ADVERTISEMENT

ಮಕ್ಕಳಿಗೆ ಏಂಜೆಲಿನಾ ಪಾಠ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ಮಕ್ಕಳಿಗೆ ಏಂಜೆಲಿನಾ ಪಾಠ
ಮಕ್ಕಳಿಗೆ ಏಂಜೆಲಿನಾ ಪಾಠ   

ಚೆಲುವೆ, ನಟಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಏಂಜೆಲಿನಾ ಜೋಲಿ ಮಾನವೀಯ ಕೆಲಸಗಳಿಂದಲೂ ಜನಪ್ರಿಯತೆ ಗಳಿಸಿದವರು. ಇದೇ ನಿಲುವನ್ನು ತಮ್ಮ ಹೆಣ್ಣುಮಕ್ಕಳಿಗೂ ದಾಟಿಸುವ ಪ್ರಯತ್ನ ಅವರದ್ದು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು ‘ನಿಮಗೆ ಸಿಕ್ಕಿರುವಂಥದ್ದೇ ಅವಕಾಶಗಳು ಬೇರೆಯವರಿಗೂ ಸಿಗುವಂತಾಗಬೇಕು. ನಿಮಗಾಗಿ ಏನು ಮಾಡಿಕೊಳ್ಳುತ್ತೀರಿ ಎನ್ನುವುದಕ್ಕಿಂತ ಬೇರೆಯವರಿಗೆ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಮೇಕಪ್‌, ಚೆಂದದ ದಿರಿಸು ತೊಟ್ಟು ಚೆಲುವಾಗುವುದನ್ನು ಎಲ್ಲರೂ ಮಾಡುತ್ತಾರೆ. ಆದರೆ ಮನಸು ನೀವು ಏನು ಎನ್ನುವುದನ್ನು ಸಾರಿ ಹೇಳುತ್ತದೆ. ಹೀಗಾಗಿ ಮೊದಲು ನೀವ್ಯಾರು, ನಿಮ್ಮ ಯೋಚನೆಗಳೇನು, ನಿಮ್ಮ ನಿಲುವು ಏನು ಎನ್ನುವುದನ್ನು ನಿರ್ಧರಿಸಿಕೊಳ್ಳಿ. ನೀವು ಏನೆಲ್ಲಾ ಆಗಬೇಕು ಎಂದು ಆಸೆ ಪಡುತ್ತೀರೊ ಅದು ಇತರರಿಗೂ ಅನ್ವಯ ಎನ್ನುವುದನ್ನು ಮನದಲ್ಲಿಟ್ಟುಕೊಂಡು ಅದಕ್ಕಾಗಿ ಹೋರಾಡಿ ಎಂದೇ ನನ್ನ ಮೂವರು ಮಕ್ಕಳಿಗೆ ಕಲಿಸಿಕೊಟ್ಟಿದ್ದೇನೆ’ ಎಂದಿದ್ದಾರೆ ಜೋಲಿ.

‘ಮೂವರು ಹೆಣ್ಣುಮಕ್ಕಳಿಗೂ ಅವರಿಷ್ಟದಂತೆ ಇರಲು ಬಿಡುತ್ತೇನೆ. ಇವತ್ತು ಹೆಣ್ಣುಮಕ್ಕಳು ಈ ಸ್ಥಾನಕ್ಕೆ ಬರಲು ಹಿಂದಿನ ಮಹಿಳೆಯರು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ, ಎಷ್ಟೆಲ್ಲಾ ಹೋರಾಟ ನಡೆಸಿದ್ದಾರೆ. ಹೀಗಾಗಿ ನಮ್ಮತನಕ್ಕಾಗಿ ನಾವು ಹೋರಾಡುವಂತೆ ಬೇರೆಯವರ ಅಸ್ಮಿತೆಗಾಗಿಯೂ ಹೋರಾಡುವುದಕ್ಕೆ ಸಿದ್ಧರಿರಬೇಕು’ ಎಂದು ತಮ್ಮ ಮನದ ಭಾವನೆಗಳನ್ನು ಅರುಹಿದ್ದಾರೆ ಏಂಜೆಲಿನಾ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.