಕೊಂಡಿರುವುದರಿಂದ ನಮ್ಮ ನಡುವಿನ ಒಬ್ಬ ವ್ಯಕ್ತಿಯಾಗಿ ಗೋಚರಿಸುತ್ತಾನೆ. ಇವನ ಶಿಷ್ಯರು, ಕಾಡಿನಗರ್ಭದಲ್ಲಿ ನಿರುಮ್ಮಳವಾಗಿ ಬದುಕುತ್ತಿದ್ದ ಬುಡಕಟ್ಟು ನಿವಾಸಿಗಳನ್ನು ಒಕ್ಕಲೆಬ್ಬಿಸಿ, ಅವರ ಜಾಗದಲ್ಲಿ ಆಶ್ರಮ, ವನ ನಿರ್ಮಿಸಿಕೊಂಡು, ಕಾಡನ್ನು ಇಡಿಯಾಗಿ ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಕಾಡನ್ನು ಸಂರಕ್ಷಿಸುತ್ತ, ಇತರರಿಗೆ ಯಾವ ತೊಂದರೆಯನ್ನೂ ಕೊಡದೆ, ತಮ್ಮ ಪಾಡಿಗೆ ತಾವು ಅಮಾಯಕರಾಗಿ ಬಾಳುತ್ತಿದ್ದ ಜೀವಿಗಳ ಮೇಲೆ ಆಕ್ರಮಣ ಮಾಡಿ ಹಿಂಸಿಸಲು ಹೊರಟ ಈ ಶಿಷ್ಯರನ್ನು ತಾಯಿಹೃದಯದ ರೇಣುಕೆ ತಡೆಯುತ್ತಾಳೆ. ಅವಳ ಕರುಣಾ ಸ್ವಭಾವ ಕಂಡ ಕಾಡಿನ ಜನ ಅವಳಿಗೆ ಶರಣು ಹೋಗುತ್ತಾರೆ. ಇದರಿಂದ ಜಮದಗ್ನಿಯ ಕೋಪ-ಅಸಹನೆ ಭುಗಿಲೇಳುತ್ತದೆ.


ಭ್ರಮಾಧೀನ ಸ್ಥಿತಿಯಲ್ಲಿದ್ದ ಪರಶುರಾಮ ಒಮ್ಮೆ ಕೊಡಲಿ ಬೀಸಿದಾಗ, ಆಕಸ್ಮಿಕವಾಗಿ ಅದರ ಕಾವು ರೇಣುಕೆಯ ಕೊರಳಿಗೆ ತಗುಲಿ ಅವಳು ಸಾವನ್ನಪ್ಪುತ್ತಾಳೆ. ಅದನ್ನು ಕಂಡ ಕಾಡಿನ ಜನ ‘ಎಲ್ಲರ ಅವ್ವ’ನಂತಿದ್ದ ಅಮ್ಮ ಮರಣಿಸಿದ್ದನ್ನು ಕಂಡು ಕಂಗಾಲಾಗಿ ಅಳುತ್ತಾರೆ. ಪರಶುರಾಮನೂ ಗಾಬರಿಯಾಗಿ ಸ್ತಂಭೀಭೂತನಾದಾಗ, ಅಲ್ಲಿಗೆ ಬಂದ ಜಮದಗ್ನಿಯೂ ಹೆಂಡತಿಗೆ ಒದಗಿದ ದುರ್ಮರಣ ಕಂಡು ದುಃಖಿಸುತ್ತಾನೆ.

ಜನರೆಲ್ಲ ಅವಳನ್ನು ‘ಅಮೃತ’ ಕೊಟ್ಟು ಬದುಕಿಸಿರೆಂದು ಬೇಡಿದಾಗ, ಅವಳೇ ನನ್ನ ಅಮೃತ, ಬಾಳಿನ ಕಾಮಧೇನು ಎಂದು ಹತಾಶನಾಗಿ ತನ್ನ ಅಸಹಾಯಕತೆ ವ್ಯಕ್ತಪಡಿಸುತ್ತಾನೆ. ಕೋಪಿಷ್ಟನಾದ ತಾನು ಇದುವರೆಗೂ ಅವಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲವೆಂಬ ಪಶ್ಚಾತ್ತಾಪದಿಂದ ಕುಸಿಯುತ್ತಾನೆ. ಎಲ್ಲರ ಅಮ್ಮನಾದ ಆ ‘ಎಲ್ಲಮ್ಮ’ನಿಗೆ ಕಾಡಜನ ಉಘೇ ಉಘೇ ಎಂದು ಜಯಕಾರ ಹಾಕುತ್ತಾರೆ.

ನಾಟಕಕಾರರು ಹೀಗೆ ಇಲ್ಲಿ ‘ಸವದತ್ತಿ ಯಲ್ಲಮ್ಮ’ ದೇವತೆಯ ಉಗಮದ ಕಥೆಯನ್ನು ಬಹುಸಹಜ ರೀತಿಯಲ್ಲಿ ಬೆಳೆಸುತ್ತ ರೇಣುಕೆಯ ಪಾತ್ರಚಿತ್ರಣವನ್ನು ವಿಶಿಷ್ಟವಾಗಿ ಕಂಡರಿಸಿದ್ದಾರೆ. ಜಮದಗ್ನಿ ಋಷಿಯ ‘ಬ್ರಹ್ಮರ್ಷಿ’ ಪದವಿಯ ಶ್ರೇಷ್ಠತೆಯ ವ್ಯಸನದೊಂದಿಗೆ ಅವನ ಕಡುಗೋಪದ ಸ್ವಭಾವ, ಹೆಂಡತಿಯ ಮನಸ್ಸಿನ ಸೂಕ್ಷ್ಮ ಬಯಕೆಗಳನ್ನು ಅರಿಯದಲಾರದ ಒರಟುತನ, ಜಿಹ್ವಾಚಾಪಲ್ಯ, ಇನ್ನಿತರ ಸಣ್ಣತನದ ವರ್ತನೆಗಳಿಂದ ಒಡಗೂಡಿದ ಪಾತ್ರಚಿತ್ರಣ ವಾಸ್ತವ ಸ್ತರದಲ್ಲಿ ನಿಲ್ಲುತ್ತದೆ.

ಗಂಧರ್ವ ದಂಪತಿಗಳ ವಿಹಾರ ನೋಡುತ್ತ ಭಾವುಕತೆಯಿಂದ ಮೈಮರೆತ ಒಂದುಕಾಲದ ರಾಜಕುಮಾರಿ ರೇಣುಕೆಯ ಕನಸುಗಳು ಅರಸಿಕ ಗಂಡನಿಂದ ಛಿದ್ರಗೊಳ್ಳುವ ಸನ್ನಿವೇಶ ಮತ್ತು ಹೆಣ್ಣಿನ ಅಂತರಂಗದ ಒಳಮನಸ್ಸಿನ ಬಿಕ್ಕುಗಳ ಸ್ವಗತ ಹೃದಯಸ್ಪರ್ಶಿಯಾಗಿದ್ದು, ನೋಡುಗರೆದೆ ಮಿಡಿಯುತ್ತದೆ.
ಕಾಡುಜನರ ಸ್ವಚ್ಛಂದ ಕುಣಿತ, ಅವರ ಮೇಲೆ ಶಿಷ್ಯರ ಹಾರಾಟ, ಕದನದ ದೃಶ್ಯಗಳು ಪರಿಣಾಮಕಾರಿ  ಹಿನ್ನಲೆಯ ಧ್ವನಿಯೊಂದಿಗೆ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಯಿತು.

ಯುವ ಸನ್ಯಾಸಿಯರು ರೇಣುಕೆಗಾಗಿ ಮರುಗುತ್ತ, ಜಮದಗ್ನಿಯನ್ನು ಲೇವಡಿ ಮಾಡುವುದು ಕೊಂಚ ಅತಿಯೆನಿಸಿದರೂ ಅವರ ಚೇಷ್ಟೆಯ ಮಾತುಗಳಿಗೆ ನಗು ಬಾರದಿರದು. ನಾಟಕದಲ್ಲಿ ಬಳಸಲಾದ ಉತ್ತರ ಕರ್ನಾಟಕದ ದೇಸೀ ಭಾಷೆಯ ಸೊಗಡಿನ ಸಂಭಾಷಣೆಗಳು ರಂಜನೀಯವಾಗಿದ್ದು ಮನಮುಟ್ಟುತ್ತವೆ. ಕಾಡಿನ ಜನರ ಪರಿಸರ ಪ್ರೇಮ, ನಾಡಜನರ ಕಾಡುಕಡಿದು ನಾಡಾಗಿಸುವ ಹುನ್ನಾರ, ಇಂದಿಗೂ ಪ್ರಸ್ತುತವಾಗಿರುವ ಅರಣ್ಯನಾಶದ ಅನಪೇಕ್ಷಿತ ಬೆಳವಣಿಗೆಯ ಕೆಡುಕನ್ನು ನಾಟಕ ಸಮರ್ಥವಾಗಿ ಬಿಂಬಿಸಿತು.

ಆದರೆ ಮೂಲನಿವಾಸಿಗಳನ್ನು ಜಾತಿಯ ಹೆಸರಿನಲ್ಲಿ ದಮನಿಸಿ, ಶಿಷ್ಟರು ಕ್ರೌರ್ಯ ಮೆರೆಯುವ ಸನ್ನಿವೇಶ ನಾಟಕದ ಹರಿವಿಗೆ ಎಷ್ಟು ಪೂರಕ ಎಂಬುದನ್ನು ನಾಟಕಕಾರರೇ ವಿವರಿಸಬೇಕು. ಇಲ್ಲಿ ರೇಣುಕೆ, ಎಲ್ಲಮ್ಮನಾಗಿ ಅನಾವರಣಗೊಳ್ಳುವ ಸಂದರ್ಭ ವಿಶೇಷತೆಯನ್ನು, ಮಹತ್ವವನ್ನು ಪಡೆದುಕೊಳ್ಳುತ್ತದೆಯೇ ಹೊರತು ವರ್ಗ ಸಂಘರ್ಷದ, ಜಾತಿಯ ಮೇಲಾಟಗಳ ಅನಿವಾರ್ಯತೆ ಕಾಣುವುದಿಲ್ಲ.

ನಾಟಕದ ಅಂತ್ಯದಲ್ಲಿ ಜಮದಗ್ನಿ ರೇಣುಕೆಯ ಶವದ ಮುಂದೆ ಕಣ್ಣೀರು ಹಾಕುತ್ತ, ತನ್ನ ಜಾತಿ-ಪ್ರತಿಷ್ಠೆಗಳ ಅಹಂ ಅನ್ನು ಅವಳ ಸರ್ವಜನ ಪ್ರೀತಿ, ಸರ್ವಸಮನ್ವಯತೆ ಮುರಿದುಹಾಕಿತೆಂದು ತನ್ನ ಪುರಷಾಹಂಕಾರ ವಿಸರ್ಜಿಸಿ ಪಶ್ಚಾತ್ತಾಪ ಪಡುವ ಅಂಕ ಮನಕರಗಿಸಿತು. ಅವಳನ್ನು ಮರಳಿ ಬದುಕಿಸುವ ಶಕ್ತಿ ತನಗಿಲ್ಲವೆಂದು ಮರುಗುವ ಜಮದಗ್ನಿ ಯಾವ ಪವಾಡವನ್ನೂ ಮಾಡದೆ, ಸಾಮಾನ್ಯ ಮನುಷ್ಯನಂತೆ ಕೈಚೆಲ್ಲುವ ಕಲ್ಪನೆಯಂತೂ ಸೊಗಸಾಗಿದೆ. ಇದೇ ನಾಟಕದಲ್ಲಿ ಹೆಚ್ಚು ಆಪ್ತವಾಗುವ ಸನ್ನಿವೇಶ ಕೂಡ. ವಿಸ್ಮೃತಿಯಲ್ಲಿ ಹೊಯ್ದಾಡುವ ಪರಶುರಾಮನ ಸುತ್ತ ರುಂಡವಿಲ್ಲದ ಮುಂಡಗಳು ಗಿರಕಿ ಹೊಡೆಯುವ ಸಾಂಕೇತಿಕ ದೃಶ್ಯದಲ್ಲಿ ನಿರ್ದೇಶಕರ ಸೃಜನಶೀಲ ಪ್ರತಿಭೆ ಸುವ್ಯಕ್ತ.

ವಿಶಿಷ್ಟ ವಸ್ತ್ರವಿನ್ಯಾಸ, ಪ್ರಸಾಧನ, ರಂಗಸಜ್ಜಿಕೆ, ಪರಿಕರಗಳು, ಸಂಗೀತ(ವಿಜಯ್ ಬಿ.)ದೊಂದಿಗೆ ವರ್ಣರಂಜಿತವಾಗಿ ಮೂಡಿಬಂದ ಈ ಪ್ರಯೋಗ ನೋಡುಗರನ್ನು ಆಕರ್ಷಿಸಿತು. ಪ್ರತಿ ಅಂಕದಲ್ಲೂ ನಿರ್ದೇಶಕರ ಲವಲವಿಕೆಯ ದೃಶ್ಯ ಹೆಣಿಗೆ, ಪರಿಣಾಮಕಾರಿಯಾಗಿ ಕಾಣಿಸಿದ ಬಗೆ ಸ್ತುತ್ಯಾರ್ಹ.
ಪ್ರತಿಯೊಬ್ಬ ನಟರೂ ಉತ್ತಮ ಅಭಿನಯ ನೀಡುವಲ್ಲಿ ಶ್ರಮಿಸಿದರು.

ಅದರಲ್ಲಿ ಜಮದಗ್ನಿಯಾಗಿ ಆರ್. ನರಹರಿ ಪಾತ್ರದ ಒಳಹೊಕ್ಕು ಉತ್ತಮ ನಟನೆ ತೋರುವಲ್ಲಿ ಸಫಲರಾದರು. ಪರಶುರಾಮನ ಪಾತ್ರದಲ್ಲಿ ಸಾಗರ್ ಗಮನ ಸೆಳೆದರು. ರೇಣುಕೆಯಾಗಿ ನಯನಾ ಎಂ. ಉತ್ತಮ ಪ್ರಯತ್ನ ಮಾಡಿದ್ದರೂ ತಮ್ಮ ಪಾತ್ರದಲ್ಲಿ ಇನ್ನಷ್ಟು ಭಾವ ತುಂಬಬಹುದಿತ್ತು. ಕಾರಣ-ಚಾರಣರಾಗಿ ವಿದ್ಯಾ, ವೀಣಾ ಮತ್ತು ಸನ್ಯಾಸಿನಿಯರಾಗಿ ಯಾಮಿನಿ, ಅಶ್ವಿನಿ ಮತ್ತು ಅನುರಾಧಾ ಚೂಟಿತನ-ಲವಲವಿಕೆ ತೋರಿದರು. ಒಟ್ಟಾರೆ ವಿದ್ಯಾರ್ಥಿಗಳ ಈ ಪ್ರಯೋಗ ಉತ್ತಮವಾಗಿತ್ತೆನ್ನಲು ಅಡ್ಡಿಯಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT