ADVERTISEMENT

‘ಶ್ರದ್ಧೆ, ಶ್ರಮ ನನ್ನ ಮಂತ್ರ’

ಪದ್ಮನಾಭ ಭಟ್ಟ‌
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST
‘ಶ್ರದ್ಧೆ, ಶ್ರಮ ನನ್ನ ಮಂತ್ರ’
‘ಶ್ರದ್ಧೆ, ಶ್ರಮ ನನ್ನ ಮಂತ್ರ’   

ನೂರ ಐವತ್ತೊಂದು ಸಿನಿಮಾಗಳ ಈ ಸುದೀರ್ಘ ನಟನಾಪಯಣ ಹೇಗಿತ್ತು?
-ನಾನು ಲಿಫ್ಟ್‌ನಲ್ಲಿ ಹೋದವನಲ್ಲ. ಒಂದೊಂದೇ ಮೆಟ್ಟಿಲುಗಳನ್ನು ಹತ್ತಿಕೊಂಡು, ಕೆಳಗೆ ಜಾರಿ ಬಿದ್ದು, ಮತ್ತೆ ಎದ್ದು ಹತ್ತಿ, ಮತ್ತೆಲ್ಲೋ ಒಡೆದ ಮೆಟ್ಟಿಲಲ್ಲಿ ಜಾರಿ ಬೀಳುವಾಗ ಇನ್ನೇನೋ ಹಿಡಿದುಕೊಂಡು ಮತ್ತೆ ಹತ್ತಿಕೊಂಡು... ಹೀಗೆ ಮೇಲಕ್ಕೇರಿದವನು ನಾನು. ತುಂಬಾ ಗೆಲುವನ್ನು ನೋಡಿದ್ದೇನೆ. ಅಷ್ಟೇ ಸೋಲುಗಳನ್ನೂ ನೋಡಿದ್ದೇನೆ. ಬೀಳೋದು ಸಹಜ. ಎದ್ದು ಓಡುವವನೇ ಗಂಡಸು ಎಂಬುದು ನನ್ನ ನಂಬಿಕೆ. ಈ ನಂಬಿಕೆಯಿಂದಲೇ ನಾನು ಯಾವತ್ತೂ ಬಿದ್ದಾಗ ಖಿನ್ನನಾಗಲಿಲ್ಲ, ಗೆದ್ದಾಗ ಬೀಗಲಿಲ್ಲ.

ನನ್ನ ಮಗಳಿಗೂ ಅದನ್ನೇ ಹೇಳಿಕೊಟ್ಟಿದ್ದೇನೆ. ಸಿನಿಮಾ ಹಿಟ್‌ ಆಗತ್ತೋ ಇಲ್ಲವೋ ಬೇರೆ ಮಾತು. ‘ಪ್ರೇಮ ಬರಹ’ ಸಿನಿಮಾ ಬಿಡುಗಡೆಯಾಗುವ ಮೊದಲೇ ನನ್ನ ಪಾಲಿಗೆ ಸೂಪರ್‌ ಹಿಟ್‌ ಆಗಿಬಿಟ್ಟಿದೆ. ಯಾಕೆಂದರೆ ನಾನು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇನೆ. ನನ್ನ ಶ್ರಮದಲ್ಲಿ ಕುಂದಿದ್ದರೆ ಅದು ನನ್ನನ್ನು ಕಾಡುತ್ತಿತ್ತೇನೋ. ಆದರೆ ಆ ರೀತಿ ಆಗಿಲ್ಲ. 

ಈ ಮನಃಸ್ಥಿತಿ ಇರುವುದರಿಂದಲೇ ಇಲ್ಲಿಯವರೆಗೂ ಓಡಿಕೊಂಡು ಬರಲು ಸಾಧ್ಯವಾಗಿದೆ. ಓಡುತ್ತಲೇ ಇದ್ದೇನೆ. ಈಗಲೂ ಕನ್ನಡ, ತೆಲುಗು, ತಮಿಳು ಭಾಷೆಗಳಿಂದ ಅವಕಾಶಗಳು ಬರುತ್ತಲೇ ಇವೆ. ಈಗೀಗ ಹಿಂದಿ ಸಿನಿಮಾಗಳಲ್ಲಿಯೂ ಅವಕಾಶಗಳು ಬರುತ್ತಿವೆ. ಶ್ರದ್ಧೆ ಮತ್ತು ಶ್ರಮ ನಮ್ಮಲ್ಲಿದ್ದರೆ ಸಾಕು. ಉಳಿದಿದ್ದೆಲ್ಲ ತಂತಾನೆಯೇ ನಮ್ಮನ್ನು ಅರಸಿಕೊಂಡು ಬರುತ್ತವೆ.

ADVERTISEMENT

ನಟನೆ ಮತ್ತು ನಿರ್ದೇಶನ ಇವೆರಡರಲ್ಲಿ ನಿಮಗೆ ಕಂಫರ್ಟ್‌ ಅನಿಸುವುದು ಯಾವುದು?
ಒಳ್ಳೆಯ ಕೆಲಸ ಮಾಡಬೇಕು ಎಂಬ ಮನಸ್ಸಿದ್ದವರಿಗೆ ಇಂಥದ್ದೇ ಕಂಫರ್ಟ್‌ ಅಂತ ಇರಲ್ಲ. ಆಸಕ್ತಿ (ಪ್ಯಾಶನ್‌) ಇದ್ದಾಗ ಕೆಲಸದಲ್ಲಿನ ಕಷ್ಟ ಅಷ್ಟಾಗಿ ಬಾಧಿಸುವುದಿಲ್ಲ. ಅದಿಲ್ಲದಿದ್ದರೆ ಸುಮ್ಮನೆ ನಡೆಯುವುದೂ ಕಷ್ಟವೇ. ಪ್ಯಾಷನ್‌ ಇದ್ದಾಗ ನಡೆಯುವುದೇನು; ಜಿಗಿಯುವುದೂ ಸುಲಭವೇ ಆಗುತ್ತದೆ. ಹಾಗಂತ ಕಷ್ಟ ಇಲ್ಲ ಅಂತಲ್ಲ, ಆ ಕಷ್ಟ ಸಹನೀಯವಾಗಿರುತ್ತದೆ.

‘ಪ್ರೇಮ ಬರಹ’ ಸಿನಿಮಾಕ್ಕೆ ಪ್ರತಿಕ್ರಿಯೆ ಹೇಗಿದೆ?
-ತುಂಬಾ ಚೆನ್ನಾಗಿದೆ. ಎಲ್ಲಿ ಹೋದರೂ ಮಗಳ ನಟನೆಯನ್ನು ಪ್ರಶಂಸಿಸುತ್ತಾರೆ. ಚಿತ್ರವನ್ನು ನೋಡಿದ ಸಿನಿಮಾ ನಟರೂ ಮೆಚ್ಚಿಕೊಂಡಿದ್ದಾರೆ. ನಟಿಯಾಗಿ ನನ್ನ ಮಗಳಿಗೆ ಸಿಗುತ್ತಿರುವ ಈ ಪ್ರಶಂಸೆ ನನಗೆ ತುಂಬ ಖುಷಿ ಕೊಡುತ್ತದೆ. ಅದಕ್ಕಿಂತ ಇನ್ನೇನು ಬೇಕು? ನಾನು ಈ ಸಿನಿಮಾ ಮಾಡಿದ್ದೇ ಮಗಳನ್ನು ಸಿನಿಮಾರಂಗಕ್ಕೆ ನಟಿಯಾಗಿ ಪರಿಚಯಿಸಬೇಕು ಅಂತ. ಅದು ಈಡೇರಿದೆ. ಇದು ನನಗೆ ಸಿಕ್ಕ ದೊಡ್ಡ ಗೆಲುವು.

ಮಗಳು ಇಷ್ಟು ಚೆನ್ನಾಗಿ ನಟಿಸಬಲ್ಲಳು ಎಂದು ನೀವು ಅಂದುಕೊಂಡಿದ್ದಿರಾ?
-ಅವಳಿಗೆ ನಟನೆಯ ಕುರಿತು ಇರುವ ಆಸಕ್ತಿ ಗಮನಿಸುತ್ತಿದ್ದೆ. ಆಸಕ್ತಿ ಇದ್ದರೆ ಯಾರು ಏನು ಬೇಕಾದರೂ ಮಾಡಬಹುದು ಎಂಬುದು ನನ್ನ ನಂಬಿಕೆ. ಈ ನಂಬಿಕೆಯಿಂದಲೇ ಉದ್ದುದ್ದ ಡೈಲಾಗ್‌ಗಳು, ಭಾವಾಭಿವ್ಯಕ್ತಿಯನ್ನೇ ಪ್ರಧಾನವಾಗಿರಿಸಿಕೊಂಡ ಸನ್ನಿವೇಶಗಳನ್ನು ಬರೆದೆ. ಇವೆಲ್ಲವೂ ಕಲಾವಿದರ ಪ್ರತಿಭೆ ಮತ್ತು ಪರಿಶ್ರಮ ಇದ್ದರೇನೇ ಮಾಡಲು ಸಾಧ್ಯ. ಏನೋ ಗೊತ್ತಿಲ್ಲ, ಅವಳ ತಾತ ನಟ, ತಂದೆ, ತಾಯಿ, ಕುಟುಂಬದ ಹಲವರು ನಟನೆಯಲ್ಲಿದ್ದವರು. ಬಹುಶಃ ಅವಳ ರಕ್ತದಲ್ಲಿಯೇ ಈ ಪ್ರತಿಭೆ ಇತ್ತು ಅನಿಸುತ್ತದೆ. ಅದನ್ನು ಈ ಸಿನಿಮಾದಲ್ಲಿ ಸಾಬೀತುಗೊಳಿಸಿದಳು.

ಐಶ್ವರ್ಯಾ ಅವರ ಎರಡನೇ ಸಿನಿಮಾ ಬದುಕಿನ ಮುಂದಿನ ಹೆಜ್ಜೆಯನ್ನೂ ನೀವೇ ನಿರ್ಧರಿಸುತ್ತೀರಾ?
ಖಂಡಿತ ಇಲ್ಲ. ಮಗಳನ್ನು ಸಿನಿಮಾರಂಗಕ್ಕೆ ಪರಿಚಯಿಸಬೇಕಿತ್ತು. ಪರಿಚಯಿಸಿದ್ದೇನೆ. ಮುಂದಿನ ನಿರ್ಧಾರದ ಸಂಪೂರ್ಣ ಸ್ವಾತಂತ್ರ್ಯ ಅವಳದೇ. ಯಾವ್ಯಾವ ಥರದ ಸಿನಿಮಾ ಮಾಡಬೇಕು, ಯಾವ್ಯಾವ ಥರದ ಪಾತ್ರಗಳನ್ನು ಮಾಡಬೇಕು ಎನ್ನುವುದು ಅವಳ ಇಷ್ಟಕ್ಕೆ ಬಿಟ್ಟಿದ್ದು.

‘ಪ್ರೇಮ ಬರಹ’ ಸಿನಿಮಾಕ್ಕೆ ಪತ್ರಿಕೆಗಳಲ್ಲಿ ಬಂದ ವಿಮರ್ಶೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಿರಿ...
-ಸಿನಿಮಾ ಚೆನ್ನಾಗಿದೆ, ಅಥವಾ ಚೆನ್ನಾಗಿಲ್ಲ ಎಂದು ಹೇಳುವ ಅಧಿಕಾರ ಎಲ್ಲರಿಗೂ ಇರುತ್ತದೆ. ಆದರೆ ಇದಕ್ಕೆ ಇಷ್ಟೇ ರೇಟು ಎಂದು ನಿಗದಿಪಡಿಸುವುದು ಅಷ್ಟು ಸರಿಯಲ್ಲವೇನೋ. ಇಷ್ಟಕ್ಕೂ ನಾನು ಯಾವ ರೀತಿ ಸಿನಿಮಾ ಮಾಡಿದ್ದೇನೆ? ಯಾವ ಅಶ್ಲೀಲತೆಯೂ ಇಲ್ಲದ, ದೇಶಭಕ್ತಿ ಮತ್ತು ಪ್ರೇಮಕಥೆ ಇರುವಂಥ ಸಿನಿಮಾ. ಒಬ್ಬೊಬ್ಬ ಸೈನಿಕನೂ ಎಷ್ಟು ಕಷ್ಟಪಡುತ್ತಾನೆ. ಅವನ ಸಂಕಷ್ಟಗಳು, ಭಾವನೆಗಳು, ಅವನ ಮನೆಯಲ್ಲಿನ ಪರಿಸ್ಥಿತಿಗಳನ್ನು ತೋರಿಸಿದ್ದೇನೆ. ಇಷ್ಟು ಒಳ್ಳೆಯ ವಿಷಯಗಳನ್ನು ಹೇಳಿದ್ದಕ್ಕೆ ಯಾಕೆ ಇಷ್ಟು ಕಡಿಮೆ ರೇಟಿಂಗ್‌ ಸಿಕ್ಕಿತು ಎಂದು ಒಮ್ಮೆ ಬೇಸರವಾಗಿದ್ದು ನಿಜ. ಆ ಬೇಸರದಲ್ಲಿಯೇ ಕೊಂಚ ಅತಿಯಾಗಿ ರಿಯಾಕ್ಟ್‌ ಮಾಡಿದೆ ಅನಿಸುತ್ತದೆ.

ನಿಮ್ಮ ಮುಂದಿನ ಸಿನಿಮಾಗಳು?
ಒಂದಿಷ್ಟು ಕಥೆಗಳನ್ನು ಮಾಡಿಟ್ಟುಕೊಂಡಿದ್ದೇನೆ. ಪ್ರತಿದಿನವೂ ಅವುಗಳನ್ನು ತಿದ್ದುತ್ತಿದ್ದೇನೆ. ನಟನೆಯಲ್ಲಿಯೂ ತೊಡಗಿಕೊಳ್ಳುತ್ತಿದ್ದೇನೆ. ‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನೂ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.