ADVERTISEMENT

ಇಂದಿನಿಂದ ವಿಜ್ಞಾನ, ಸಂಸ್ಕೃತಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST
‘ಪ್ರವೇಗ’ ಮೇಳಕ್ಕಾಗಿ ಸಿದ್ದತೆಯಲ್ಲಿ ನಿರತ ವಿದ್ಯಾರ್ಥಿಗಳು
‘ಪ್ರವೇಗ’ ಮೇಳಕ್ಕಾಗಿ ಸಿದ್ದತೆಯಲ್ಲಿ ನಿರತ ವಿದ್ಯಾರ್ಥಿಗಳು   

ವಿಜ್ಞಾನವನ್ನು ಜನಪ್ರಿಯಗೊಳಿಸಬೇಕು ಎಂಬ ಉದ್ದೇಶದಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ಪದವಿ ವಿದ್ಯಾರ್ಥಿಗಳು ‘ಪ್ರವೇಗ ವಿಜ್ಞಾನ ಹಾಗೂ ಸಂಸ್ಕೃತಿ ಮೇಳ’ವನ್ನು ಆಯೋಜಿಸಿ‌ದ್ದಾರೆ. ಶುಕ್ರವಾರದಿಂದ ಭಾನುವಾರದವರೆಗೆ (ಜ.19ರಿಂದ 21) ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಾಗಾರಗಳು, ಪ್ರದರ್ಶನಗಳು ಹಾಗೂ ಸ್ಪರ್ಧೆಗಳು ನಡೆಯಲಿವೆ.

ದೇಶದ ವಿವಿಧ ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳು ಈ ಮೇಳಕ್ಕೆ ಸಾಕ್ಷಿಯಾಗಲಿದ್ದಾರೆ. ಅನೇಕ ವಿಜ್ಞಾನ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಇರಲಿವೆ. ಕೃತಕ ಬುದ್ಧಿಮತ್ತೆ ಹಾಗೂ ನೈತಿಕ ಹ್ಯಾಕಿಂಗ್ ಕುರಿತು ಕಾರ್ಯಾಗಾರ ನಡೆಯಲಿದೆ.

‘ಪ್ರವೇಗ ಇನೋವೇಷನ್‌ ಸಮಿಟ್’ ಎಂಬ ಸ್ಪರ್ಧೆ ಆಯೋಜಿಸಿದ್ದು, ಇದರಲ್ಲಿ ದೇಶದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಾವು ಅನ್ವೇಷಿಸಿರುವ ವಿಜ್ಞಾನದ ನೂತನ ಮಾದರಿಗಳ ಕುರಿತು ಪ್ರಾತಿಕ್ಷಿಕೆ ನೀಡಲಿದ್ದಾರೆ. ಈ ಸ್ಪರ್ಧೆಯಲ್ಲಿ ವಿಜೇತ ತಂಡ ಅಥವಾ ವ್ಯಕ್ತಿಗೆ ₹1 ಲಕ್ಷ ಬಹುಮಾನ ನೀಡಲಾಗುವುದು. ವಿಜ್ಞಾನ ಹ್ಯಾಕಥಾನ್‌ ಎಂಬ ಮತ್ತೊಂದು
ಸ್ಪರ್ಧೆ ಇರಲಿದೆ. ಇದರಲ್ಲಿ ಮಾನವ
ಭಾವನೆಗಳಿಗೆ ಸಂಬಂಧಿಸಿದ ಕಂಪ್ಯೂಟರ್ ಪ್ರೋಗ್ರಾಂಗಳನ್ನು ಅಭಿವೃದ್ಧಿಗೊಳಿಸಬೇಕು. ಈ ಸ್ಪರ್ಧೆಗೂ ₹1 ಲಕ್ಷ ಬಹುಮಾನ ನೀಡಲಾಗುತ್ತದೆ.

ADVERTISEMENT

ನಗರದ ಸರ್ಕಾರಿ ಫ್ರೌಡಶಾಲೆಗಳ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಹಾಗೂ ವೈಮಾನಿಕ ವಿಜ್ಞಾನ ಕುರಿತು ಒಂದು ದಿನದ ಉಚಿತ ಕಾರ್ಯಾಗಾರ ಆಯೋಜಿಸಿದೆ. ‘ವೈಮಾನಿಕ ವಿಜ್ಞಾನದ ಕುರಿತು ಮಕ್ಕಳಿಗಿರುವ ಕುತೂಹಲವನ್ನು ತಣಿಸುವ, ನೂತನ ಆಸಕ್ತಿಯನ್ನು ಬಿತ್ತುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕ ಶಶಾಂಕ್.

ವಿಜ್ಞಾನವನ್ನು ವಿವಿಧ ಚಟುವಟಿಕೆಗಳ ಮೂಲಕ ಅರ್ಥಮಾಡಿಸುವ ಉದ್ದೇಶದಿಂದ ‘ಮಾಲಿಕ್ಯೂಲರ್ ಮ್ಯೂರಲ್ಸ್‌’ ಎಂಬ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ ಸ್ಪರ್ಧಿಗಳಿಗೆ ಕಪ್ಪು ಹಾಗೂ ಬಿಳಿಬಣ್ಣದ
ಟೀ ಶರ್ಟ್‌ಗಳನ್ನು ನೀಡಲಾಗುತ್ತದೆ. ಜೊತೆಗೆ ಕೆಲ ರಾಸಾಯನಿಕಗಳನ್ನೂ ನೀಡಲಾಗುತ್ತದೆ ಇದನ್ನು ಬಳಸಿ ಸ್ಪರ್ಧಿಗಳು ವಿವಿಧ
ವಿನ್ಯಾಸಗಳು ಹಾಗೂ ಚಿತ್ತಾರಗಳನ್ನು ಮೂಡಿಸಬೇಕು.

ವಿಜ್ಞಾನದ ಜೊತೆಗೆ ಸಾಂಸ್ಕೃತಿಕ ಕಳೆಯೂ ಮೇಳದಲ್ಲಿ ಮೇಳೈಸಲಿದೆ. ಪ್ರತಿ ದಿನ ಸಂಜೆ 5 ಗಂಟೆಗೆ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಶಾಸ್ತ್ರೀಯ, ಜನಪದ, ಪಾಶ್ಚಾತ್ಯ ಹಾಗೂ ಸಾಂಸ್ಕೃತಿಕ ನೃತ್ಯಗಳನ್ನು ಪ್ರಸ್ತುತಪಡಿಸಲಿದ್ದಾರೆ. ನೃತ್ಯ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ₹50 ಸಾವಿರ ಬಹುಮಾನ ನೀಡಲಾಗುತ್ತದೆ. ‘ಮ್ಯೂಸಿಕ್ ಬ್ಯಾಟಲ್‌’ ಎಂಬ ಸಂಗೀತ ಸ್ಪರ್ಧೆ ಹಾಗೂ ನಾಟಕ ಸ್ಪರ್ಧೆಗಳು ನಡೆಯಲಿವೆ.

ಪ್ರವೇಗ ವಿಜ್ಞಾನ ಹಾಗೂ ಸಂಸ್ಕೃತಿ ಮೇಳ: ವಿಜ್ಞಾನ ಸಂಬಂಧಿತ ಸ್ಪರ್ಧೆ, ಪ್ರದರ್ಶನ ಹಾಗೂ ಕಾರ್ಯಾಗಾರ. ಆಯೋಜನೆ–ಸ್ಥಳ–ಇಂಡಿಯನ್ ಇನ್ಸ್‌ಸ್ಟಿಟ್ಯೂಟ್‌ ಆಪ್‌ ಸೈನ್ಸ್‌. ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.