ADVERTISEMENT

60:40 ಇದು ಪರೂಲ್ ಮಂತ್ರ!

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

`ಗೋವಿಂದಾಯ ನಮಃ' ಚಿತ್ರದಲ್ಲಿ ಕೋಮಲ್ ಜತೆ ಕಾಣಿಸಿಕೊಂಡಿದ್ದ ನಟಿ ಪರೂಲ್ ಯಾದವ್ ಈಗ ದೊಡ್ಡ ಸ್ಟಾರ್‌ಗಳ ಜತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಕೆ ಜನಪ್ರಿಯ ನಟ, ನಿರ್ದೇಶಕರ ಕುಟುಂಬದಿಂದ ಬಂದವರಲ್ಲ. ಚಿತ್ರರಂಗದಲ್ಲಿ ಯಾವ ಗಾಡ್‌ಫಾದರ್‌ಗಳೂ ಇಲ್ಲ. ಆದರೂ ಅವಕಾಶಗಳಿಗೇನೂ ಕೊರತೆಯಿಲ್ಲ. ಈ ಬಗ್ಗೆ ಅವರನ್ನು ಕೇಳಿದರೆ, `ಅದೃಷ್ಟವೇ ಎಲ್ಲಾ' ಎಂದು ಉತ್ತರಿಸುತ್ತಾರೆ.

ಕನ್ನಡದ `ಬಚ್ಚನ್' ಸಿನಿಮಾದಲ್ಲಿ ಸುದೀಪ್ ಜತೆ ಕಾಣಿಸಿಕೊಳ್ಳುತ್ತಿರುವ ಪರೂಲ್ ಚಿತ್ರರಂಗದಲ್ಲಿ ತಾವು ಯಶಸ್ವಿಯಾಗಿರುವುದನ್ನು ವ್ಯಾಖ್ಯಾನಿಸುವುದು ಹೀಗೆ: `ನಾನು ಚಿತ್ರೋದ್ಯಮದಲ್ಲಿ ಯಶಸ್ವಿ ನಟಿಯಾಗಿರುವುದರ ಹಿಂದೆ ಅದೃಷ್ಟ ಕೆಲಸ ಮಾಡಿದೆ. ಶೇ 60 ಅದೃಷ್ಟ ನನ್ನ ಕೈಹಿಡಿದಿದ್ದರೆ, ಶೇ 40 ಭಾಗ ನನ್ನ ಕಠಿಣ ಶ್ರಮ ಹಾಗೂ ಸಿನಿಮಾದೆಡೆಗಿನ ಶ್ರದ್ಧೆ ಇಲ್ಲಿ ಗಟ್ಟಿಯಾಗಿ ನೆಲೆಯೂರಲು ಸಹಕರಿಸಿದೆ' ಎಂದಿದ್ದಾರೆ.

`ಯಾವುದೇ ನಟಿ ನಿರ್ದೇಶಕ ಅಥವಾ ನಿರ್ಮಾಪಕರ ಕುಟುಂಬದಿಂದ ಬಂದಿದ್ದರೆ ಆಕೆ ಚಿತ್ರರಂಗದಲ್ಲಿ ಬೆಳೆಯುವುದು ಕಷ್ಟದ ಕೆಲಸವೇನಲ್ಲ. ಕೆಲವರಿಗೆ ಚಿತ್ರರಂಗದಲ್ಲಿ ಯಾರೂ ಗಾಡ್‌ಫಾದರ್‌ಗಳು ಇರುವುದಿಲ್ಲ. ಅಂಥವರು ಬೆಳೆಯಬೇಕೆಂದರೆ ಶ್ರಮದ ಜತೆಗೆ ಅದೃಷ್ಟವೂ ಇರಬೇಕು. ನನ್ನ ಪ್ರಕಾರ ಚಿತ್ರರಂಗದಲ್ಲಿ ಯಶಸ್ವಿಯಾಗಬೇಕೆಂದರೆ ಅದೃಷ್ಟ ಮತ್ತು ಕಠಿಣ ಪರಿಶ್ರಮ ಎರಡೂ ಇರಬೇಕು' ಎಂದಿದ್ದಾರೆ ಪರೂಲ್.

`ನನಗೆ ಗೊತ್ತು. ತೆರೆಯ ಮೇಲೆ ನಾನು ಚೆನ್ನಾಗಿ ಕಾಣುವುದರ ಜೊತೆಗೆ ಚೆನ್ನಾಗಿ ಅಭಿನಯವನ್ನೂ ಮಾಡುತ್ತೇನೆ. ಆದರೆ, ಎಲ್ಲರೂ ಈ ರೀತಿ ಇರುವುದಿಲ್ಲ. ಅಂಥ ವೇಳೆ ಅದೃಷ್ಟ ಕೆಲವರ ಕೈಹಿಡಿಯುತ್ತದೆ' ಎಂದು ಮಾತು ಸೇರಿಸುತ್ತಾರೆ ಅವರು. ಅಂದಹಾಗೆ, ಪರೂಲ್ ಯಾದವ್ ಅಭಿನಯದ ಮೊದಲ ತಮಿಳು ಚಿತ್ರ `ಡ್ರೀಮ್ಸ' ಹೇಳಿಕೊಳ್ಳುವಂಥ ಯಶಸ್ಸನ್ನು ಪಡೆಯಲಿಲ್ಲ.

ಅದೇ ವೇಳೆ ಕನ್ನಡದಲ್ಲಿ ತೆರೆಕಂಡ `ಗೋವಿಂದಾಯ ನಮಃ' ಚಿತ್ರ ಮಾತ್ರ ಸಿಕ್ಕಾಪಟ್ಟೆ ಯಶಸ್ಸು ಗಳಿಸಿತ್ತು. ಸಿನಿಮಾ ರಂಗದಲ್ಲಿ ಸ್ಟಾರ್ ಆಗಿ ಮೆರೆಯಬೇಕೆಂದರೆ ಅದೃಷ್ಟ ತುಂಬಾ ಮುಖ್ಯ ಎನ್ನುವ ಪರೂಲ್, ಏ.12ಕ್ಕೆ ತೆರೆಕಾಣಲಿರುವ `ಬಚ್ಚನ್' ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT