ADVERTISEMENT

‘ಸಾಹಿತ್ಯ ಸಂಜೆ’ಯ ಚಂದ ಗಂಧ

ಪದ್ಮನಾಭ ಭಟ್ಟ‌
Published 1 ಮಾರ್ಚ್ 2016, 19:58 IST
Last Updated 1 ಮಾರ್ಚ್ 2016, 19:58 IST
‘ಸಾಹಿತ್ಯ ಸಂಜೆ’ಯ ಮೊದಲ ಕಾರ್ಯಕ್ರಮದಲ್ಲಿ ಪದ್ಯ ವಾಚಿಸುತ್ತಿರುವ ಚಂದ್ರಶೇಖರ ಕಂಬಾರ
‘ಸಾಹಿತ್ಯ ಸಂಜೆ’ಯ ಮೊದಲ ಕಾರ್ಯಕ್ರಮದಲ್ಲಿ ಪದ್ಯ ವಾಚಿಸುತ್ತಿರುವ ಚಂದ್ರಶೇಖರ ಕಂಬಾರ   

ಸಿನಿಮಾ ಮಾಧ್ಯಮದ ಬಗ್ಗೆ ಅರಿವು ಮೂಡಿಸುವ ಮತ್ತು ಉತ್ತೇಜಿಸುವ ಉದ್ದೇಶದಿಂದ 1972ರಲ್ಲಿ ಹುಟ್ಟಿಕೊಂಡ ಸಂಸ್ಥೆ ಸುಚಿತ್ರಾ ಫಿಲ್ಮ್‌ ಸೊಸೈಟಿ.
ಸಾಹಿತ್ಯ ಸಂಜೆ ಸುಚಿತ್ರಾಗೆ ಸಾಹಿತ್ಯಿಕ ಮಹತ್ವವನ್ನು ದೊರಕಿಸಿಕೊಟ್ಟ ಪ್ರಮುಖ ಕಾರ್ಯಕ್ರಮ. 2010 ಏಪ್ರಿಲ್ ತಿಂಗಳಿಂದ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಈ ‘ಸಾಹಿತ್ಯ ಸಂಜೆ’ ಕಾರ್ಯಕ್ರಮವು ಇಲ್ಲಿಯವರೆಗೂ ಅವಿರತವಾಗಿ ನಡೆದುಕೊಂಡು ಬಂದಿದೆ.

ಈ ಸಾಹಿತ್ಯ ಪಯಣದ ಉದ್ದಕ್ಕೂ ಜತೆಯಾದವರು ಮತ್ತು ಇಂದಿಗೂ ಸಾಹಿತ್ಯ ಸಂಜೆಯ ರೂಪಣೆಯಲ್ಲಿ ತೊಡಗಿಸಿಕೊಂಡಿರುವವರು ಆನಂದ ಸಭಾಪತಿ.
ಸಾಹಿತ್ಯ ಸಂಜೆ ಆರಂಭವಾದ ಸಂದರ್ಭವನ್ನು ಅವರು ಹೀಗೆ ನೆನಪಿಸಿಕೊಳ್ಳುತ್ತಾರೆ:‘ಸುಚಿತ್ರಾದಲ್ಲಿ ಸಿನಿಮಾ ತೋರಿಸುವುದನ್ನು ಬಿಟ್ಟರೆ ಉಳಿದ ಕಾರ್ಯಕ್ರಮ ಎಂದರೆ ಯಾವಾಗಲಾದರೂ ನಾಟಕೋತ್ಸವವನ್ನು ಆಯೋಜಿಸಲಾಗುತ್ತಿತ್ತು. ಇದರ ಹೊರತಾಗಿಯೂ ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿತ್ತು. ಇದೇ ಉದ್ದೇಶದಿಂದ 2010 ಜನವರಿಯಲ್ಲಿ ತಿಂಗಳಿಗೊಂದು ನಾಟಕದ ಓದು ಕಾರ್ಯಕ್ರಮವನ್ನು ಪ್ರಾರಂಭಿಸಿದೆವು.

ಪ್ರತಿ ತಿಂಗಳು ಹೊಸ ನಾಟಕಗಳನ್ನು ಓದಿ ಚರ್ಚಿಸುವ ಕಾರ್ಯಕ್ರಮ ಅದು. ಐದಾರು ತಿಂಗಳು ನಡೆಸಿದೆವು. ಆಗ ನಮ್ಮಲ್ಲಿ ವಿದ್ಯಾಶಂಕರ್‌, ವಿಜಯಾ, ಮನು ಚಕ್ರವರ್ತಿ ಅವರೆಲ್ಲರೂ ಟ್ರಸ್ಟಿಗಳಾಗಿದ್ದರು. ಪ್ರತಿ ಶನಿವಾರ ಬರೀ ನಾಟಕದ ಓದು ಅಂದರೆ ನಡೆಸುವುದು ಕಷ್ಟ ಆಗಬಹುದು. ಆದ್ದರಿಂದ ಸಾಹಿತ್ಯ ಸಂಜೆ ಎಂದು ಆರಂಭಿಸೋಣ ಎಂದು ತೀರ್ಮಾನಿಸಿದೆವು. ಸಿನಿಮಾ, ರಂಗಭೂಮಿ, ಸಾಹಿತ್ಯ ಹೀಗೆ ಎಲ್ಲವನ್ನೂ ಒಳಗೊಳ್ಳಬೇಕು ಎಂದು ರೂಪುರೇಷೆ ಮಾಡಿದೆವು’ ಎಂದು ಸಾಹಿತ್ಯ ಸಂಜೆ ರೂಪುತಳೆದ ಬಗೆಯನ್ನು ಅವರು ವಿವರಿಸುತ್ತಾರೆ.

ಹೀಗೆ ಆರಂಭವಾದ ಸಾಹಿತ್ಯ ಸಂಜೆಯ ನಿರ್ವಹಣೆಯ ಜವಾಬ್ದಾರಿಯನ್ನು ‘ಸಂಚಯ’ ಪತ್ರಿಕೆಯ ಡಿ.ವಿ. ಪ್ರಹ್ಲಾದ್‌ ವಹಿಸಿಕೊಂಡರು. ಹೀಗೆ ಸಾಹಿತ್ಯ ಸಂಜೆ ಆರಂಭಗೊಂಡಿತು. ‘ಸಾಹಿತ್ಯ ಸಂಜೆಯ ಮೊದಮೊದಲ ಕಾರ್ಯಕ್ರಮಗಳು ನಡೆದಿದ್ದು ಒಂದು ಪುಟ್ಟ ಗುಡಿಸಲಿನಂತಹ ಜಾಗದಲ್ಲಿ. ಸಗಣಿ ನೀರು ಹಾಕಿ ಸಾರಿಸಿದ ನೆಲದ ಆ ಮನೆಗೆ ನುಡಿಮನೆ ಎಂದು ಹೆಸರಿಟ್ಟಿದ್ದೆವು. ಆದರೆ ಅಂಥ ಸ್ಥಳದಲ್ಲಿಯೂ ಒಳಗೆ ಸ್ಥಳವಿಲ್ಲದೇ ಹೊರಗೆಲ್ಲಾ ನಿಂತು ನೋಡುವಷ್ಟು ಜನರು ಬಂದಿದ್ದರು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಸಾಹಿತ್ಯ ಸಂಜೆಯ ಮೊದಲ ಕಾರ್ಯಕ್ರಮ ನಡೆದಿದ್ದು ಚಂದ್ರಶೇಖರ ಕಂಬಾರರ ‘ಶಿವಾಪುರ’ ಪದ್ಯದ ಓದಿನೊಂದಿಗೆ. ಅದರ ನಂತರ ಪ್ರತಿ ಶನಿವಾರವೂ ನಿಯಮಿತವಾಗಿ ಸಾಹಿತ್ಯದ ಓದಿನ ಕಾರ್ಯಕ್ರಮ ನಡೆಯತೊಡಗಿತು. ಆಗ ಸುಚಿತ್ರಾದ ಅಧ್ಯಕ್ಷರಾಗಿದ್ದ ವಿ. ಎನ್‌. ಸುಬ್ಬರಾವ್‌ ಅವರೂ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿದರು.

ಪ್ರಾರಂಭದ ಒಂದು ವರ್ಷ ಡಿ.ವಿ. ಪ್ರಹ್ಲಾದ್‌ ಸಾಹಿತ್ಯ ಸಂಜೆಯನ್ನು ತುಂಬ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕೊನೆಗೆ ವೈಯಕ್ತಿಕ ಕಾರಣಗಳಿಂದ ಅವರು ಹಿಂದೆ ಸರಿದ ನಂತರವೂ ಸಾಹಿತ್ಯ ಸಂಜೆಯನ್ನು ಮುಂದುವರಿಸಿಕೊಂಡು ಬರಲಾಯಿತು. ನಂತರದ ದಿನಗಳಲ್ಲಿ ಪ್ರತಿ ಶನಿವಾರದ ಸಾಹಿತ್ಯ ಸಂಜೆಯೊಟ್ಟಿಗೆ ತಿಂಗಳಿಗೊಂದು ವಿಶೇಷ ಉಪನ್ಯಾಸ ಮಾಲಿಕೆಯನ್ನೂ ಆರಂಭಿಸಲಾಯಿತು.

ಹಳೆಯ ಪಠ್ಯಗಳನ್ನು ಮರುಓದಿಗೆ ಒಳಪಡಿಸಿ ಅವುಗಳೊಂದಿಗೆ ಅನುಸಂಧಾನ ನಡೆಸುವ ವಿಶಿಷ್ಟ ಉಪನ್ಯಾಸ ಮಾಲಿಕೆ ಅದಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ನಡೆಯುವ ಈ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಪರಿಣತರು ಮಾತನಾಡುತ್ತಿದ್ದರಲ್ಲದೇ ಅವರೊಂದಿಗೆ ಸಂವಾದವೂ ಇರುತ್ತಿತ್ತು. ಈ ಉಪನ್ಯಾಸ ಮಾಲಿಕೆ ಸುಮಾರು ಎರಡು ವರ್ಷಗಳ ಕಾಲ ನಡೆಯಿತು. ನಂತರ ಈ ಮಾಲಿಕೆಯ ಉಪನ್ಯಾಸಗಳನ್ನು ಸೇರಿಸಿ ‘ಪಠ್ಯಾನುಸಂಧಾನ’ ಎನ್ನುವ ಪುಸ್ತಕವನ್ನೂ ಪ್ರಕಟಿಸಲಾಯಿತು.

‘ಬರಬರುತ್ತಾ ಸಾಹಿತ್ಯಕ್ಕಷ್ಟೇ ಸೀಮಿತಗೊಂಡಿದ್ದ ಸಾಹಿತ್ಯ ಸಂಜೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿತು. ಗಿರೀಶ ಕಾಸರವಳ್ಳಿ, ಪಿ. ಶೇಷಾದ್ರಿ ಅವರೆಲ್ಲ ಸಿನಿಮಾ ಮಾಧ್ಯಮದ ಕುರಿತು ಮಾತನಾಡಿದರು. ವಿಜಯಾ ಅನೇಕ ಮಹಿಳಾ ಹೋರಾಟಗಾರ್ತಿಯರನ್ನು, ಚಳವಳಿಗಾರರನ್ನು ಕರೆದುಕೊಂಡು ಬಂದು ಸಾಹಿತ್ಯ ಸಂಜೆಯಲ್ಲಿ ಮಾತನಾಡಿಸಿದರು. ಪರಿಸರ, ವಿಜ್ಞಾನ, ರಂಗಭೂಮಿ, ಸಿನಿಮಾ, ಪತ್ರಿಕೋದ್ಯಮ ಹೀಗೆ ಹಲವು ವಿಷಯಗಳ ಬಗ್ಗೆ ಮೌಲ್ಯಯುತವಾದ ಉಪನ್ಯಾಸಗಳು ಸಾಹಿತ್ಯಸಂಜೆಯಲ್ಲಿ ನಡೆದಿವೆ’ ಎನ್ನುತ್ತಾರೆ ಆನಂದ ಸಭಾಪತಿ.

ಸಣ್ಣಕತೆಗಳ ಸರಣಿ
2014ರ ಏಪ್ರಿಲ್‌ನಿಂದ ಸಾಹಿತ್ಯ ಸಂಜೆಯಲ್ಲಿ ಸಣ್ಣ ಕತೆಗಳ ಓದನ್ನು ಆರಂಭಿಸಲಾಯಿತು. ಮೊದಲ ಕೆಲವು ತಿಂಗಳು ಕತೆಗಾರ, ರಂಗಕರ್ಮಿ ಮೌನೇಶ ಬಡಿಗೇರ ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರರ ಸಣ್ಣ ಕತೆಗಳನ್ನು ಓದಿದರು. ಜೂನ್‌ ತಿಂಗಳಲ್ಲಿ ‘ಮಾಸ್ತಿ ಮಾಸ’ ಎಂಬ ಕಾರ್ಯಕ್ರಮವನ್ನೂ ಆರಂಭಿಸಲಾಯಿತು. ನಂತರ ಬೇರೆ ಬೇರೆ ವ್ಯಕ್ತಿಗಳಿಂದ ಬೇರೆ ಬೇರೆಯವರ ಸಣ್ಣ ಕತೆಗಳನ್ನು ಓದಿಸಲು ಆರಂಭಿಸಲಾಯಿತು. ವಿವೇಕ ಶಾನಭಾಗ, ಎಸ್‌. ದಿವಾಕರ್‌, ಡಿ.ವಿ. ಪ್ರಹ್ಲಾದ್‌ ಅವರಂತಹ ಸಾಹಿತಿಗಳು ಒಂದು ತಿಂಗಳಲ್ಲಿ ಓದಬೇಕಾದ ಕತೆಗಳನ್ನು ಆರಿಸಿಕೊಡುತ್ತಿದ್ದರು. ಈ ಸಣ್ಣ ಕತೆಗಳ ಓದು ಇಂದಿಗೂ ಮುಂದುವರಿದುಕೊಂಡು ಬಂದಿದೆ. ನಾಡಿನ ಹಲವು ಹಿರಿ–ಕಿರಿಯ ಸಾಹಿತಿಗಳ ಸಣ್ಣ ಕತೆಗಳನ್ನು ಈ ಕಾರ್ಯಕ್ರಮದಲ್ಲಿ ಓದಲಾಗಿದೆ.

ಸಣ್ಣ ಕತೆಗಳ ಕಮ್ಮಟ
ಸಾಹಿತ್ಯ ಸಂಜೆಯ ಸಣ್ಣ ಕತೆಗಳ ಓದಿಗೆ ಸಿಕ್ಕ ಪ್ರತಿಸ್ಪಂದನವನ್ನು ಗಮನಿಸಿ ಈ ವರ್ಷದ ಆರಂಭದಲ್ಲಿ ಹಿರಿಯ ಸಾಹಿತಿ ಎಸ್‌.ದಿವಾಕರ್‌ ನಿರ್ದೇಶನದಲ್ಲಿ ಮೂರು ದಿನಗಳ ಕಥಾಕಮ್ಮಟವನ್ನೂ ಏರ್ಪಡಿಲಾಗಿತ್ತು. ಆ ಕಮ್ಮಟದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗಾಗಿಯೇ ಕಥಾಸ್ಪರ್ಧೆಯನ್ನು ಆಯೋಜಿಸಿ ಬಹುಮಾನವನ್ನೂ ನೀಡಲಾಗಿದೆ.

‘ಕಥಾ ಕಮ್ಮಟಕ್ಕೆ ಸುಮಾರು ಅರವತ್ತೊಂಬತ್ತು ಜನ ಬಂದಿದ್ದರು. ಕಥಾಸ್ಪರ್ಧೆಯಲ್ಲಿ ಇಪ್ಪತ್ನಾಲ್ಕು ಜನ ಭಾಗವಹಿಸಿದ್ದರು. ಇಪ್ಪತ್ನಾಲ್ಕು ಜನ  ಬರವಣಿಗೆಗೆ ಪ್ರಯತ್ನಿಸಿದರಲ್ಲ ಎನ್ನುವುದೇ ಖುಷಿ. ಕತೆ ಓದುವುದರಿಂದ ಪ್ರಾರಂಭವಾಗಿ, ಅದೊಂದು ಕಮ್ಮಟವಾಗಿ, ಅದರಿಂದ ಒಂದಿಷ್ಟು ಕತೆಗಳನ್ನು ಬರೆದರಲ್ಲ. ಅದೇ ನಮಗೆ ಸಂತೋಷದ ವಿಷಯ’ ಎನ್ನುತ್ತಾರೆ ಸಭಾಪತಿ.

ಏಪ್ರಿಲ್‌ನಿಂದ ಹೊಸ ರೂಪ
ಈಗ ಸಾಹಿತ್ಯ ಸಂಜೆಯ ನಿರ್ವಹಣೆಯನ್ನು ಆನಂದ ಸಭಾಪತಿ, ಗಣೇಶ ಶೆಣೈ ಮತ್ತು ಅಭಿರುಚಿ ಚಂದ್ರು ನೋಡಿಕೊಳ್ಳುತ್ತಿದ್ದಾರೆ. ಈ ಏಪ್ರಿಲ್‌ನಿಂದ ಹೊಸ ರೂಪದಲ್ಲಿ ಸಾಹಿತ್ಯ ಸಂಜೆಯನ್ನು ಆಯೋಜಿಸಬೇಕು. ಹಳೆಗನ್ನಡ ಪಠ್ಯದ ಅನುಸಂಧಾನಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ರಂಗಭೂಮಿ ಚರಿತ್ರೆಯ ಕುರಿತಾದ ಒಂದು ವಿಶೇಷ ಉಪನ್ಯಾಸ ಮಾಲಿಕೆ ಆಯೋಜಿಸಬೇಕು ಎಂಬ ಉದ್ದೇಶವನ್ನೂ ಇರಿಸಿಕೊಳ್ಳಲಾಗಿದೆ.

ಹಳೆಗನ್ನಡದ ಓದಿನ ಅಭಿರುಚಿಯನ್ನು ಯುವ ಪೀಳಿಗೆಯಲ್ಲಿ ಬೆಳೆಸುವ ರೀತಿಯಲ್ಲಿ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಅವರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಸುಚಿತ್ರಾದ ಈಗಿನ ಅಧ್ಯಕ್ಷರಾದ ರವೀಂದ್ರನಾಥ ಟ್ಯಾಗೋರ್‌ ಅವರೂ ಈ ಒತ್ತಾಸೆಗೆ ಬೆಂಬಲವಾಗಿ ನಿಂತಿದ್ದಾರೆ. 

ಕೀರಂ ಕೊನೆಯ ಉಪನ್ಯಾಸ 
ಸಾಹಿತ್ಯ ಸಂಜೆಯಲ್ಲಿ 2010ರ ಆಗಸ್ಟ್‌ನಲ್ಲಿ ಹಿರಿಯ ವಿದ್ವಾಂಸ ಕಿ.ರಂ. ನಾಗರಾಜ್ ಅವರಿಂದ ಬೇಂದ್ರೆ ಕಾವ್ಯದ ಕುರಿತು ನಾಲ್ಕು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.  ಅದೇ  ಕಿ.ರಂ. ಅವರ ಕೊನೆಯ ಉಪನ್ಯಾಸವೂ ಆಗಿದ್ದು ದುರದೃಷ್ಟಕರ.ಆ ದಿನವನ್ನು ಆನಂದ ಸಭಾಪತಿ ಹೀಗೆ ನೆನಪಿಸಿಕೊಳ್ಳುವರು: ‘ಕಿ.ರಂ. ಮಾತನಾಡುತ್ತಾರೆ ಎಂದು ತುಂಬ ಜನ ಸೇರಿದ್ದರು. ಸಭಾಂಗಣದ ಒಳಗಡೆ ಜಾಗ ಸಾಲದೆ ಹೊರಗೂ ಕುರ್ಚಿಗಳನ್ನು ಹಾಕಬೇಕಾಯ್ತು. ಮೊದಲನೇ ದಿನದ ಉಪನ್ಯಾಸದಲ್ಲಿಯೇ ಕಿ.ರಂ. ಅಸ್ವಸ್ಥರಾದರು.

ಹಾಗಿದ್ದೂ ತುಂಬ ಉತ್ಸಾಹದಿಂದಲೇ ಇದ್ದರು. ಕೊನೆಗೆ ಕುಳಿತುಕೊಳ್ಳಲಾಗದೆ ಮನೆಗೆ ಹೊರಟರು. ಮನೆಗೆ ತಲುಪಿದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಯೇ ಕೊನೆಯುಸಿರೆಳೆದರು. ಬೇಂದ್ರೆ ಕಾವ್ಯದ ಮೇಲೆ ಇನ್ನೂ ಮೂರು ಉಪನ್ಯಾಸಗಳನ್ನು ಅವರು ನೀಡಬೇಕಿತ್ತು. ಅದನ್ನು ಹಾಗೆಯೇ ಉಳಿಸಿ ಹೊರಟುಹೋದರು’. ಈಗ ಅವರು ಉಪನ್ಯಾಸ ನೀಡಿದ ಸಭಾಂಗಣಕ್ಕೆ ‘ಕಿ.ರಂ. ನುಡಿಮನೆ’ ಎಂದು ನಾಮಕರಣ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.