ADVERTISEMENT

106 ವರ್ಷಗಳ ಹಿಂದೆ ಈ ದಿನ...

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ರಾಣಿಯಾಗಿ ಹಾಗೂ ಭಾರತದ ಸಾಮ್ರಾಜ್ಞೆಯೂ ಆಗಿ 64 ವರ್ಷಗಳ ದೀರ್ಘಕಾಲ (1837-1901) ಆಳಿದ ವಿಕ್ಟೋರಿಯಾ ರಾಣಿಯು 81ನೇ ವಯಸ್ಸಿನಲ್ಲಿ 1901 ಜನವರಿ 22ರಂದು ನಿಧನ ಹೊಂದಿದಳು.
 
ರಾಣಿಯ ಪ್ರತಿಮೆಯನ್ನು ಬೆಂಗಳೂರು ದಂಡಿನ ಸೂಕ್ತ ಸ್ಥಳದಲ್ಲಿ ಸ್ಥಾಪಿಸಲು ಆಗ ರೆಸಿಡೆಂಟರಾಗಿದ್ದ ಸರ್ ರೋನಾಲ್ಡ್ ರಾಬರ್ಟ್‌ಸನ್ 1902ರಲ್ಲಿ ಯೋಚಿಸಿ ಕಬ್ಬನ್‌ಪಾರ್ಕ್‌ನಲ್ಲಿ (ಈಗಿರುವ) ಸ್ಥಳವನ್ನು ಆಯ್ಕೆಮಾಡಿ 1903 ಅಕ್ಟೋಬರ್ 15ರಂದು ಅಡಿಗಲ್ಲನ್ನು ಹಾಕಿದರು. ಪ್ರತಿಮೆಯ ಸ್ಥಾಪನೆಗೆ 25 ಸಾವಿರ ರೂ. ಅಂದಾಜು ಮಾಡಲಾಯಿತು.

ಆಗ ದಿವಾನರಾಗಿದ್ದ ಪಿ.ಎನ್. ಕೃಷ್ಣಮೂರ್ತಿ ಸಂಸ್ಥಾನದ ವತಿಯಿಂದ 15 ಸಾವಿರ ರೂ. ನೀಡಿದರು. ಉಳಿದ 10 ಸಾವಿರ ರೂಪಾಯಿಯನ್ನು ದಂಡು ಪ್ರದೇಶದ ಜನರೂ ಸೇರಿದಂತೆ ಸಂಸ್ಥಾನದ ಮಹಾಜನರಿಂದ ಚಂದಾ ಸಂಗ್ರಹಿಸಲಾಯಿತು. ಪ್ರತಿಮೆಯನ್ನು ಸಿದ್ಧಗೊಳಿಸಲು 1904ರಲ್ಲಿ ಲಂಡನ್ ನಗರದ ರೀಜೆಂಟ್ ಪಾರ್ಕ್‌ನಲ್ಲಿದ್ದ ಪ್ರಸಿದ್ಧ ಶಿಲ್ಪಿ ಥಾಮಸ್ ಬ್ರೂಕ್ ಎಂಬುವವರಿಗೆ ವಹಿಸಿದರು.
 
1905ರ ವೇಳೆಗೆ ಸಿದ್ಧಗೊಂಡ ಅಮೃತಶಿಲಾ ಪ್ರತಿಮೆ 1906ರ ವೇಳೆಗೆ ಬೆಂಗಳೂರು ತಲುಪಿತು. ಅದಾಗಲೇ ಮೈಸೂರು ಗ್ರಾನೈಟ್ ಶಿಲೆಯಿಂದ ಸಿದ್ಧಗೊಂಡಿದ್ದ 13 ಅಡಿ ಪೀಠದ ಮೇಲೆ 11 ಅಡಿ ಎತ್ತರದ ಪ್ರತಿಮೆಯನ್ನು ಅಳವಡಿಸಲಾಯಿತು.
 
ಆ ಸಮಯದಲ್ಲಿ ಮೈಸೂರಿಗೆ ಆಗಮಿಸಿದ್ದ ಪ್ರಿನ್ಸ್ ಆಫ್ ವೇಲ್ಸ್ ಜಾರ್ಜ್ ಫ್ರೆಡರಿಕ್ ಅರ್ನೆಸ್ಟ್ ಆಲ್ಬರ್ಟ್ ವಿಕ್ಟೋರಿಯಾ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ 1906 ಫೆಬ್ರುವರಿ 5 ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ರೆಸಿಡೆನ್ಸಿ ಬಂಗಲೆಯಲ್ಲಿ ಬಿಡಾರ ಹೂಡಿದರು.

ರೆಸಿಡೆನ್ಸಿ ಬಂಗಲೆಯಿಂದ ಪ್ರತಿಮೆಯನ್ನು ಸಿದ್ಧಪಡಿಸಿದ್ದ ಸ್ಥಳದವರೆಗೂ ಸುಮಾರು ಒಂದು ಕಿಲೋಮೀಟರ್ ದೂರದ ರಸ್ತೆಯ ಎರಡು ಬದಿಯಲ್ಲಿ ಕೃತಕ ಹೂ ತೋರಣಗಳಿಂದ ಸಿಂಗರಿಸಲಾಗಿತ್ತು. ಪ್ರತಿಮೆಯ ಮುಂಭಾಗದಲ್ಲಿ ವಿಶಾಲವಾದ ಸುಂದರ ಚಿತ್ರಮಂಟಪವನ್ನು ನಿರ್ಮಿಸಿದ್ದರು. ಮಂಟಪವು ಅಂದು ಮಧ್ಯಾಹ್ನ ಸೂರ್ಯ ರಶ್ಮಿಯಲ್ಲಿ ಫಳಫಳನೆ ಹೊಳೆಯುತ್ತಿತ್ತು.

ಎಲ್ಲಾ ಮುಖ್ಯಸ್ಥರಿಗೆ (ಸ್ತ್ರೀಯರಿಗೂ ಸೇರಿದಂತೆ) ಪ್ರತ್ಯೇಕ ಗ್ಯಾಲರಿಯಲ್ಲಿ ವಿಶೇಷ ಸ್ಥಳವನ್ನು ಏರ್ಪಡಿಸಿದ್ದರು. ಸಾರ್ವಜನಿಕರು ತಮ್ಮ ಮಕ್ಕಳೊಡನೆ ಕುಳಿತುಕೊಳ್ಳಲು ಮುಂದಿನ ವಿಶಾಲವಾದ ಮೈದಾನದಲ್ಲಿ (ಈಗ ಚಿನ್ನಸ್ವಾಮಿ ಸ್ಟೇಡಿಯಂ ಇರುವ ಸ್ಥಳ) ಮಂಟಪ ಹಾಕಿ ಸುಮಾರು ಮೂರು ಸಾವಿರ ಕುರ್ಚಿಗಳನ್ನು ಹಾಕಲಾಗಿತ್ತು. ಅಂದು ಏರ್ಪಡಿಸಿದ್ದ ವ್ಯವಸ್ಥೆ ಮತ್ತು ಅಲಂಕಾರ ವರ್ಣಾತೀತ.

ಫೆಬ್ರುವರಿ 5, 1906ರ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ದಿವಾನ್ ಕೃಷ್ಣಮೂರ್ತಿ, ಬ್ರಿಟಿಷ್ ರೆಸಿಡೆಂಟರು ಸಾರೋಟುಗಳಲ್ಲಿ ಬಂದಿಳಿದರು. ಅಷ್ಟು ಹೊತ್ತಿಗೆ ಎಲ್ಲರೂ ತಂತಮ್ಮ ಸ್ಥಳಗಳಲ್ಲಿ ಆಸೀನರಾಗಿದ್ದರು. ಮಂಟಪದ ಹೊರಗೂ ಸಾವಿರಾರು ಜನ ಬಿಸಿಲಿಗೆ ಲಕ್ಷ್ಯ ಕೊಡದೆ ಕಿಕ್ಕಿರಿದು ನಿಂತುಕೊಂಡಿದ್ದರು.

ಪ್ರತಿಮೆಯು ಪೀಠದಿಂದ ತಲೆಯವರೆಗೆ ಸ್ವಲ್ಪವೂ ಕಾಣದಂತೆ ನಾಲ್ಕು ಕಡೆಗಳಲ್ಲಿ ರಂಗುಧಾರಿ ರೇಷ್ಮೆ ಬಟ್ಟೆಗಳಿಂದ ಪರದೆ ಕಟ್ಟಿದ್ದರು. ಇಂಗ್ಲಿಷ್ ಸೈನಿಕರು,ಬ್ಯಾಂಡಿನವರು, ಬಂದೂಕುಧಾರಿಗಳಾದ ಸಿಪಾಯಿಗಳು ಬಹು ಶಿಸ್ತಿನಿಂದ ನಿಂತಿದ್ದರು.

ನಾಲ್ಕು ಗಂಟೆಗೆ ಸರಿಯಾಗಿ ರೆಸಿಡೆಂಟರು ಪತ್ನಿಸಮೇತ ಮೋಟಾರು ಗಾಡಿಯಲ್ಲಿ ಆಗಮಿಸಿದ ನಂತರ ಪ್ರಿನ್ಸ್ ಆಫ್ ವೇಲ್ಸ್ ದಂಪತಿಗಳು ನಾಲ್ಕು ಕುದುರೆ ಕಟ್ಟಿದ್ದ ಸಾರೋಟಿನಲ್ಲಿ ರಮಣೀಯವಾಗಿ ಅಲಂಕರಿಸಿದ್ದ ರಸ್ತೆಯಲ್ಲಿ ಆಗಮಿಸಿದರು.

ಪ್ರಿನ್ಸ್ ಆಫ್ ವೇಲ್ಸ್ ದಂಪತಿಗಳ ಹಿಂದೆ ಕೆಂಪು ಛತ್ರಿ, ಕೆಂಪು ಸುರೇಪಾನವನ್ನು ಹಿಡಿದು ಇಬ್ಬರು ಊಳಿಗದವರು ಕುಳಿತಿದ್ದರು. ಸಾರೋಟನ್ನು ಹಿಂಬಾಲಿಸಿದ ಸುಮಾರು 50 ಜನ ಇಂಗ್ಲಿಷ್ ಕುದುರೆ ಸವಾರರು ಆಗಮಿಸಿದರು. ರೆಸಿಡೆಂಟರೂ, ದಿವಾನರೂ, ಸಾರೋಟಿನ ಬಳಿಗೆ ಬಂದು ಪ್ರಿನ್ಸ್ ಆಫ್ ವೇಲ್ಸ್ ದಂಪತಿಯನ್ನು ಬ್ಯಾಂಡ್ವಾದ್ಯಗಳುಮೊಳಗುತ್ತಿರುವಲ್ಲಿ ಸ್ವಾಗತಿಸಿ ಚಿನ್ನದ ಕುರ್ಚಿಗಳ ಮೇಲೆ ಕೂಡಿಸಿದರು.
 
ತರುವಾಯ ರೆಸಿಡೆಂಟರು `ಘನವನ್ನೈದಿದ ಯುವರಾಜ ಸಾರ್ವಭೌಮರವರೇ, ತಾವು ಕೃಪೆಯಿಟ್ಟು ಪ್ರತಿಮೆಯನ್ನು ತಮ್ಮ ಹಸ್ತದಿಂದ ಮುಟ್ಟಿ ಪರದೆಯನ್ನು ತೆರೆಯಬೇಕೆಂದು ಬೇಡುತ್ತೇವೆ~ ಎಂದು ವಿನಂತಿಸಿದಾಗ ಪ್ರಿನ್ಸ್ ಆಫ್ ವೇಲ್ಸ್ ಅವರು ಚಿನ್ನದ ಕಂಬಕ್ಕೆ ಹಾಕಿದ್ದ ದಾರವನ್ನು ಹಿಡಿದು ಎಳೆದರು. ತೆರೆಯು ಸರಿಯಿತು. ಗೌರವಾರ್ಥವಾಗಿ 101 ಫಿರಂಗಿ ಗುಂಡುಗಳನ್ನು ಹಾರಿಸಲಾಯಿತು.

ಪ್ರತಿಮೆಯು ಬಹು ಎತ್ತರವಾಗಿದ್ದು ಬಲಗೈಯಲ್ಲಿ ಉದ್ದವಾದ ರಾಜದಂಡವನ್ನು ಎಡಗೈಯಲ್ಲಿ ಭೂಮಂಡಲವನ್ನು ಹಿಡಿದಿದೆ. ಲಂಗದ ಮೇಲಿನ ಮೇಲುಹೊದಿಕೆಯನ್ನು ಕೆಳಗಿನಿಂದ ಎಡಗೈ ಮೇಲೆ ಎಳೆದು ಬಲಭುಜದ ಕಡೆಯಿಂದ ಕೆಳಕ್ಕೆ ಇಳಿ ಬಿಟ್ಟುಕೊಂಡಿರುವಂತೆಯೂ, ಮುಖಭಾವವು ರಾಣಿ ಇದ್ದ ಹಾಗೆಯೇ ಕೆತ್ತಿರುವ ಶಿಲ್ಪಸೌಂದರ್ಯವನ್ನು ಎಲ್ಲರೂ ಕಂಡು ಸಂತೋಷಭರಿತರಾದರು.
 
ಪ್ರಿನ್ಸ್ ಆಫ್ ವೇಲ್ಸ್ ಅವರು ಪ್ರತಿಮೆಯನ್ನು ಸ್ವಲ್ಪ ಹೊತ್ತು ನೋಡಿ ಹಿಂತಿರುಗಿ ಬಂದು ಕುಳಿತರು. ಸ್ವಲ್ಪ ಹೊತ್ತಿನಲ್ಲೇ ಸಾರೋಟು ಬಂದು ನಿಂತಿತು. ಎಲ್ಲರೂ ಜಯಧ್ವನಿ ಮೊಳಗಿಸುತ್ತಿರಲು ಸಾರೋಟಿನ ಹಿಂದೆ ಮುಂದೆ ಅಂಗರಕ್ಷಕರು ಹಾಗೂ ಕುದುರೆ ಸೈನಿಕರೊಡನೆ ಪ್ರಿನ್ಸ್ ಆಫ್ ವೇಲ್ಸ್ ಅವರು ರೆಸಿಡೆನ್ಸಿಯತ್ತ ತೆರಳಿದರು.
 
ತರುವಾಯ ಎಲ್ಲರೂ ಪ್ರತಿಮೆಯ ಬಳಿ ಹೋಗಿ ವರ್ಣಿಸುತ್ತಾ ಸಂತೋಷಪಡುತ್ತಿದ್ದರು. ಅಂದು ದಂಡು ಪ್ರದೇಶದ ಇತಿಹಾಸದಲ್ಲಿ ಚಿರಸ್ಮರಣೀಯ ದಿನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.