ADVERTISEMENT

ಮೊಟ್ಟೆಯೊಡೆದು ಹೊರಬಂದ ಹುಲಿ

ನಾಗರಾಜ ಕೆ.ಎಲ್
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ಮಮತಾ ಶಾನುಭೋಗ್‌ ಅವರ ಕಲಾಕೃತಿ
ಮಮತಾ ಶಾನುಭೋಗ್‌ ಅವರ ಕಲಾಕೃತಿ   

ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ 18ನೇ ‘ತಿಂಗಳ ಚಿತ್ರ’ ಯುವ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಯಿತು. ಕನ್ನಡ ಭವನದ ವರ್ಣ ಆರ್ಟ್‌ ಗ್ಯಾಲರಿಯಲ್ಲಿ ನಡೆದ ಪ್ರದರ್ಶನದಲ್ಲಿ ಮಮತಾ ಶಾನುಭೋಗ್, ಸುಷ್ಮಾ ಆರ್, ಅಡಿವೆಪ್ಪ ಜೆ.ಗುಂದಗಿ, ಹರ್ಷ ಎಂ.ಕಂಬಾರ ಅವರ ಕಲಾಕೃತಿಗಳು ಜನ ಮೆಚ್ಚುಗೆ ಗಳಿಸಿದವು.

ಕಾಸರಗೋಡಿನ ಕಲಾವಿದೆ ಮಮತಾ ಶಾನುಭೋಗ್ ಚಿತ್ರಕಲೆಯನ್ನು ಸಾಂಪ್ರದಾಯಿಕವಾಗಿ ಕಲಿತವರಲ್ಲ. ‘ನಾನಿನ್ನೂ ಕಲಿಕೆಯ ಆರಂಭಿಕ ಹಂತದಲ್ಲಿದ್ದೇನೆ. ಹೆಚ್ಚಿನ ಅಧ್ಯಯನ ಮಾಡುವ ಆಸಕ್ತಿಯಿದೆ’ ಎಂದು ವಿನಯದಿಂದಲೇ ಒಪ್ಪಿಕೊಳ್ಳುತ್ತಾರೆ ಅವರು. ಕಲಾವಿದರಾಗಿದ್ದ ಪತಿ ಸುದರ್ಶನ ಶಾನುಭೋಗ್ ಪ್ರೇರಣೆಯಿಂದ ಮಮತಾ ಅವರಿಗೂ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿತಂತೆ. ‘ಸುದರ್ಶನ ಅತ್ಯುತ್ತಮ ಕಲಾವಿದ. ಅವರು ಕಂಡ ಕನಸುಗಳನ್ನು ನನಸಾಗಿಸಲು ಕಲಾಕೃತಿ ರಚಿಸಲು ಆರಂಭಿಸಿದ್ದೇನೆ’ ಎನ್ನುತ್ತಾರೆ ಮಮತಾ. ಇವರ ಕಲಾಕೃತಿಗಳಲ್ಲಿ ಗ್ರಾಮೀಣ ಬದುಕಿನ ಒಳನೋಟಗಳು ಅಚ್ಚರಿ ಮೂಡಿಸುವಂತಿದ್ದವು.

ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಲಾವಿದೆ ಸುಷ್ಮಾ ಆರ್. ಅವರಿಗೆ ಕಿನ್ನಾಳ ಕಲೆ ಮತ್ತು ವುಡ್‌ ಕಟಿಂಗ್‌ ಪ್ರಕಾರಗಳಲ್ಲಿಯೂ ಪರಿಣತಿಯಿದೆ. ಲಾಟೀನಿನಲ್ಲಿ ಹೂ ಅರಳಿರುವ ಕಲಾಕೃತಿ ಪ್ರದರ್ಶನದ ಆಕರ್ಷಣೀಯವಾಗಿತ್ತು. ‘ಲಾಟೀನನ್ನು ಯಾರಾದರೂ ಹೊತ್ತಿಸಬೇಕು. ಆದರೆ ಹೂವು ಸಹಜವಾಗಿ ಅರಳುತ್ತದೆ. ನಿಸರ್ಗ ಸಹಜ ಬೆಳಕನ್ನು ಬಿಂಬಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ಪ್ರತಿಕ್ರಿಯಿಸಿದರು ಸುಷ್ಮಾ.

ADVERTISEMENT

ವಿಜಯಪುರದ ಬಸವನಬಾಗೇವಾಡಿಯ ಕಲಾವಿದ ಅಡಿವೆಪ್ಪ ಜೆ.ಗುಂದಗಿ ಈ ಪ್ರದರ್ಶನದಲ್ಲಿ ಭಾಗವಹಿಸಿದ್ದ ಅತಿ ಕಿರಿಯ ಕಲಾವಿದ. ಕೌದಿ ಕುರಿತ ಕಲಾಕೃತಿಗಳು ಅವರ ವೈಶಿಷ್ಟ್ಯ. ‘ನನ್ನಜ್ಜಿ ಕೌದಿ ಹೊಲಿಯುತ್ತಾರೆ. ಬಾಲ್ಯದಿಂದ ಅದನ್ನು ಗಮನಿಸುತ್ತಲೇ ಇದ್ದೇನೆ. ಅದೇ ಕಲಾಕೃತಿಗಳ ರಚನೆಗೆ ಪ್ರೇರಣೆ’ ಎಂದು ಅವರು ವಿವರಿಸಿದರು.

ಕಲಾವಿದ ಹರ್ಷ ಎಂ.ಕಂಬಾರ, ಖ್ಯಾತ ಕಲಾವಿದ ಎಂ.ವಿ. ಕಂಬಾರ ಅವರ ಮಗ. ತಂದೆಯ ಕಲಾ ಕೌಶಲವನ್ನು ನೋಡುತ್ತ ಬೆಳೆದ ಹರ್ಷ ತಾನೂ ಅದರತ್ತ ಆಕರ್ಷಿತರಾದರಂತೆ. ಹುಲಿ, ಇವರ ಕಲಾಕೃತಿಗಳ ವಸ್ತು. ‘ಪರಿಸರ ಸಂರಕ್ಷಣೆ ನನ್ನ ಕಲಾಕೃತಿಗಳ ತಿರುಳು’ ಎಂಬ ವ್ಯಾಖ್ಯಾನ ಅವರದು. ಮೊಟ್ಟೆಯೊಡೆದು ಹೊರ ಬಂದಿರುವ ಹುಲಿ ಮರಿಗೆ ಹಾಲುಣಿಸುತ್ತಿರುವ ತಾಯಿ, ಬೆಳದಿಂಗಳ ರಾತ್ರಿಯಲ್ಲಿ ನಿಂತಿರುವ, ಹೊಟ್ಟೆಯ ಮೇಲೆ ಹುಲಿ ಪಟ್ಟೆ ಮೂಡಿರುವ ಗರ್ಭಿಣಿಯ ಚಿತ್ರಗಳು ಕಲಾಸಕ್ತರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.