ADVERTISEMENT

ನಿರ್ಮಾಪಕಿ ಸುಮನ್, ಸಿನಿಮಾ ಅಮೆರಿಕನ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST
ಸುಮನ್ ನಗರ್‌ಕರ್
ಸುಮನ್ ನಗರ್‌ಕರ್   

ನಟಿ ಸುಮನ್ ನಗರ್‌ಕರ್‌ ಅವರು ಈಗ ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಸಂಸ್ಥೆಯ ಮೂಲಕ ಹೊಸ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಒಂದು ವೈಶಿಷ್ಟ್ಯ ಇದೆ. ಇದು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣ ಆಗುವ ಮೊದಲ ಕನ್ನಡ ಸಿನಿಮಾ ಆಗಲಿದೆ ಎನ್ನುವುದು ಚಿತ್ರತಂಡದ ಹೇಳಿಕೆ.

ಸಿನಿಮಾ ನಿರ್ಮಾಣ ಸಂಸ್ಥೆಯ ಪೋಸ್ಟರ್‌ ಬಿಡುಗಡೆ ಮಾಡಿ, ಸಿನಿಮಾ ಬಗ್ಗೆ ಮಾಹಿತಿ ನೀಡಲು ಸುಮನ್ ಸುದ್ದಿಗೋಷ್ಠಿ ಕರೆದಿದ್ದರು. ಅವರ ಸಿನಿಮಾ ನಿರ್ಮಾಣ ಸಂಸ್ಥೆಯ ಲೋಗೊ, ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಬೆಳದಿಂಗಳ ಬಾಲೆ' ಸಿನಿಮಾವನ್ನು ನೆನಪಿಸುವಂತೆ ಇದೆ.

‘ನಮ್ಮ ಸಂಸ್ಥೆಯ ಮೊದಲ ಸಿನಿಮಾ ಹೆಸರು ‘ಬಬ್ರು’. ಅಮೆರಿಕದಲ್ಲಿ ಇರುವ ಕನ್ನಡಿಗರು ಈ ಸಿನಿಮಾ ತಂಡದ ಭಾಗ. ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುವುದು ನಮ್ಮ ಸಂಸ್ಥೆಯ ಉದ್ದೇಶ' ಎಂದರು ಸುಮನ್. ಈ ಸಿನಿಮಾದಲ್ಲಿ ಒಂದು ಕಾರು ಪ್ರಮುಖ ಪಾತ್ರ ವಹಿಸಲಿದೆಯಂತೆ.

ADVERTISEMENT

ಸಿನಿಮಾದ ನಿರ್ದೇಶನ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಸುಜಯ್ ರಾಮಯ್ಯ ಅವರದ್ದು. ಸಿನಿಮಾದಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳು ಇವೆ. ಸಿನಿಮಾ ವೀಕ್ಷಿಸುತ್ತಲೇ ಅಮೆರಿಕದ ಭೂಸೌಂದರ್ಯವನ್ನೂ ಸವಿಯಬಹುದು ಎಂಬುದು ಚಿತ್ರ ತಂಡದ ಅಂಬೋಣ.

ಅಮೆರಿಕದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿ ಅರ್ಜುನ್, ಮಾಯಾ ಎನ್ನುವವಳನ್ನು ಪ್ರೀತಿಸುತ್ತಿರುತ್ತಾನೆ. ಈ ನಡುವೆ, ಸನಾ ಎನ್ನುವ ಭಾರತೀಯ ಮಹಿಳೆಯು ಗಂಡನ ಕಿರುಕುಳದಿಂದ ಮುಕ್ತಿ ಪಡೆಯಲು ಬಯಸುತ್ತಿರುತ್ತಾಳೆ. ಅರ್ಜುನ್ ಮತ್ತು ಸನಾ ಒಂದು ಪ್ರಯಾಣದಲ್ಲಿ ಜೊತೆಯಾಗುತ್ತಾರೆ. ಅವರು ಪ್ರಯಾಣಕ್ಕೆ ಬಳಸಿಕೊಳ್ಳುವ ಕಾರು ಅಮೆರಿಕದ ಪೊಲೀಸರಿಗೂ, ಅಲ್ಲಿನ ದುಷ್ಕರ್ಮಿಗಳಿಗೂ ಬೇಕಾಗಿರುತ್ತದೆ. ಇದು ಈ ಸಿನಿಮಾ ಕಥೆಯ ತಿರುಳು ಎಂದು ಚಿತ್ರತಂಡ ಹೇಳಿದೆ.

ಪೂರ್ಣಚಂದ್ರ ತೇಜಸ್ವಿ ಸಂಗೀತ ಈ ಚಿತ್ರಕ್ಕಿದೆ. ಚಿತ್ರ ನಿರ್ಮಾಣದಲ್ಲಿ ಸುಮನ್ ಅವರ ಜೊತೆ ಯುಗ ಕ್ರಿಯೇಷನ್ಸ್‌ ಕೂಡ ಕೈಜೋಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.