ADVERTISEMENT

ಹೊಸ ಹುರುಪಿನ ‘ಇಂಡಿಯನ್‌ ಸಿನಿಮಾ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಹೊಸ ಹುರುಪಿನ ‘ಇಂಡಿಯನ್‌ ಸಿನಿಮಾ’
ಹೊಸ ಹುರುಪಿನ ‘ಇಂಡಿಯನ್‌ ಸಿನಿಮಾ’   

‘ಇಂಡಿಯನ್ ಸಿನಿಮಾ ಎನ್ನುವುದು ಹಿಂದೂ ಮಹಾ ಸಾಗರ’ ಎಂದು ಗುಡುಗುವ ಹಾಗೆ ಹೇಳಿದರು ಹಿರಿಯ ನಟ ರಾಜೇಶ್. ಆ ಧ್ವನಿಗೆ ಅವರು ತೊಟ್ಟಿದ್ದ ಕಡುಗಪ್ಪು ಕನ್ನಡಕವೂ ಕೊಂಚ ಅದುರಿತು. ಅವರ ಮಾತಿನಲ್ಲಿ ಹೆಮ್ಮೆಯೊಟ್ಟಿಗೆ ಆಕ್ರೋಶವೂ ಮಡುಗಟ್ಟಿತ್ತು. ‘ಐವತ್ತು ಅರವತ್ತರ ದಶಕದಲ್ಲಿ ಎಂತೆಂಥ ಪ್ರತಿಭಾವಂತರಿದ್ದರು! ಹೊನ್ನಪ್ಪ ಭಾಗವತ, ಆಮೇಲೆ ಬಂದ ರಾಜಕುಮಾರ್, ಕಲ್ಯಾಣ ಕುಮಾರ್‌, ಬಾಲಕೃಷ್ಣ, ನರಸಿಂಹರಾಜು..’ ಹೀಗೆ ಪಟ್ಟಿ ಮಾಡುತ್ತಲೇ ಹೋದರು.

‘ಇವರೆಲ್ಲ ಕನ್ನಡ ಸಿನಿಮಾವನ್ನು ಕೋಟೆಯ ಹಾಗೆ ಕಟ್ಟಿದ ಕಟ್ಟಾಳುಗಳು. ಆದರೆ ಇಂದು ಪರಿಸ್ಥಿತಿ ಏನಾಗಿದೆ’ ಎನ್ನುವಲ್ಲಿ ಅವರ ಮಾತು ಹಳಹಳಿಕೆಯ ಹಳಿ ಹಿಡಿದಿತ್ತು. ‘ಇಂದಿನ ಸಿನಿಮಾಗಳಲ್ಲಿ ಬರೀ ಮಚ್ಚು, ಕೊಚ್ಚು, ರಕ್ತದ ಕೋಡಿ ಅಷ್ಟೇ ಇರುತ್ತದೆ. ಯಾವ ಸಂದೇಶವೂ ಇರುವುದಿಲ್ಲ’ ಎನ್ನುವುದು ಅವರ ಸಿಟ್ಟಿಗೆ ಕಾರಣ.

ಪಕ್ಕದಲ್ಲೇ ಕೂತಿದ್ದ ಹಿರಿಯ ನಟಿ ಗಿರಿಜಾ ಲೋಕೇಶ್‌ ಅವರೇ ‘ಆ ಕಾಲದಲ್ಲಿಯೂ ಫೈಟಿಂಗ್‌ ಎಲ್ಲ ಇತ್ತಲ್ಲ ಸರ್’ ಎಂದು ತಿದ್ದಲು ಯತ್ನಿಸಿದರೂ ರಾಜೇಶ್‌ ಅವರು ಮುಂದುವರಿದೇ ಇದ್ದರು. ಆ ವೇದಿಕೆಯಲ್ಲಿ ಅವರ ಇಕ್ಕೆಲಗಳಲ್ಲಿ ಗಿರಿಜಾ ಲೋಕೇಶ್‌ ಮತ್ತು ಜಯಲಕ್ಷ್ಮಿ ಕೂತಿದ್ದರು. ಅವರ ಪಕ್ಕದಲ್ಲಿ ಇನ್ನಷ್ಟು ತರುಣ ನಟರೂ ಆಸೀನರಾಗಿದ್ದರು.

ADVERTISEMENT

ಇಂಥದ್ದೊಂದು ಹಳಹಳಿಕೆ ಮತ್ತು ಹೊಸಚಿಗುರಿನ ಹುರುಪಿಗೆ ಸಾಕ್ಷಿಯಾಗಿದ್ದು ‘ಇಂಡಿಯನ್ ಸಿನಿಮಾ’ ಪತ್ರಿಕಾಗೋಷ್ಠಿ.

ರಾಜೇಶ್‌ ಅವರ ಮಾತಿನಲ್ಲಿಯೇ ಹೇಳುವುದಾದರೆ ಭಾರತೀಯ ಸಮುದ್ರದ ವೈಶಾಲ್ಯಕ್ಕೆ ಕನ್ನಡಿ ಹಿಡಿಯುವ ಸಾಹಸಕ್ಕೆ ಕೈಹಾಕಿರುವುದು ಆಟೊ ರಾಜ ಎಂಬ ತರುಣ ನಿರ್ದೇಶಕ. ಕಳೆದ ಐದು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಅವರು ಈಗಾಗಲೇ ‘ಬಾಹುಬಲಿಗಳು’ ಎಂಬ ಸಿನಿಮಾವನ್ನೂ ನಿರ್ದೇಶಿಸಿದ್ದಾರೆ. ಆದರೆ ಅದು ಇನ್ನೂ ಬಿಡುಗಡೆಯಾಗಿಲ್ಲ.

ಭಾರತೀಯ ಸಿನಿಮಾ ಬೆಳೆದು ಬಂದ ದಾರಿಯನ್ನು ಸಿನಿಮಾ ಮೂಲಕ ತೋರಿಸಬೇಕು ಎಂಬ ಅವರ ಕನಸಿನ ಫಲವೇ ‘ಇಂಡಿಯನ್‌ ಸಿನಿಮಾ’. ಇದು ಐದು ಭಾಗಗಳಲ್ಲಿ ನಿರ್ಮಾಣಗೊಳ್ಳಲಿದೆಯಂತೆ. ಮೊದಲ ಭಾಗದ ಚಿತ್ರೀಕರಣ ಈಗಾಗಲೇ ಅರ್ಧದಷ್ಟು ಮುಗಿದಿದೆ. ಈ ಭಾಗದಲ್ಲಿ ಭಾರತದ ಹದಿನೆಂಟು ಭಾಷೆಗಳ ಚಿತ್ರರಂಗಗಳ ಇತಿಹಾಸನ್ನೂ ತೋರಿಸು ತ್ತಿದ್ದಾರೆ. ಮುಂದಿನ ಭಾಗಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಒಂದೊಂದು ಭಾಷೆಯ ಸಿನಿಮಾ ಬೆಳವಣಿಗೆಯ ಕುರಿತು ಹೇಳುವ ಯೋಚನೆ ಅವರದ್ದು.

‘ತನ್ನ ಈ ಪ್ರಯತ್ನಕ್ಕೆ ಕಲಾವಿದರ ಬೆಂಬಲವೂ, ಹಣ ಬೆಂಬಲವೂ ಸಾಕಷ್ಟು ದೊರೆತಿದೆ’ ಎಂದು ಖುಷಿಯಿಂದಲೇ ಹೇಳಿಕೊಂಡರು ರಾಜ. ಕಾರ್ತಿಕ್‌ ವೆಂಕಟೇಶ್‌ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ನಟಿ ಶ್ರೀದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಾಡು ಚಿತ್ರದಲ್ಲಿ ಇರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.