ADVERTISEMENT

ನಾದಜ್ಯೋತಿ ಸಂಗೀತ ಸಂಭ್ರಮ

ಉಮಾ ಅನಂತ್
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ಹಂಸಿನಿ ನಾಗೇಂದ್ರ
ಹಂಸಿನಿ ನಾಗೇಂದ್ರ   

ಮಲ್ಲೇಶ್ವರದಲ್ಲಿರುವ ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್‌ ಬುಧವಾರದಿಂದ ಭಾನುವಾರದವರೆಗೆ (ಜ.17ರಿಂದ 21) ಐದು ದಿನಗಳ ಕಾಲ ‘53ನೇ ನಾದಜ್ಯೋತಿ ಸಂಗೀತ ಸಂಭ್ರಮ’ ಕಾರ್ಯಕ್ರಮ ಆಯೋಜಿಸಿದೆ. ವೈವಿಧ್ಯಮಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಜತೆಗೆ ಸಂಗೀತ ಸಾಧಕರನ್ನು ಪುರಸ್ಕರಿಸಲಾಗುವುದು.

ಪುರಸ್ಕೃತರು: ‘ಮೋರ್ಚಿಂಗ್ ಭೀಮ’ ಎಂದೇ ಖ್ಯಾತರಾದ ಮೋರ್ಚಿಂಗ್ ಕಲಾವಿದ ಎಲ್. ಭೀಮಾಚಾರ್ ಅವರಿಗೆ ‘ಜೀವಮಾನ ಸಾಧನೆ’, ಪಿಟೀಲು ವಿದುಷಿ ಸೂರ್ಯಪ್ರಭಾ ಅವರಿಗೆ ‘ಕಲಾಜ್ಯೋತಿ’, ಗಾಯಕಿ ಹಂಸಿನಿ ನಾಗೇಂದ್ರ ಅವರಿಗೆ ‘ಗಾನಕಲಾಶ್ರೀ’ ಪುರಸ್ಕಾರ ನೀಡಿ ಗೌರವಿಸಲಾಗುವುದು. ಹರಿಕಥೆ ಕಲಾವಿದೆ ಸುಭದ್ರಾ ಪಾರ್ಥಸಾರಥಿ ಅವರಿಗೆ ‘ನಾದಜ್ಯೋತಿ ಆರೋಗ್ಯ ಸಂಪದ’ ನೆರವು ಸಿಗಲಿದೆ.

ಕಾರ್ಯಕ್ರಮ ವಿವರ: ಬುಧವಾರ ಸಂಜೆ 6ಕ್ಕೆ ಉದ್ಘಾಟನೆ ಸಮಾರಂಭ. 6.30ಕ್ಕೆ ಮೈಸೂರು ಆರ್‌.ಕೆ. ಪದ್ಮನಾಭ ಅವರಿಂದ ವೀಣಾ ವಾದನ, ಮೃದಂಗ– ಸಿ.ಚೆಲುವರಾಜು, ಘಟ– ಸುಕನ್ಯಾ ರಾಮ್‌ಗೋಪಾಲ್. ಗುರುವಾರ ಸಂಜೆ 6.30ಕ್ಕೆ ‘ಶ್ರೀತ್ಯಾಗರಾಜ ಯೋಗವೈಭವಂ’ ರೂಪಕ. ನಿರೂಪಣೆ– ಕೆ.ಎನ್‌. ವೆಂಕಟನಾರಾಯಣ, ಕೆ.ವಿ. ಕೃಷ್ಣಪ್ರಸಾದ್ ಅವರಿಂದ ಕಛೇರಿ. ಪಿಟೀಲು– ಎಂ.ಎಸ್. ಗೋವಿಂದಸ್ವಾಮಿ, ಮೃದಂಗ– ಬಿ.ಕೆ. ಚಂದ್ರಮೌಳಿ, ಮೋರ್ಚಿಂಗ್– ಜಿ.ಲಕ್ಷ್ಮಿನಾರಾಯಣ. ಶುಕ್ರವಾರ ಸಂಜೆ 6.30ಕ್ಕೆ ವಿದುಷಿ ಹಂಸಿನಿ ನಾಗೇಂದ್ರ ಅವರಿಂದ ಕಛೇರಿ. ಪಿಟೀಲು– ಕಲ್ಪನಾ ಕಿಶೋರ್, ಮೃದಂಗ– ಎ. ರೇಣುಕ ಪ್ರಸಾದ್, ಘಟ– ಎಂ. ದಯಾನಂದ ಮೋಹಿತೆ. ಶನಿವಾರ ಸಂಜೆ 5ಕ್ಕೆ ಡಿ.ಸೂರ್ಯಪ್ರಭಾ ಅವರಿಂದ ಪಿಟೀಲು ಸೋಲೊ, ಸಹವಾದನ– ವಿಭಾ, ಮೃದಂಗ– ಬಿ.ಧ್ರುವರಾಜ್, ಮೋರ್ಚಿಂಗ್– ಎಲ್. ಭೀಮಾಚಾರ್. ಸಂಜೆ 7ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ. ಭಾನುವಾರ ಬೆಳಿಗ್ಗೆ 8ಕ್ಕೆ ಊಂಛವೃತ್ತಿ, 10ಕ್ಕೆ ತ್ಯಾಗರಾಜರ ದಿವ್ಯನಾಮ ಮತ್ತು ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ, ನಿರ್ದೇಶನ– ಮಲ್ಲಾದಿ ಜಯಶ್ರೀ. ಸಂಜೆ 6ಕ್ಕೆ ಪಿ.ಉನ್ನಿಕೃಷ್ಣನ್ ಅವರಿಂದ ಕಛೇರಿ. ಪಿಟೀಲು– ಎಚ್‌.ಕೆ. ವೆಂಕಟರಾಮ್, ಮೃದಂಗ– ಅರ್ಜುನ್ ಕುಮಾರ್, ಘಟ– ಗಿರಿಧರ್ ಉಡುಪ.

ADVERTISEMENT

ಪುರಸ್ಕೃತರ ಪರಿಚಯ

ವಿದುಷಿ ಡಿ. ಸೂರ್ಯಪ್ರಭಾ

ನಾದಜ್ಯೋತಿ ಸಂಗೀತ ಸಭಾ ಪ್ರತಿ ವರ್ಷ ನೀಡುವ ‘ಕಲಾಜ್ಯೋತಿ’ ಪ್ರಶಸ್ತಿಯನ್ನು ಈ ಬಾರಿ ಅಂಧ ವಿದುಷಿ, ಹಿರಿಯ ಪಿಟೀಲು ವಾದಕಿ ಡಿ. ಸೂರ್ಯಪ್ರಭಾ ಅವರಿಗೆ ನೀಡಲಾಗುತ್ತಿದೆ. ಆಂಧ್ರಪ್ರದೇಶದ ದ್ವಾರಂ ವೆಂಕಟಸ್ವಾಮಿ ನಾಯ್ಡು ಇವರ ಗುರು. ಕಳೆದ 70 ವರ್ಷಗಳಿಂದ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಪಿಟೀಲು ನುಡಿಸಿದ್ದಾರೆ. 2009ರಲ್ಲಿ ದಕ್ಷಿಣ ವಲಯ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿದ್ದ ಇವರ ನುಡಿಸಾಣಿಕೆ ಆಕಾಶವಾಣಿಯ ಎಲ್ಲ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಿ ಜನಮೆಚ್ಚುಗೆ ಪಡೆದಿತ್ತು. ಬೆಂಗಳೂರಿನ ಶ್ರೀರಾಮ ಲಲಿತ ಕಲಾ ಮಂದಿರ ಈಚೆಗೆ ಇವರಿಗೆ ‘ಲಲಿತಕಲಾ ಸುಮ’ ಎಂಬ ಬಿರುದು ನೀಡಿ ಗೌರವಿಸಿತ್ತು.

ವಿದುಷಿ ಹಂಸಿನಿ ನಾಗೇಂದ್ರ

ಆಕಾಶವಾಣಿ ಹಾಗೂ ದೂರದರ್ಶನದ ‘ಎ’ ಶ್ರೇಣಿ ಕಲಾವಿದೆಯಾಗಿರುವ ವಿದುಷಿ ಹಂಸಿನಿ ನಾಗೇಂದ್ರ, ತಮ್ಮ ಸುಮಧುರ ಶಾರೀರದಿಂದ ಈಗಾಗಲೇ ಕರ್ನಾಟಕ ಸಂಗೀತ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದವರು. ಹಿರಿಯ ಕಲಾವಿದೆ ಟಿ.ಎಸ್‌. ಸತ್ಯವತಿ, ವಿದ್ವಾನ್‌ ಆರ್‌.ಆರ್‌.ಕೇಶವಮೂರ್ತಿ, ವಿದ್ವಾನ್‌ ಟಿ.ಎನ್‌. ಶೇಷಗೋಪಾಲನ್‌ ಹಾಗೂ ವಿದ್ವಾನ್‌ ಎಚ್‌.ಎಸ್‌. ಸುಧೀಂದ್ರ ಅವರ ಬಳಿ ಸಂಗೀತ ಮಾರ್ಗದರ್ಶನ ಪಡೆದಿದ್ದಾರೆ. ಸಂಗೀತದಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌.ಡಿ ಪದವಿ ಪಡೆದು ಸಂಗೀತದ ಅಕಡೆಮಿಕ್‌ ಅಧ್ಯಯನದಲ್ಲೂ ಮುಂಚೂಣಿಯಲ್ಲಿರುವ ಅಪರೂಪದ ಕಲಾವಿದೆ ಎನಿಸಿದ್ದಾರೆ. ‘ಗಾನಕಲಾಶ್ರೀ’, ಅನನ್ಯ ಪುರಸ್ಕಾರ ಮುಂತಾದ ಪ್ರಶಸ್ತಿಗಳನ್ನು ಪಡೆದ ಈ ವಿದುಷಿಗೆ ಇದೀಗ ‘ನಾದಜ್ಯೋತಿ ಪುರಸ್ಕಾರ’ದ ಗರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.