ADVERTISEMENT

ಪ್ರತಿ ಕ್ಷಣವೂ ಇಲ್ಲಿ ಸವಾಲು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST
ಅಜಯ್‌ ದೇವಗನ್‌
ಅಜಯ್‌ ದೇವಗನ್‌   

ಬಾಲಿವುಡ್‌ ಚಿತ್ರ ಜಗತ್ತಿನಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವವರು ನಟ ಅಜಯ್‌ ದೇವಗನ್‌. ಸದ್ಯ ‘ರೇಡ್‌’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಅಜಯ್‌ ಸಿನಿಕ್ಷೇತ್ರದಲ್ಲಿ ನಿರಂತರತೆ ಉಳಿಸಿಕೊಂಡಿರುವ ಕುರಿತು ಮಾತನಾಡಿದ್ದಾರೆ.

‘ಚಿತ್ರೋದ್ಯಮದಲ್ಲಿ ಯಾವಾಗಲೂ ಪ್ರಸ್ತುತ ಎಂದೆನಿಸಿಕೊಳ್ಳುವುದು ತುಂಬಾ ಕಷ್ಟ. ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ. ಚಿಕ್ಕಪುಟ್ಟ ವಿಷಯಗಳನ್ನೂ ಗಂಭೀರವಾಗಿಯೇ ತೆಗೆದುಕೊಳ್ಳಬೇಕಾಗುತ್ತದೆ. ಅದನ್ನು ಸಾಧಿಸಲು ಕಠಿಣ ಪರಿಶ್ರಮ ಬೇಕು. ಈ ಕ್ಷೇತ್ರದಲ್ಲಿ ಒಮ್ಮೆ ಸಾಧಿಸಿದೆವು ಎಂದಾದರೆ ಆ ಕೀರ್ತಿ ಕೊನೆಯ ತನಕ ನಮ್ಮೊಂದಿಗೆ ಇರುತ್ತದೆ ಎಂದು ಭಾವಿಸಿದರೆ ಅದು ಮೂರ್ಖತನ. ಪ್ರತಿ ಕ್ಷಣವನ್ನೂ ಸವಾಲಾಗಿ ಸ್ವೀಕರಿಸಿ ಮುಂದಡಿಯಿಡುತ್ತಲೇ ಇರಬೇಕು’ ಎಂದಿದ್ದಾರೆ ಅಜಯ್‌.

‘ಸಿಂಗಂ’ ಮತ್ತು ‘ದೃಶ್ಯಂ’ ಸಿನಿಮಾಗಳ ಮೂಲಕ ನಟನಾ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರು ಅಜಯ್‌. ಅವರ ಮುಂದಿನ ಚಿತ್ರ ರೇಡ್‌ ಬಗೆಗೂ ಇಂಥದ್ದೇ ನಿರೀಕ್ಷೆ ಅನೇಕರಿಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಅಜಯ್‌ ‘ಈ ಸಿನಿಮಾ ಜನರಿಗೆ ಹೇಗೆನಿಸುತ್ತದೆ ಎನ್ನುವ ಅರಿವು ನನಗಿಲ್ಲ. ಆದರೆ ರೇಡ್‌ ಚಿತ್ರದಲ್ಲಿ ನಾನು ಅಭಿನಯಿಸುತ್ತಿರುವ ಪಾತ್ರ ಮಾತ್ರ ತೀರಾ ಸವಾಲಿನದ್ದಾಗಿದೆ. ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕನಿಗೆ ಸಿನಿಮಾ ನೋಡುತ್ತಿದ್ದೇನೆ ಎನ್ನಿಸಬಾರದು. ನಿಜವಾದ ಘಟನೆ ನಡೆಯುತ್ತಿದೆ ಎನ್ನುವಂತೆ ಭಾಸವಾಗಬೇಕು. ಆ ಪಾತ್ರದಲ್ಲಿ ಪ್ರೇಕ್ಷಕ ಒಂದಾಗಬೇಕು. ಇದೇ ಚಿತ್ರ ನಿರ್ಮಾಣಕ್ಕಿರುವ ಸವಾಲು’ ಎಂದು ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದಾರೆ ಅವರು.

1980ರ ದಶಕದ ತೆರಿಗೆ ಇಲಾಖೆ ಅಧಿಕಾರಿಯೊಬ್ಬರ ಕಥಾನಕವನ್ನು ಆಧರಿಸಿರುವ ರೇಡ್‌ ಚಿತ್ರದಲ್ಲಿ ಇಲಿಯಾನಾ ಡಿ ಕ್ರೂಜ್ ಅವರನ್ನೂ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.