ADVERTISEMENT

‘ಸ್ವಾಭಿಮಾನಿಯಾಗಿ ಬದುಕಬೇಕು’

ಸುಮನಾ ಕೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
‘ಸ್ವಾಭಿಮಾನಿಯಾಗಿ ಬದುಕಬೇಕು’
‘ಸ್ವಾಭಿಮಾನಿಯಾಗಿ ಬದುಕಬೇಕು’   

ನಾನು ಹುಟ್ಟುತ್ತಾನೇ ಅಂಗವಿಕಲ. ಕಾಲು ಬೆಳವಣಿಗೆ ಸರಿಯಿಲ್ಲ. ಕುಂಟುತ್ತಾ ನಡೆಯಬೇಕು. ಆದರೆ ಇದನ್ನು ಯಾವತ್ತೂ ಸಮಸ್ಯೆ ಎಂದು ಮನಸ್ಸಿಗೆ ತೆಗದುಕೊಂಡಿಲ್ಲ. ನನ್ನ ಕಾಲ ಮೇಲೆ ನಾನೇ ನಿಲ್ಲಬೇಕು. ಸ್ವಾಭಿಮಾನಿಯಾಗಿ ಬದುಕಬೇಕು ಇವಿಷ್ಟೇ ನನ್ನ ಮನಸ್ಸಿನಲ್ಲಿರುವುದು. ಅಮ್ಮ, ಅಣ್ಣನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದೇ ನನ್ನ ಆಸೆ. ಅದಕ್ಕಾಗಿ ಬೆಳಗ್ಗಿನಿಂದ ರಾತ್ರಿ ತನಕ ಎಳನೀರು ವ್ಯಾಪಾರ ಮಾಡ್ತೀನಿ.

ನನ್ನ ಹೆಸರು ಚಂದ್ರಶೇಖರ. 28 ವರ್ಷ ನನಗೆ. ಹಲಸೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದೇವೆ. ನಾನು ಹುಟ್ಟಿ ಬೆಳೆದಿದ್ದು ಹಲಸೂರಿನಲ್ಲಿಯೇ. ಹುಟ್ಟುವಾಗಲೇ ನನಗೆ ಪೋಲಿಯೊ ಇತ್ತು. ಕಾಲಿನ ಬೆಳವಣಿಗೆ ಸರಿಯಾಗಿ ಆಗಲಿಲ್ಲ. ನಿಧಾನವಾಗಿ ನಡೆಯಲು ಆಗುತ್ತೆ. ನಾನು ಓಡಾಡೋಕೆ ನಾಲ್ಕು ಚಕ್ರದ ಸೈಕಲ್‌ ಇಟ್ಕೊಂಡಿದ್ದೀನಿ. ಯಾರನ್ನೂ ಅವಲಂಬಿಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುತ್ತೇನೆ.

ನಾನು ಎಸ್ಸೆಸ್ಸೆಲ್ಸಿ ತನಕ ಓದಿದ್ದೇನೆ. ಸುಮಾರು ಕಡೆ ಕೆಲಸಕ್ಕಾಗಿ ಅಲೆದಾಡಿದೆ. ಆದರೆ ನನ್ನನ್ನು ನೋಡಿ ಕೆಲವರು ಕೆಲಸ ಕೊಡಲಿಲ್ಲ. ದೈಹಿಕ ಶ್ರಮ ಬೇಡುವ ಕೆಲಸಗಳನ್ನು ನನ್ನಿಂದ ಮಾಡಕ್ಕಾಗುತ್ತಿರಲಿಲ್ಲ. ಕಂಪನಿಯೊಂದರಲ್ಲಿ ಆಫೀಸ್‌ ಅಸಿಸ್ಟೆಂಟ್‌ ಆಗಿ ಕೆಲಸ ಮಾಡಿದೆ. ಆದರೆ ತುಂಬ ದಿನ ಕೆಲಸ ಮಾಡಕ್ಕಾಗಲಿಲ್ಲ. ಕಷ್ಟವಾಗುತ್ತಿತ್ತು. ಆಫೀಸ್‌ ಬಾಯ್‌ ಆಗಿ ಬೇರೆ ಬೇರೆ ಕಡೆಗಳಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲೆಲ್ಲಾ ತುಂಬ ಓಡಾಟ ಇರುತ್ತದೆ. ನಾನು ಎಷ್ಟೇ ನೋವು ಆಗುತ್ತಿದ್ದರೂ ಅದನ್ನು ಎದುರು ತೋರಿಸುತ್ತಿರಲಿಲ್ಲ. ಆದರೆ ನನ್ನ ದೇಹಕ್ಕೆ ಅಷ್ಟು ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೆಲಸ ಬಿಡಬೇಕಾಗುತ್ತಿತ್ತು.

ADVERTISEMENT

ಕೆಲಸಕ್ಕಿಂತ ಏನಾದರೂ ವ್ಯಾಪಾರ ಮಾಡುವುದು ಲೇಸು ಎಂದು ಅನಿಸುತ್ತಿತ್ತು. ನನ್ನ ದೊಡ್ಡಪ್ಪನ ಮಗನೂ ಅಂಗವಿಕಲ. ಅವನು ಎಳನೀರು ವ್ಯಾಪಾರ ಮಾಡುತ್ತಿದ್ದಾನೆ. ಹೀಗಾಗಿ ನಾನು ಎಳನೀರು ವ್ಯಾಪಾರ ಮಾಡಲು ಆರಂಭಿಸಿದೆ. ಇದರಲ್ಲಿ ಏನೂ ಕಷ್ಟ ಆಗ್ತಿಲ್ಲ. ಕುತ್ಕೊಂಡೆ ವ್ಯಾಪಾರ ಮಾಡಬಹುದು. ಓಡಾಟವೂ ಅಷ್ಟು ಬೇಕಾಗಿಲ್ಲವಾದ್ದರಿಂದ ನನ್ನಂತಹವನಿಗೆ ಇಂತಹ ವ್ಯಾಪಾರ ಕೈಹಿಡಿಯಿತು.

ನಮ್ಮಣ್ಣ ಆಫೀಸ್‌ ಬಾಯ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಅಮ್ಮ ಈಗಲೂ ಮನೆಗೆಲಸಕ್ಕೆ ಹೋಗುತ್ತಾರೆ. ದಿನಸಿ, ಮನೆ ಬಾಡಿಗೆ ಇದೆಲ್ಲಾ ಸೇರಿ ಇಬ್ಬರ ಸಂಪಾದನೆಯಿಂದ ಮೂರು ಜನರ ಹೊಟ್ಟೆ ತುಂಬಿಸಕ್ಕಾಗಲ್ಲ. ನಾನೂ ದುಡಿಯುವುದು ಅನಿವಾರ್ಯ. ಈಗ ಈ ವ್ಯಾಪಾರ ನನ್ನ ಕೈಹಿಡಿದಿದೆ. ಲಾರಿಯವರು ಇಲ್ಲಿ ಎಳನೀರು ಇಳಿಸಿ ಹೋಗುತ್ತಾರೆ. ದಿನಕ್ಕೆ 400–500 ಎಳನೀರು ಹಾಕಿಸ್ಕೊತೀನಿ. ಖರ್ಚು ಕಳೆದು ಬರುವ ಲಾಭವನ್ನು ಅಮ್ಮನಿಗೆ ಕೊಡ್ತೀನಿ.

ಇಲ್ಲೇ ಫುಟ್‌ಪಾತ್‌ ಮೇಲೆನೇ ಅಂಗಡಿ ಇಟ್ಕೊಂಡಿರೋದು. ಇಲ್ಲಿ ತನಕ ಏನೂ ತಾಪತ್ರಯ ಆಗಿಲ್ಲ. ಖರ್ಚಾಗದೇ ಉಳಿದ ಎಳನೀರುಗಳ ಮೇಲೆ ಪ್ಲಾಸ್ಟಿಕ್‌ ಹೊದೆಸಿ ಹೋಗುತ್ತೇನೆ. ಹೀಗೆ ಇಟ್ಟುಹೋಗುವ ಎಳನೀರನ್ನು ಯಾರೂ ಕದಿಯುವುದಿಲ್ಲ. ಒಂದು ವೇಳೆ ಕದ್ರೂ ಇಲ್ಲೇ ಟ್ರಾಫಿಕ್‌ ಸಿಗ್ನಲ್‌ ಸಿಸಿಟಿವಿ ಇದೆ. ಗೊತ್ತಾಗೇ ಆಗುತ್ತೆ. ಅದೊಂದು ಧೈರ್ಯ ಇದೆ.

ಅಮ್ಮ ಮದುವೆಯಾಗು ಅಂತಾಳೆ. ಆದರೆ ನನಗೆ ಮದುವೆಯಾಗುವ ಆಸೆ ಇಲ್ಲ. ನನ್ನಂಥವನನ್ನು ಒಪ್ಪಿ, ಮದುವೆಯಾಗೋಕೆ ಹುಡುಗಿ ಸಿಕ್ಕಿದರೆ ಆಗ ಯೋಚ್ನೆ ಮಾಡ್ತೀನಿ. ಈಗಿನ ಜಮಾನಾದಲ್ಲಿ ಎಲ್ಲಾ ದುಡ್ಡಿನಿಂದಲೇ ನಡೆಯೋದು. ಮಾನವೀಯತೆ, ಪ್ರೀತಿಗೆ ಬೆಲೆಯಿಲ್ಲ ಎಂದು ಅನಿಸ್ತಿದೆ. ದುಡ್ಡಿದ್ರೆ ಮಾತ್ರ ಇಲ್ಲಿ ಬದುಕಬಹುದು. ಹೀಗಾಗಿಯೇ ನಾನು ನ್ಯಾಯವಾಗಿಯೇ ದುಡ್ಡು ಸಂಪಾದಿಸಬೇಕು ಎಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10ರವರೆಗೆ ದುಡಿಯುತ್ತೇನೆ. ನಂಗೆ ಹೆಚ್ಚು ಆಸೆ ಇಲ್ಲ. ಜೀವನ ಯಾವ ತಾಪತ್ರಯವೂ ಇಲ್ಲದೇ ಹೀಗೆ ಮುಂದುವರಿದರೆ ಸಾಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.