ADVERTISEMENT

‘ಶಾಸ್ತ್ರೀಯ ಸಂಗೀತವೇ ಯಶಸ್ಸಿನ ಬುನಾದಿ’

ಅಮೃತ ಕಿರಣ ಬಿ.ಎಂ.
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST
ಪಂ. ಬಸವರಾಜ ಮುಗಳಖೋಡ
ಪಂ. ಬಸವರಾಜ ಮುಗಳಖೋಡ   

ಘಟಪ್ರಭಾ ನದಿ ದಂಡೆ ಮೇಲಿರುವ ಗೋಕಾಕ ತಾಲೂಕಿನ ಮುನ್ಯಾಳ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಬಸವರಾಜ ಮುಗಳಖೋಡ ಅವರದ್ದು ಕೃಷಿ ಮನೆತನ. ಇವರ ತಾತ ಲಕ್ಷ್ಮಣ್ ಶಿವಭಜನೆ ಕಲಾವಿದರು. ತಂದೆ ಭೀಮಪ್ಪ ಅವರು ನಾಟಕ ಕಲಿಸುವ ಮೇಷ್ಟ್ರು.

ಆರಂಭದಲ್ಲಿ ಚಿಕ್ಕಮಕ್ಕಳ ಪಾತ್ರಗಳನ್ನು ಮಾಡಿ ತಂದೆ-ತಾತನವರಿಂದ ಸೈ ಎನಿಸಿಕೊಂಡಿದ್ದರು. ನಾಟಕಗಳಿಗೆ ಹಾಡುತ್ತಾ, ಶಿವಭಜನೆ ಮಾಡುತ್ತಾ ಅವುಗಳ ಸಂಸ್ಕಾರ ಸಿದ್ಧಿಸಿಕೊಂಡರು. ಮನೆಯಲ್ಲಿದ್ದ ಕಲೆಯ ಪರಂಪರೆ ಇವರ ಕೈ ಹಿಡಿಯಿತು.

ಎಳವೆಯಲ್ಲಿಯೇ ಇದ್ದ ಸಂಗೀತದ ಬಗೆಗಿನ ಸೆಳೆತ ಅವರನ್ನು ಹುಬ್ಬಳ್ಳಿವರೆಗೂ ಕರೆದುಕೊಂಡು ಹೋಯಿತು. ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಅರ್ಜುನ್‍ಸಾ ನಾಕೋಡ್ ಹಾಗೂ ಅವರ ಪುತ್ರ ಬಾಲಚಂದ್ರ ನಾಕೋಡ್ ಅವರಿಂದ ಹಿಂದೂಸ್ತಾನಿಯ ಅಧ್ಯಾಯಗಳನ್ನು ಕಲಿಯಲಾರಂಭಿಸಿದರು. ಇವರ ಸಂಗೀತಾಸಕ್ತಿಗೆ ಬೆಂಬಲವಾಗಿ ನಿಂತ ಹುಬ್ಬಳ್ಳಿಯ ಜಡಿಸಿದ್ಧಾಶ್ರಮದ ಪೀಠಾಧಿಪತಿ ಡಾ. ಶಿವಾನಂದ ಭಾರತಿ ಸ್ವಾಮೀಜಿ ಇವರಿಗೆ ಆಶ್ರಯ ನೀಡಿ ಸಲಹಿದರು.

ADVERTISEMENT

‘ಸಂಗೀತ ಕಷ್ಟ. ತುಂಬಾ ತಾಳ್ಮೆಯಿಂದ, ಕಷ್ಟಪಟ್ಟು ಕಲಿತರೆ ಮಾತ್ರ ಈ ವಿದ್ಯೆ ಒಲಿಯುತ್ತೆ. ಸಾವಿರಾರು ವಿದ್ಯಾರ್ಥಿಗಳಂತೆ ನಾಲ್ಕು ದಿನ ಕಲಿತು ಹೋಗುವುದಾದರೆ ಕಲಿಯುವುದು ಬೇಡ’ ಎಂದು ಗುರುಗಳಾದ ಅರ್ಜುನ್‍ಸಾ ನಾಕೋಡ್ ಅವರು ಷರತ್ತು ವಿಧಿಸಿದ್ದನ್ನು ಮುಗಳಖೋಡ ಅವರು ನೆನಪಿಸಿಕೊಳ್ಳುತ್ತಾರೆ. ಅಂದಿನಿಂದಲೂ ನಿತ್ಯ ಬೆಳಗ್ಗೆ ಸ್ನಾನ ಮಾಡಿ ಕೂತು ಎರಡು ಗಂಟೆ ಅಭ್ಯಾಸ ಮಾಡುತ್ತೇನೆ ಎನ್ನುವ ಅವರು, ಸಾಧನೆಗೆ ಕಠಿಣ ಅಭ್ಯಾಸವೊಂದೇ ದಾರಿ ಎಂಬ ಗುರುಗಳ ಮಾತನ್ನು ಶ್ರದ್ಧೆಯಿಂದ ಪಾಲಿಸುತ್ತಾ ಬಂದಿದ್ದಾರೆ. ಅಭ್ಯಾಸವಿಲ್ಲದಿದ್ದರೆ ಸಂಗೀತದ ಮೇಲಿನ ಹಿಡಿದ ತಪ್ಪಿ, ಅದು ಸತ್ವ ಕಳೆದುಕೊಳ್ಳುತ್ತದೆ ಎನ್ನುತ್ತಾರೆ ಅವರು.

ಶಾಸ್ತ್ರೀಯ ಸಂಗೀತದ ಜೊತೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರಾಗಿರುವ ವಚನ ಸಂಗೀತ, ದಾಸರ ಪದಗಳು ಮತ್ತು ಅಭಂಗ್, ಭಾವಗೀತೆಗಳನ್ನು ಗುರುಗಳು ಪರಿಯಿಸಿದರು. ‘ಯೆಮನ್, ಮಾಲಕಂಸ್, ಭಾಗ್ಯಶ್ರೀ, ತೋಡಿ, ಪೂರಿಯಾ ರಾಗಗಳನ್ನು ಹಾಡುವಾಗ ಆನಂದ ಅನುಭವಿಸಿದ್ದೇನೆ’ ಎನ್ನುವ ಅವರಲ್ಲಿ ಸಂಗೀತದ ಮೇಲಿನ ಆಸ್ಥೆ ವ್ಯಕ್ತವಾಗುತ್ತದೆ.

ಸಾಧನೆಯ ಹಂತದಲ್ಲಿ ನಾಡಿನ ಹೆಸರಾಂತ ವೇದಿಕೆಗಳಲ್ಲಿ ಹಾಡುವ ಅವಕಾಶ ಇವರಿಗೆ ದೊರೆಯಿತು. ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ, ಸವಾಯಿ ಗಂಧರ್ವರ ಪುಣ್ಯಸ್ಮರಣೆ ಸಂಗೀತೋತ್ಸವ, ತರಳಬಾಳು ಹುಣ್ಣಿಮೆ, ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಹಾಡಿ ಸಂಗೀತಾಸಕ್ತರ ಮನ ತಣಿಸಿದ್ದಾರೆ. ಎಸ್‍ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ನಾಲ್ಕು ಕಂತುಗಳಿಗೆ ತೀರ್ಪುಗಾರರಾಗಿ ಭಾಗವಹಿಸಿ ಅವರಿಂದ ಬೆನ್ನು ತಟ್ಟಿಸಿಕೊಂಡಿದ್ದಾರೆ.

ಒಳ್ಳೆಯ ಕಲಾವಿದನಿಗೆ ಒಂದು ಸಂಸ್ಥೆ ಇರಬೇಕು. ವಿದ್ಯಾರ್ಥಿಗಳನ್ನು ರೂಪುಗೊಳಿಸಲು, ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನೆಲೆ ಬೇಕು ಎಂದು ಹೇಳುತ್ತಿದ್ದ ಹಂಸಲೇಖ ಅವರ ಅನಿಸಿಕೆಯಿಂದ ಪ್ರೇರೇಪಣೆಗೊಂಡು 2014ರಲ್ಲಿ ಹುಟ್ಟುಹಾಕಿದ್ದೇ ‘ಝೇಂಕಾರ ಭಾರತಿ ಮ್ಯೂಸಿಕ್ ಅಂಡ್ ಕಲ್ಚರಲ್ ಸೆಂಟರ್’.

ಸಂಗೀತ ಅಕಾಡೆಮಿಯ ಸಂಸ್ಥಾಪಕ ಕಾರ್ಯದರ್ಶಿಯಾಗಿ ಕಳೆದ ಮೂರು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳನ್ನು ರೂಪಿಸಿದ ಹೆಮ್ಮೆ ಇವರದ್ದು. ತರಳಬಾಳು ಕೇಂದ್ರದಲ್ಲಿ ವಾರಕ್ಕೆರಡು ದಿನ ಸುಗಮ ಸಂಗೀತ, ವಚನ ಸಂಗೀತ ಬೋಧಿಸುತ್ತಾರೆ. ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ಇಬ್ಬರು ಪುತ್ರರಿಗೂ ಇವರು ಐದಾರು ವರ್ಷಗಳಿಂದ ಸಂಗೀತಾಭ್ಯಾಸ ಮಾಡಿಸುತ್ತಿದ್ದಾರೆ. ಹಿರಿಯ ಮಗ ಸುರಾಗ್ ಈಗಾಗಲೇ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ನಟ ದುನಿಯಾ ವಿಜಯ್ ಹಾಗೂ ಅವರ ಮನೆಯವರಿಗೂ ಹಿಂದೂಸ್ತಾನಿ ಕಲಿಸಿದ್ದಾರೆ. ಈ ಸಿನಿಮಾ ನಂಟಿನಿಂದಾಗಿ ಮುಗಳಖೋಡ ಅವರಿಗೆ ಸಂಗೀತ ಸಂಯೋಜಿಸುವಂತೆ ಆಹ್ವಾನಗಳು ಬರುತ್ತಿವೆ. ಈ ಎಲ್ಲ ಯಶಸ್ಸಿಗೂ ಶಾಸ್ತ್ರೀಯ ಸಂಗೀತವೇ ಬುನಾದಿ ಎನ್ನುತ್ತಾರೆ ಬಸವರಾಜ ಮುಗಳಖೋಡ.

ಹಂಸಲೇಖ ಒಡನಾಟ

ಬೆಂಗಳೂರಿನಲ್ಲಿ ಕಲೆಗೆ ಒಳ್ಳೆಯ ವಾತಾವರಣವಿದೆ ಎಂಬ ಕಾರಣದಿಂದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಾಸಸ್ಥಾನ ಬದಲಾಯಿಸಿದರು. ನಗರದಲ್ಲಿ ಅವರಿಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಪರಿಚಯವಾಯಿತು. ಮುಗಳಖೋಡ ಅವರಿಂದ ವಚನಗಳು ಹಾಗೂ ದಾಸರ ಪದಗಳನ್ನು ಹಾಡಿಸಿದ ಹಂಸಲೇಖ, ತಮ್ಮ ದೇಸಿ ವಿದ್ಯಾಸಂಸ್ಥೆಗೆ ನೇಮಿಸಿಕೊಂಡರು.

‘ಶಾಸ್ತ್ರೀಯ ಸಂಗೀತ ಕಲಿತಿದ್ದ ನನಗೆ ಅಲ್ಲಿನ ವಾತಾವರಣ ಹೊಸ ಹೊಸ ಸಾಧ್ಯತೆಗಳನ್ನು ಅರಿಯಲು ಸಹಾಯಕವಾಯಿತು. ಸುಮಾರು ಎಂಟು ವರ್ಷಗಳ ಕಾಲ ಅವರ ಸಂಸ್ಥೆಯಲ್ಲಿ ಪಾಠ ಮಾಡಿದೆ. ಅವರ ಮಗಳಿಗೂ ಮುರ್ನಾಲ್ಕು ವರ್ಷ ಸಂಗೀತ ಹೇಳಿಕೊಟ್ಟೆ’ ಎನ್ನುತ್ತಾರೆ ಮುಗಳಖೋಡ.

ಹಂಸಲೇಖ ಅವರೊಡನೆ ಹಲವು ಪ್ರಾಜೆಕ್ಟ್‌ಗಳಿಗೆ ಮುಗಳಖೋಡ ಕೆಲಸ ಮಾಡಿದ್ದಾರೆ. ‘ಡೀಲ್‍ರಾಜ’, ‘ಮೀರಾ ಮಾಧವ ರಾಘವ’, ‘ಶ್ರೀಸಾಮಾನ್ಯ’, ‘ಹೆದ್ದಾರಿ’, ‘ಬಿ2ಬಿ ಹೈವೆ’ ಮೊದಲಾದ ಸಿನಿಮಾಗಳಿಗೆ ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.