ADVERTISEMENT

ಕುಂಚದಲ್ಲರಳಿದ ಸಾಂಪ್ರದಾಯಿಕ ಸೊಗಡು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST
ಸಂಜಯ್ ಕೆ.ಸಿ. ಅವರ ಕಲಾಕೃತಿ
ಸಂಜಯ್ ಕೆ.ಸಿ. ಅವರ ಕಲಾಕೃತಿ   

ವಿಶಾಲ ಕೊಠಡಿಯ ಶ್ವೇತವರ್ಣದ ಗೋಡೆಯ ಮೇಲೆ ಚಿತ್ತಾರ ಮೂಡಿಸಿದಂತಿದ್ದ ಬಹುವರ್ಣದ ಕಲಾಕೃತಿಗಳು ಭಿನ್ನ ಸಂದೇಶಗಳನ್ನು ಸಾರುತ್ತಿದ್ದವು. ಕೆಲವಂತೂ ಕಲಾವಿದರ ಅಭಿವ್ಯಕ್ತಿಯ ಕನ್ನಡಿಯಂತಿದ್ದವು. ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿ, ಆಧುನಿಕರಣ ತಂದೊಡ್ಡಿರುವ ಸವಾಲುಗಳಿಗೆ ಕಲಾವಿದರು ಕಲಾಕೃತಿಯ ರೂಪ ನೀಡಿರುವಂತೆ ಭಾಸವಾಗುತ್ತಿತ್ತು.

ಆ್ಯಕ್ಟೀವ್ ಕ್ರಿಯೇಟಿವ್ ಆರ್ಟಿಸ್ಟ್‌ ಗ್ರೂಪ್, ಆರ್ಟ್‌ ಸೊಸೈಟಿ ಸಹಯೋಗದೊಂದಿಗೆ ನಗರದ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಆಯೋಜಿಸಿದ್ದ ಚಿತ್ರಕಲೆ ಪ್ರದರ್ಶನ ಆಧುನೀಕರಣದ ವಿವಿಧ ತಲ್ಲಣಗಳನ್ನು ಬಿಂಬಿಸುತ್ತಿತ್ತು. ವಿವಿಧ ರಾಜ್ಯಗಳ 15 ಕಲಾವಿದರ ಕಲಾಕೃತಿಗಳು ಪ್ರದರ್ಶನದಲ್ಲಿ ಕಳೆಗಟ್ಟಿದ್ದವು. ಒಡಿಶಾದ ಕಲಾವಿದರ ಕುಂಚದಲ್ಲರಳಿದ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತಿದ್ದವು.

ದೆಹಲಿಯ ಸೀಮಾ ಪಾಂಡೆ ಅವರು ಭೂದೃಶ್ಯಗಳನ್ನು ಅಮೂರ್ತ ಶೈಲಿಯಲ್ಲಿ ಮೂಡಿಸಿದ್ದರು. ಒಡಿಶಾದ ಕಲಾವಿದ ಬಲದೇವ ಮಹಾರಥಾ ಅವರು ಸಾಂಪ್ರದಾಯಿಕ ಪಟಚಿತ್ರ ಮುಖೇನ ದಿನದಿಂದ ದಿನಕ್ಕೆ ತನ್ನ ನೈಜ ಸೌಂದರ್ಯವನ್ನು ಕಳೆದುಕೊಳ್ಳುತ್ತಿರುವ ಪ್ರಕೃತಿ, ಗಗನಚುಂಬಿ ಕಟ್ಟಡಗಳ ನಡುವೆ ಮರೆಯಾಗುತ್ತಿರುವ ಮಾನವೀಯತೆಯನ್ನು ಬಿಂಬಿಸಿದ್ದರು. ಯುವತಿಯೋಬ್ಬಳ ಅರ್ಧ ದೇಹವನ್ನು ಆಧುನಿಕತೆಯ ಸ್ಪರ್ಶದೊಂದಿಗೆ ಮತ್ತರ್ಧ ಭಾಗವನ್ನು ಸಾಂಪ್ರದಾಯಿಕ ಸ್ಪರ್ಶದೊಂದಿಗೆ ಚಿತ್ರಿಸಿದ್ದರು. ಸಾಂಪ್ರದಾಯಿಕ ಶೈಲಿಯಲ್ಲಿ ಆಕೆ ನವಿಲಿನಂತೆ ನಲಿಯುತ್ತಿದ್ದರೆ, ಆಧುನಿಕತೆಯ ಭರಾಟೆಯಲ್ಲಿ ನಲುಗಿಹೋಗಿರುವುದನ್ನು ಅರ್ಥಪೂರ್ಣವಾಗಿ ದಾಟಿಸಿದ್ದರು. ಕಾಳಿದಾಸನ ಮೇಘ ಸಂದೇಶಗಳು ಚಿತ್ರ ರೂಪ ತಾಳಿದ್ದವು.

ADVERTISEMENT

ಪ್ರದೂಷ್ ಸ್ವಾಯ್ನ ಅವರು ನಗರೀಕರಣದ ಪ್ರಭಾವದಿಂದಗಾಗಿ ಉಂಟಾಗಿರುವ ನೀರಿನ ಕೊರತೆ, ಮಿತಿಮೀರಿದ ಮಾಲಿನ್ಯದ ಪ್ರಮಾಣವನ್ನು ಕುಂಚದಲ್ಲಿ ಚಿತ್ರಿಸಿದ್ದರು. ‘ಬಿಯಾಂಡ್‌ದ ನೆಕೆಡ್‌ ಐಸ್‌ ಲಿಮಿಟೇಷನ್’ ಎಂಬ ಶೀರ್ಷಿಕೆಯಡಿಯಲ್ಲಿ ಒರಿಸ್ಸಾದ ನಿಹಾರ್‌ದಾಸ್ ಅವರು ಸೂಕ್ಷ್ಮ ದರ್ಶಕದ ಮೂಲಕ ಕಣ್ಣನ್ನು ನೋಡಿದಾಗ ಹೇಗೆ ಕಾಣಿಸುತ್ತದೆ ಎಂಬುದನ್ನು ಸೊಗಸಾಗಿ ಚಿತ್ರಿಸಿದ್ದರು. ಹುಲಿ, ಸಿಂಹ ಸೇರಿದಂತೆ ವನ್ಯಮೃಗಗಳ ಸಂರಕ್ಷಣೆಯ ಸಂದೇಶ ಸಾರುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.