ADVERTISEMENT

60ರ ದಶಕದ ವಿದ್ಯಾರ್ಥಿಗಳಿಂದ ಗುರು ನಮನ

​ಪ್ರಜಾವಾಣಿ ವಾರ್ತೆ
Published 20 ಮೇ 2012, 19:30 IST
Last Updated 20 ಮೇ 2012, 19:30 IST
60ರ ದಶಕದ ವಿದ್ಯಾರ್ಥಿಗಳಿಂದ ಗುರು ನಮನ
60ರ ದಶಕದ ವಿದ್ಯಾರ್ಥಿಗಳಿಂದ ಗುರು ನಮನ   

`ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ~ ಎನ್ನುವ ಮಾತು, ತಮ್ಮ ಶಿಕ್ಷಣ ಮುಗಿದ ತಕ್ಷಣ ಗುರುಗಳನ್ನು ಮರೆತುಬಿಡುವುದು ಬಹುತೇಕ ವಿದ್ಯಾರ್ಥಿಗಳ ಜಾಯಮಾನ. ಆದರೆ  ಈ ಹೇಳಿಕೆಗೆ ಅಪವಾದ ದಂತಿತ್ತು, ಶ್ರೀ ಜಯಚಾರಾಜೇಂದ್ರ ಪಾಲಿಟೆಕ್ನಿಕ್‌ನ ರೇಡಿಯೊ, ಸೌಂಡ್ ಹಾಗೂ ಸಿನೆಮಾಟೊಗ್ರಫಿ ಡಿಪ್ಲೊಮಾ ವಿದ್ಯಾರ್ಥಿಗಳು ಮೊನ್ನೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಕೈಗೊಂಡ ಕಾರ್ಯಕ್ರಮ.

ನಾಲ್ಕೂವರೆ ದಶಕಗಳ ಹಿಂದೆ ತಮಗೆ ಪಾಠ ಕಲಿಸಿದ ಗುರುಗಳನ್ನು ಗೌರವಿಸುವ `ಸ್ನೇಹ ಕೂಟ~ವನ್ನು ಏರ್ಪಡಿಸಿದ ಈ `ಹಳೆಯ~ ವಿದ್ಯಾರ್ಥಿಗಳು ತಮ್ಮ ಬಹುದಿನದ ಆಸೆಯನ್ನು ಪೂರೈಸಿದ ಖುಷಿಯಲ್ಲಿದ್ದರು.

ಸಿನೆಮಾಟೊಗ್ರಫಿ ವಿಭಾಗದ ಬಿ.ಮರುಳಪ್ಪ, ರೇಡಿಯೊ ಇಂಜಿನಿಯರಿಂಗ್ ವಿಭಾಗದ ಆರ್. ಮುದ್ದುವೀರಪ್ಪ ಹಾಗೂ ಸೌಂಡ್ ಇಂಜಿನಿಯರಿಂಗ್ ವಿಭಾಗದ ಎಂ.ರಾಮಮೂರ್ತಿ ಅವರನ್ನು  ಸನ್ಮಾನಿಸಿ ಗುರು ನಮನ ಸಲ್ಲಿಸಲಾಯಿತು.

85 ವರ್ಷ ದಾಟಿದ್ದರೂ ಉತ್ಸಾಹದಿಂದ ಆಗಮಿಸಿದ ಈ ಹಿರಿಯರು ಮಾತನಾಡಿ, ವಯೋವೃದ್ಧರಾದ ತಮ್ಮನ್ನು ಪ್ರೀತಿಯಿಂದ ಕರೆದು ಗೌರವಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಅನೇಕ ವರ್ಷಗಳ ನಂತರ ಮೂವರೂ ಪರಸ್ಪರರನ್ನು ಭೇಟಿಯಾಗುವ ಅಪರೂಪದ ಅವಕಾಶ ತಮಗೆ ದೊರಕಿತದಂತಾಯಿತು ಎಂದು ಭಾವುಕರಾದರು.

ಶಿಕ್ಷಣ ನೀಡುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಅಂದು ಪಾಠ ಮಾಡಿದೆವು. ಆದರೆ ಅಂದಿನ ವಿದ್ಯಾರ್ಥಿಗಳು ಇಂದು ತಮ್ಮ ವೃತ್ತಿ ಜೀವನದಲ್ಲಿ ಸಫಲರಾಗಿದ್ದನ್ನು ಕಂಡು ಮೂವರೂ ಹರ್ಷ ವ್ಯಕ್ತಪಡಿಸಿದರು.

ಗುರುತ್ರಯರಿಗೆ ತಮ್ಮನ್ನು ಪರಿಚಯಿಸಿಕೊಂಡ `ಹಳೆಯ~ ವಿದ್ಯಾರ್ಥಿಗಳು ತರಗತಿಗಳಲ್ಲಿ ತಾವು ಕೀಟಲೆ ಮಾಡಿ ಗುರುಗಳ ಕೋಪಕ್ಕೆ ತುತ್ತಾಗಿದ್ದ ಸಂದರ್ಭಗಳನ್ನು ನೆನಪಿಸಿಕೊಂಡರು.

ಚಿತ್ರನಟ ಶ್ರೀನಾಥ್ (ನಾರಾಯಣಸ್ವಾಮಿ), ರೇಡಿಯೊ ಇಂಜಿನಿಯರ್ ಪಿ.ವೆಂಕಟರಮಣ ಮೂರ್ತಿ, ಪತ್ರಕರ್ತ ಎಸ್. ದೇವನಾಥ್, ಸಿನೆಮಾಟೊಗ್ರಫಿಯಲ್ಲಿ ತೊಡಗಿಸಿಕೊಂಡಿರುವ ಬಿ.ಎಸ್. ಬಸವರಾಜ್ ಮತ್ತಿತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.