ADVERTISEMENT

‘ಅಡುಗೆಗೆ ತೆಂಗು ಹಾಕೋದು ಹೇಗೆ’

ಸುರೇಖಾ ಹೆಗಡೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST
‘ಅಡುಗೆಗೆ ತೆಂಗು ಹಾಕೋದು ಹೇಗೆ’
‘ಅಡುಗೆಗೆ ತೆಂಗು ಹಾಕೋದು ಹೇಗೆ’   

ಅಡುಗೆಗೆ ರುಚಿ ಬರಬೇಕು ಎಂದರೆ ತೆಂಗು ಇರಲೇಬೇಕಲ್ಲವೇ. ರುಚಿ ಹಾಗೂ ಆರೋಗ್ಯದ ದೃಷ್ಟಿಯಿಂದ ದಕ್ಷಿಣ ಭಾರತದ ಬಹುತೇಕ ಅಡುಗೆಗಳಲ್ಲಿ ತೆಂಗಿನಕಾಯಿಯನ್ನು ಬಳಸಿಕೊಳ್ಳಲಾಗುತ್ತದೆ. ತೆಂಗು ಇಂಗು ಇದ್ದರೆ ಯಾರೇ ಅಡುಗೆ ಮಾಡಿದರೂ ರುಚಿ ಆಗುತ್ತದೆ ಎನ್ನುವ ಗಾದೆಯೇ ಇದೆ. ಆದರೆ ಇತ್ತೀಚೆಗೆ ತೆಂಗು ಗಗನಕುಸುಮವಾಗಿದೆ.

ಸಾಮಾನ್ಯವಾಗಿ 20 ರೂಪಾಯಿ ಆಸುಪಾಸು ಇರುತ್ತಿದ್ದ ಬೆಲೆ ಈಗ 45 ದಾಟಿದೆ. ಈ ಬೆಳವಣಿಗೆ ನಗರವಾಸಿಗಳ ಬದುಕಿನ ಮೇಲೆಯೂ ಪರಿಣಾಮ ಬೀರಿದೆ.

ಬೆಲೆ ಏರಿಕೆ ವಿದ್ಯಮಾನದ ಬಗ್ಗೆ ಹೋಟೆಲ್ ಉದ್ಯಮಿ, ಗೃಹಿಣಿ, ಕೇಟರಿಂಗ್ ಉದ್ಯಮಿ ಮತ್ತು ಮಂಡಿ ವ್ಯಾಪಾರಿಗಳು ಏನು ಹೇಳುತ್ತಾರೆ ಗೊತ್ತೆ?

ADVERTISEMENT

*


ಹೋಟೆಲ್ ನಡೆಸೋದು ಕಷ್ಟ
ತೆಂಗಿನಕಾಯಿ ಬೆಲೆ ಏರಿಕೆಯಿಂದ ಹೋಟೆಲ್‌ ನಡೆಸುವುದು ಕಷ್ಟವಾಗಿದೆ. ಈರುಳ್ಳಿ ಬೆಲೆ ಕಡಿಮೆ ಆಗುವ ಹೊತ್ತಿಗೆ ತರಕಾರಿಗಳ ಬೆಲೆ ಏರಿತು. ತರಕಾರಿಗಳ ಬೆಲೆ ಒಂದು ಹಂತಕ್ಕೆ ಬರುವ ಹೊತ್ತಿಗೆ ತೆಂಗಿನಕಾಯಿ ಬೆಲೆ ಏರಿದೆ. ಹೋಟೆಲ್‌ ಉದ್ಯಮದಲ್ಲಿ ಸ್ಪರ್ಧೆ ಹೆಚ್ಚಿರುವುದರಿಂದ ದಿನೇದಿನೇ ದರ ಬದಲಾಯಿಸಲೂ ಸಾಧ್ಯವಿಲ್ಲ. ಅಡುಗೆಯ ರುಚಿ ವಿಷಯದಲ್ಲಿ ತೆಂಗಿನಕಾಯಿಯದ್ದು ಪ್ರಧಾನ ಪಾತ್ರ. ನಮ್ಮ ‘ತೆಂಗು ಇಂಗು’ ಹೋಟೆಲ್‌ನಲ್ಲಿ ತೆಂಗಿನಕಾಯಿಯನ್ನು ಬಳಸಿಕೊಂಡೇ ಹೆಚ್ಚಿನ ಅಡುಗೆ ತಯಾರಾಗುತ್ತದೆ. ದರ ಹೆಚ್ಚಾಗಿದೆ ಎಂದು ರುಚಿಯಲ್ಲಿ ರಾಜಿಯಾಗಲು ಸಾಧ್ಯವಿಲ್ಲ. ಕೆಲವರು ತೆಂಗಿನ ಬಳಕೆ ಕಡಿಮೆ ಆಗಲು ನಾನಾ ತಂತ್ರ ಅಳವಡಿಸಿಕೊಳ್ಳುತ್ತಾರೆ. ಆದರೆ ಹೋಟೆಲ್‌ಗಳಲ್ಲಿ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ.
–ಗುರುದತ್ತ, ಮಾಲೀಕರು, ‘ತೆಂಗು ಇಂಗು’ ಹೋಟೆಲ್‌ ಮಾಲೀಕ

*


ಬೆಲೆ ಇಳಿಯುತ್ತಿಲ್ಲ
ಒಂದಲ್ಲ ಒಂದು ವಸ್ತುವಿನ ಬೆಲೆ ಏರುತ್ತಲೇ ಇದೆ. ಖಂಡಿತಾ ಇದು ಸಮಸ್ಯೆಯೇ. ಬೆಲೆ ಏರಿದಂತೆ ಹೋಟೆಲ್‌ನವರಿಗೆ ಬೆಲೆ ಏರಿಸುವುದು ಕಷ್ಟ. ಆದರೆ ಕೇಟರಿಂಗ್‌ ವೃತ್ತಿಯಲ್ಲಿರುವವರು ಅಲ್ಪಸ್ವಲ್ಪ ದರ ಏರಿಸಲೇಬೇಕಾಗುತ್ತದೆ. ನಾಗಮಂಗಲ, ಚನ್ನಪಟ್ಟಣ ಸುತ್ತಮುತ್ತಲಿನವರು ಬೆಂಗಳೂರಿನಲ್ಲಿದ್ದರೆ ಅಂಥವರು ಊರಿಂದಲೇ ತೆಂಗಿನಕಾಯಿ ತರಿಸಿಕೊಳ್ಳುತ್ತಾರೆ. ಇನ್ನುಳಿದವರು ತೆಂಗಿನಕಾಯಿ ಮಂಡಿಗೆ ಹೋಗಿ ಖರೀದಿಸುತ್ತಾರೆ. ಅದೂ ಹೆಚ್ಚು ಎನಿಸಿದರೆ ಎಪಿಎಂಸಿಯಲ್ಲೇ ಖರೀದಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಶಿರಸಿಯವನಾದ್ದರಿಂದ ವರ್ಷದಲ್ಲಿ ಏಳೆಂಟು ತಿಂಗಳಿಗೆ ಬೇಕಾಗುವಷ್ಟು ತೆಂಗಿನಕಾಯಿಯನ್ನು ಊರಿನಿಂದಲೇ ತರಿಸಿಕೊಳ್ಳುತ್ತೇನೆ. ವಿಜಯನಗರದಲ್ಲಿ ‘ಚತುರ್ಥಿ ಉಪಹಾರ’ ಹಾಗೂ ಕೇಟರಿಂಗ್‌ ಸೇವೆ ಎರಡೂ ಇರುವುದರಿಂದ ಇದೇ ಲಾಭದಾಯಕ ಎನಿಸಿದೆ. ಅಡುಗೆ ಮಾಡಲು ತೆಂಗಿಗೆ ಬದಲಿ ವ್ಯವಸ್ಥೆ ಇಲ್ಲವೇ ಇಲ್ಲ ಎಂದೇನಿಲ್ಲ. ಆದರೆ ತೆಂಗು ನೀಡುವ ರುಚಿ ಅದಕ್ಕೆ ಬರುವುದಿಲ್ಲ.
–ಮಹೇಶ್‌ ಭಟ್‌, ವಿಜಯನಗರ

*
ಬಿಸಿತುಪ್ಪ ತೆಂಗು
ಅಡುಗೆಗೆ ರುಚಿ ಬರಬೇಕು ಎಂದರೆ ತೆಂಗು ಇರಲೇಬೇಕು. ರುಚಿ ಹಾಗೂ ಆರೋಗ್ಯದ ದೃಷ್ಟಿಯಿಂದ ದಕ್ಷಿಣ ಭಾರತದ ಬಹುತೇಕ ಅಡುಗೆಗಳಲ್ಲಿ ತೆಂಗಿನಕಾಯಿಯನ್ನು ಬಳಸಿಕೊಳ್ಳಲಾಗುತ್ತದೆ. ತೆಂಗು ಇಂಗು ಇದ್ದರೆ ಯಾರೇ ಅಡುಗೆ ಮಾಡಿದರೂ ರುಚಿ ಆಗುತ್ತದೆ ಎನ್ನುವ ಗಾದೆಯೇ ಇದೆ. ಆದರೆ ಇತ್ತೀಚೆಗೆ ತೆಂಗು ಗಗನಕುಸುಮವಾಗಿದೆ. ಬೆಲೆ ಏರಿಕೆ ತೆಂಗು ಬೆಳೆಗಾರರ ಮೊಗದಲ್ಲಿ ಖುಷಿ ಮೂಡಿಸಿದರೆ ಗ್ರಾಹಕರಿಗೆ ಹೊರೆ ಎನಿಸಿದೆ. ಹದಿನೆಂಟರಿಂದ 25 ರೂಪಾಯಿ ಇದ್ದ ತೆಂಗಿನ ಬೆಲೆ ಸದ್ಯ 45ರಿಂದ 50 ರೂಪಾಯಿವರೆಗೆ ಸಾಗಿದೆ. ಮಧ್ಯಮ ಗಾತ್ರದ ಕಾಯಿಗೇ ರಿಟೇಲ್‌ನಲ್ಲಿ ₹35 ಇದೆ. ಸ್ವಲ್ಪ ದೊಡ್ಡದು ಬೇಕು ಎಂದರೆ ₹45ಕ್ಕೂ ಹೆಚ್ಚಿನ ಬೆಲೆ ಇದೆ.

ತೆಂಗಿನಕಾಯಿ ಬೆಲೆ ಕೇಳಿದರೇ ಬೇಸರವಾಗುತ್ತದೆ. ಊರಲ್ಲಿ ತೆಂಗಿನಕಾಯಿ ಬೆಳೆಯುವ ನಾವು ಬೆಂಗಳೂರಿನಲ್ಲಿ 35–40 ರೂಪಾಯಿ ಕೊಡಬೇಕು ಎಂದರೆ ಹೊಟ್ಟೆ ಉರಿಯುತ್ತದೆ. ಅಷ್ಟು ದುಡ್ಡು ಕೊಟ್ಟು ಕೊಂಡರೂ ಒಳಗಿನ ತಿರುಳು ತೆಳುವೇ ಇರುತ್ತದೆ. ಒಂದು ದಿನದ ಅಡುಗೆಗೂ ಸಾಕಾಗುವುದಿಲ್ಲ. ತೆಂಗು ಬಳಸದೆ ಮಾಡಿದ ಅಡುಗೆ ಅಡುಗೆಯೇ ಅಲ್ಲ ಎನಿಸುತ್ತದೆ. ಹೀಗಾಗಿ ಮೊದಲು ಬಳಸುವುದಕ್ಕಿಂತ ಕಡಿಮೆ ಪ್ರಮಾಣದಲ್ಲಿ ತೆಂಗು ಬಳಸುತ್ತಿದ್ದೇನೆ’.
–ಸವಿತಾ, ಗಿರಿನಗರ ನಿವಾಸಿ 

*
ಕೊಬ್ಬರಿ ಬೆಲೆ ಏರಿದೆ
ತೆಂಗಿನಕಾಯಿ ಮಾರುಕಟ್ಟೆಗೆ ಬರುವದೇ ಕಡಿಮೆ ಆಗಿದೆ. ಬರುವ ಕಾಯಿಗಳೂ ಮೊದಲಿನಷ್ಟು ಚೆನ್ನಾಗಿ ಇರುವುದಿಲ್ಲ. ಇತ್ತಿಚೆಗೆ ಕೊಬ್ಬರಿ ಬೆಲೆ ಏರಿರುವ ಹಿನ್ನೆಲೆಯಲ್ಲಿ ಅನೇಕರು ಹಸಿ ಕಾಯಿಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ. ಕೊಬ್ಬರಿ ಬೆಲೆ ₹9 ಸಾವಿರ ಇದ್ದದ್ದು ₹13 ಸಾವಿರಕ್ಕೆ ಏರಿದೆ. ಹೀಗಾಗಿ ಕಾಯಿ ಒಣಗಿಸಿ ಕೊಬ್ಬರಿ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಎಲ್ಲಾ ಕಾರಣಗಳು ಮಾರುಕಟ್ಟೆಯಲ್ಲಿ ತೆಂಗಿನ ಆವಕ ಕಡಿಮೆ ಆಗಿ ಬೆಲೆ ಜಾಸ್ತಿ ಆಗುವುದಕ್ಕೆ ಕಾರಣವಾಗುತ್ತಿವೆ.
–ಎಚ್‌.ಪಿ.ದೇವೇಂದ್ರ. ಶ್ರೀಬೃಹ್ಮದೇವ ಟ್ರೇಡರ್ಸ್‌ ಎಪಿಎಂಸಿ ಯಾರ್ಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.