ADVERTISEMENT

ಬೇಗ ಹುಷಾರಾಗು ಪುಟ್ಟಿ...

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST
ಬೇಗ ಹುಷಾರಾಗು ಪುಟ್ಟಿ...
ಬೇಗ ಹುಷಾರಾಗು ಪುಟ್ಟಿ...   

ನನ್ನ ಮಗಳು ಚೇತನಾ ದೈಹಿಕ ಮತ್ತು ಮಾನಸಿಕವಾಗಿ ವಯಸ್ಸಿಗೆ ಮೀರಿದ ಕ್ರಿಯಾಶೀಲತೆಯಿಂದ ಕೂಡಿದ್ದಳು. ಶಾಲೆಯ ಪಠ್ಯಸಂಬಂಧಿ ಚಟುವಟಿಕೆಗಳಲ್ಲದೆ ಆಟೋಟ, ಹಾಡು, ನೃತ್ಯ, ಭಜನೆ ಹೀಗೆ ಎಲ್ಲದರಲ್ಲೂ ಪಾಲ್ಗೊಳ್ಳುವ ಹುಮ್ಮಸ್ಸು. ಜಾವೆಲಿನ್‌ ಎಸೆತದಲ್ಲಿ ಶಾಲಾ ಮಟ್ಟದಲ್ಲಿ ದಾಖಲೆ ನಿರ್ಮಿಸಿದ ಹುಡುಗಿ. ಇಷ್ಟಾದರೂ ಸುಸ್ತು ಎಂಬ ಮಾತು ಅವಳ ಬಾಯಿಯಲ್ಲಿ ಬಂದಿದ್ದೇ ಇಲ್ಲ. ಚಿನಕುರುಳಿ, ಜಿಂಕೆ ಮರಿ ಅಂತಾರಲ್ಲ ಹಾಗಿತ್ತು ನನ್ನ ಮಗು.

ಕಳೆದ ವರ್ಷ ಮಾರ್ಚ್‌ನಿಂದ ಆರು ತಿಂಗಳು ಪದೇಪದೇ ಜ್ವರ ಕಾಡುತ್ತಿತ್ತು. ಆಗಸ್ಟ್‌ನಲ್ಲಿ ಭಯಂಕರವಾದ ಜ್ವರ. ಒಂದೇ ಸಮನೆ ಮಂಪರಿನಲ್ಲಿರುತ್ತಿದ್ದಳು. ನಮ್ಮನೆಯಲ್ಲಿಯೇ ವೈದ್ಯರಿರುವ ಕಾರಣ ಡೆಂಗಿ ಮತ್ತು ಚಿಕನ್‌ಗುನ್ಯಾ ಪರೀಕ್ಷೆ ಮಾಡಿಸಿದೆವು. ಎರಡೂ ನೆಗೆಟಿವ್‌ ಬಂತು. ಹಾಗಾಗಿ ಸಾಮಾನ್ಯ ಜ್ವರಕ್ಕೆ ಕೊಡುವ ಚಿಕಿತ್ಸೆಯನ್ನೇ ಮುಂದುವರಿಸಿದೆವು. ಚೇತನಾ ಅದುವರೆಗೂ ಒಂದು ದಿನವೂ ಅನಾರೋಗ್ಯ ಎಂದು ಮಲಗಿದವಳಲ್ಲ. ಆದರೆ 12ರ ವಯಸ್ಸಿಗೇ 65 ಕೆ.ಜಿ ಇದ್ದವಳು. ಆಗಸ್ಟ್‌ನಲ್ಲಿ ಬಂದ ಜ್ವರದ ಬಳಿಕ ಇದ್ದಕ್ಕಿದ್ದಂತೆ ಗಣನೀಯ ಪ್ರಮಾಣದಲ್ಲಿ ಸಣ್ಣಗಾದಳು. ಶೂನ್ಯ ಆವರಿಸಿಕೊಳ್ಳುತ್ತದೆ ಎಂದು ಹೇಳಲಾರಂಭಿಸಿದಳು. ಆಗ ನಾವು ಕಂಗಾಲಾದೆವು.

ಇಷ್ಟಾಗುವ ಹೊತ್ತಿಗೆ ಅವಳ ಪಠ್ಯೇತರ ಚಟುವಟಿಕೆಗಳನ್ನೆಲ್ಲಾ ನಿಲ್ಲಿಸಿದೆವು. 12ನೇ ವಯಸ್ಸಿಗೆ ಹೆಣ್ಣುಮಕ್ಕಳು ಋತುಮತಿಯಾಗುತ್ತಾರೆ. ಇವಳಿಗೆ ಅಂತಹ ಲಕ್ಷಣಗಳು ಕಾಣಿಸಿರಲಿಲ್ಲ. ಈ ಮಧ್ಯೆ ಒಮ್ಮೆ ಬೆಂಗಳೂರಿನ ಸಂಬಂಧಿಕರ ಮನೆಗೆ ಬಂದಿದ್ದಾಗ ಅವಳ ಮೊಣಕೈ, ಭುಜದ ಭಾಗ ಮತ್ತು ಹಿಮ್ಮಡಿ ಬಳಿ ರಕ್ತನಾಳಗಳು ನೀಲಿಗಟ್ಟಿರುವುದು ಕಂಡುಬಂತು. ಆದರೆ ಅಕ್ಟೋಬರ್‌ನಲ್ಲಿ ಮತ್ತೆ ತೀವ್ರ ಜ್ವರ ಶುರುವಾಯಿತು. ಆಗ ರಕ್ತ ಪರೀಕ್ಷೆ ಮಾಡಿಸಿದಾಗ ರಕ್ತದ ಕ್ಯಾನ್ಸರ್‌ ಅಂತಿಮ ಹಂತದಲ್ಲಿದೆ ಎಂದು ವರದಿ ಬಂತು. ನಮಗೆ ಲ್ಯಾಬ್‌ ಮೇಲೆ ಸಂಶಯ. ನಗರದ ದೊಡ್ಡಾಸ್ಪತ್ರೆಗಳಲ್ಲಿ ಮತ್ತೆ ರಕ್ತ ಪರೀಕ್ಷೆ ಮಾಡಿಸಿದಾಗಲೂ ಅದೇ ವರದಿ!

ADVERTISEMENT

ಶಂಕರ ಆಸ್ಪತ್ರೆಯ ದೊಡ್ಡ ವೈದ್ಯರೂ ಭರವಸೆ ನೀಡಲಿಲ್ಲ. ನಮಗೆ ದಿಕ್ಕೇ ತೋಚಲಿಲ್ಲ.

ಬೆಂಗಳೂರಿನಲ್ಲಿ ಇರೋದೇ ಬೇಡ ಎಂದು ನಮ್ಮೂರು ಮೈಸೂರಿಗೆ ಅವಳನ್ನೂ ಕರೆದುಕೊಂಡು ಹೋದೆವು. ಅಲ್ಲಿಗೆ ಹೋದ ಕೆಲವೇ ದಿನಕ್ಕೆ ಒಂದು ರಾತ್ರಿ ಅವಳಿಗೆ ವಿಪರೀತ ವಾಂತಿ ಅಯ್ತು. ಆ ಕ್ಷಣಕ್ಕೆ ಬೇಕಾದ ಔಷಧಿ ಎಲ್ಲಿಯೂ ಸಿಗಲಿಲ್ಲ. ರಕ್ತದೊತ್ತಡ ಗಣನೀಯವಾಗಿ ಇಳಿಯುತ್ತಿತ್ತು ಮತ್ತು ಮಂಪರಿನಲ್ಲೇ ಇದ್ದಳು. ತಕ್ಷಣ ಬೆಂಗಳೂರಿನ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ರೈಲಿನಲ್ಲಿ ಕರೆತಂದು ದಾಖಲಿಸಿದೆವು. ಅಷ್ಟು ಹೊತ್ತಿಗೆ ಅವಳು ಪ್ರಜ್ಞಾಹೀನಳಾಗಿದ್ದಳು. ಸೇಂಟ್‌ ಜಾನ್ಸ್‌ನಲ್ಲಿ ತಕ್ಷಣ ತುರ್ತು ಚಿಕಿತ್ಸೆ ಶುರು ಮಾಡಿದರು. ಕಿಮೊಥೆರಪಿಯೂ ನಡೆಯುತ್ತಿದೆ. ನಮ್ಮ ಅದೃಷ್ಟಕ್ಕೆ ಮೂರನೇ ಹಂತದಲ್ಲಿದ್ದ ರಕ್ತದ ಕ್ಯಾನ್ಸರ್‌ ಈಗ ಒಂದನೇ ಹಂತಕ್ಕೆ ಬಂದಿದೆ. ಚಿಕಿತ್ಸೆ ಫಲಕಾರಿಯಾಗುತ್ತಿದೆ. ನಮ್ಮ ಚೇತನಾ, ಹಾಸಿಗೆಯಲ್ಲಿದ್ದರೂ ಕ್ರಿಯಾಶೀಲಳಾಗಿದ್ದಾಳೆ. ಏನಾದರೂ ಕಸೂತಿ ಮಾಡುತ್ತಾಳೆ. ಕಳೆದ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ನಂದು ತಾನೇ ಒಂದು ಗೋದಲಿ ಮಾಡಿ ವೈದ್ಯರಿಗೆ ಉಡುಗೊರೆಯಾಗಿ ಕೊಟ್ಟಿದ್ದಳು. ಇಷ್ಟೆಲ್ಲಾ ನೋವು ತಿಂದಿದ್ದರೂ ಅವಳು ಮಾನಸಿಕವಾಗಿ ಗಟ್ಟಿಯಾಗಿದ್ದಾಳೆ. ನಮಗೇ ಧೈರ್ಯ ತುಂಬುತ್ತಿದ್ದಾಳೆ. ಗುಣಮುಖಳಾಗುತ್ತಿರುವುದಕ್ಕೆ ಚಿಕಿತ್ಸೆಯಷ್ಟೇ ಅದೂ ಮುಖ್ಯ ಎಂಬುದು ನನ್ನ ಭಾವನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.