ADVERTISEMENT

ಚೆನ್ನೈನಲ್ಲಿ ಬರ, ಬೆಂಗಳೂರಿಗೆ ಗುಳೆ!

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:45 IST
Last Updated 5 ಜೂನ್ 2019, 19:45 IST
ಚೆನ್ನೈನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರು        –ಪ್ರಜಾವಾಣಿ ಚಿತ್ರ
ಚೆನ್ನೈನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರು        –ಪ್ರಜಾವಾಣಿ ಚಿತ್ರ   

ಈ ಬಾರಿ ಬೇಸಿಗೆ ಕರ್ನಾಟಕ ಹಾಗೂ ತಮಿಳುನಾಡನ್ನು ತೀವ್ರವಾಗಿ ಕಾಡುತ್ತಿದೆ. ಚೆನ್ನೈನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕುಡಿಯಲು ನೀರಿಲ್ಲ. ಅಂತರ್ಜಲಮಟ್ಟ ಪಾತಾಳ ಕಂಡಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಚೆನ್ನೈಗೆ ನೀರು ಪೂರೈಸುವ ನಾಲ್ಕು ಜಲಾಶಯಗಳು ಬತ್ತಿ ಹೋಗಿವೆ. ಪುರಲ್ ಮತ್ತು ಪೊರು ಸೇರಿದಂತೆ ಕೆರೆಗಳ ನೀರನ್ನು ಶುದ್ಧೀಕರಿಸಿ ನಗರಕ್ಕೆ ಪಂಪ್ ಮಾಡಲಾಗುತ್ತಿತ್ತು. ಇವೆಲ್ಲವೂ ಈಗ ಬರಿದಾಗಿವೆ. ಇದರ ಬಿಸಿ ಈಗ ಬೆಂಗಳೂರಿಗೆ ತಟ್ಟಿದೆ!

ನೀರಿನ ಸಮಸ್ಯೆಯಿಂದ ಪಾರಾಗಲು ಜನ ಬೇರೆ ಬೇರೆ ಕಸರತ್ತು ನಡೆಸುತ್ತಿದ್ದಾರೆ. ಬೇಸಿಗೆ ಕಳೆಯುವವರೆಗೂ ಪ್ರವಾಸಕ್ಕೆ ಹೊರಡುತ್ತಿದ್ದಾರೆ. ಪ್ರವಾಸಕ್ಕೆ ಹೋಗಿರುವ ಜನ ತಮ್ಮ ಪ್ರವಾಸದ ಅವಧಿಯನ್ನು ವಿಸ್ತರಿಸುತ್ತಿದ್ದಾರೆ. ನೀರಿರುವ ಪ್ರದೇಶಗಳಿಗೆ ತಮ್ಮ ವಾಸ್ತವ್ಯವನ್ನು ತಾತ್ಕಾಲಿಕವಾಗಿ ಬದಲಿಸುತ್ತಿದ್ದಾರೆ. ಹೆಚ್ಚಿನವರು ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ಧಾವಿಸುತ್ತಿದ್ದಾರೆ.

ಚೆನ್ನೈನಿಂದ ‘ಬೃಂದಾವನ್ ಎಕ್ಸ್‌ಪ್ರೆಸ್‌’ ರೈಲಿನಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದಿಳಿದ ಲೋಕೇಶ್ ಮಾತಿಗೆ ಸಿಕ್ಕರು. ಚೆನ್ನೈನ ಕುಡಿಯುವ ನೀರಿನ ಸಮಸ್ಯೆಯನ್ನು ಬಿಡಿಸಿಟ್ಟರು.

ADVERTISEMENT

‘ಅಲ್ಲಿ ನನ್ನದು ಸ್ವಂತ ಮನೆ ಇದೆ. ಆದರೆ, ಕುಡಿಯುವ ನೀರಿಲ್ಲ. ಹೀಗಾಗಿ, ಹೊರವಲಯದಲ್ಲಿ ನೀರಿರುವ ಪ್ರದೇಶಕ್ಕೆ ಮನೆಬದಲಾಯಿಸಿದ್ದೇನೆ. ಮೊದಲಿದ್ದ ಮನೆಯಿಂದ ಕಚೇರಿಗೆ 2 ಕಿಲೋ ಮೀಟರ್ ದೂರವಿತ್ತು. ಇದೀಗ ಹತ್ತು ಕಿಲೋಮೀಟರ್ ಸಂಚರಿಸಬೇಕಿದೆ. ಸ್ವಂತ ಮನೆ ಇದ್ದರೂ ಬಾಡಿಗೆ ಮನೆಯಲ್ಲಿ ಇರಬೇಕಾದ ಸ್ಥಿತಿ ಬಂದಿದೆ’ ಎಂದು ಬೇಸರ ತೋಡಿಕೊಂಡರು.

‘ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣದಿಂದ ಪುರು ಪ್ರದೇಶದ ನಡುವಿನ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ನೀರಿಲ್ಲ. ಜಲಾಶಯಗಳು ಬತ್ತಿರುವ ಕಾರಣ ನೀರು ಪೂರೈಕೆ ನಿಲ್ಲಿಸಲಾಗಿದೆ. ಕೆರೆಗಳ ನೀರಿನ ಮೇಲೆ ಅವಲಂಬಿತವಾಗಿದ್ದ ನಗರ ಈಗ ಹನಿ ನೀರಿಗಾಗಿ ಬಾಯಿ ಬಾಯಿ ಬಿಡುತ್ತಿದೆ’ ಎನ್ನುತ್ತಾರೆ ಅವರು.

ಮಂಡ್ಯ ಜಿಲ್ಲೆಯ ಕೃಷ್ಣ ಎಂಬುವರು ಚೆನ್ನೈನಲ್ಲಿ ಗ್ರಾನೈಟ್ ವ್ಯವಹಾರ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಿಕ್ಕ ಅವರು ಚೆನ್ನೈನ ನೀರಿನ ಬವಣೆಯನ್ನು ತೆರೆದಿಟ್ಟರು. ‘ನಾನು ವಾಸವಿರುವ ಜಾಗದಲ್ಲಿ ನೀರಿನ ಸಮಸ್ಯೆ ಅಷ್ಟೊಂದು ಬಾಧಿಸಿಲ್ಲ. ಆದರೆ ಕೆಲವು ಬಡಾವಣೆಗಳಲ್ಲಿ 15 ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ನೀರಿನ ಸಮಸ್ಯೆಯ ತೀವ್ರತೆ ಅರಿಯಲು ಇದೊಂದು ನಿದರ್ಶನ ಸಾಕು’ ಎಂದರು.

ತಮಿಳುನಾಡಿನ ಮತ್ತೊಬ್ಬ ವ್ಯಕ್ತಿ ಕೃಷ್ಣ ಎಂಬುವರು ರೈಲಿಗಾಗಿ ಕಾಯುತ್ತಿದ್ದರು. ಇವರ ಕುಟುಂಬ ಚೆನ್ನೈನಲ್ಲಿದೆ. ಯಲಹಂಕದಲ್ಲಿ ಇವರು ಕಟ್ಟಡ ಕೆಲಸ ಮಾಡುತ್ತಿದ್ದಾರೆ. ಬೇಸಿಗೆ ಕಾರಣ ತಮ್ಮ ಪತ್ನಿ ಹಾಗೂ ಮಕ್ಕಳನ್ನು ಎರಡು ತಿಂಗಳ ಮಟ್ಟಿಗೆ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

‘ಬೆಂಗಳೂರಿನಂತಹ ಸುಂದರ ವಾತಾವರಣ ಎಲ್ಲೂ ಇಲ್ಲ. ನಾನು ತಮಿಳುನಾಡಿನವನಾದರೂ ಬೆಂಗಳೂರೇ ನನಗಿಷ್ಟ. ಮಕ್ಕಳು ಅಲ್ಲಿ ಕಷ್ಟಪಡುವುದನ್ನು ನೋಡಿ ಕೊಂಚ ಮಟ್ಟಿಗಾದರೂ ಸಹಾಯವಾಗಲಿ ಎಂದು ಬೆಂಗಳೂರಿಗೆ ಕರೆತಂದಿದ್ದೆ’ ಎಂದು ಕೃಷ್ಣ ಹೇಳಿದರು.

ಈ ಪ್ರಕರಣಗಳು ಸಾಂದರ್ಭಿಕ ಮಾತ್ರ. ಇಂತಹ ಎಷ್ಟೋ ಜನರು ತಮಿಳುನಾಡಿನಿಂದ ನೆರೆಯ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ.

ತಮಿಳುನಾಡಿನಲ್ಲಿ ಕೆರೆಗಳ ಒತ್ತುವರಿ ಅವ್ಯಾಹತವಾಗಿ ನಡೆಯುತ್ತಿರುವುದು ಇಂದಿನ ಬರದ ಬವಣೆಗೆ ಮುಖ್ಯ ಕಾರಣ ಎನ್ನುತ್ತಾರೆ ಬೆಂಗಳೂರಿನಲ್ಲಿರುವ ತಮಿಳು ಸಂಘದ ಅಧ್ಯಕ್ಷ ದಾಮೋದರನ್.‘ನೀರು ನಿರ್ವಹಣೆಯಲ್ಲಿ ಸರ್ಕಾರ ಎಡವಿರುವುದೇ ಈ ಸ್ಥಿತಿಗೆ ಕಾರಣ. ಬೆಂಗಳೂರಿಗೂ ಚೆನ್ನೈನ ಪರಿಸ್ಥಿತಿ ಬಂದರೆ ಅಚ್ಚರಿಯಿಲ್ಲ’ ಎಂದು ಅವರು ಎಚ್ಚರಿಸಿದರು.

ಮಳೆ ಕೊರತೆ

ಕಳೆದ ಎರಡು ವರ್ಷಗಳಿಂದ ತಮಿಳುನಾಡಿನಲ್ಲಿ ಮಳೆ ಸರಿಯಾಗಿ ಸುರಿದಿಲ್ಲ. 2017 ಮತ್ತು 2018ರಲ್ಲಿ ಮಳೆ ಕೈಕೊಟ್ಟಿದೆ. ಹೀಗಾಗಿ ಅಂತರ್ಜಲದ ಮಟ್ಟ ತೀರಾ ಆಳಕ್ಕೆ ಹೋಗಿದೆ. ಎರಡು ವರ್ಷದ ಬರದಿಂದಾಗಿ ಅರ್ಧದಷ್ಟು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಇದೇ ತಿಂಗಳ ಆರಂಭದಲ್ಲಿ ಚೆನ್ನೈ ಹಾಗೂ ಕಾಂಚಿಪುರಂ ಸೇರಿದಂತೆ 17 ಜಿಲ್ಲೆಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿತ್ತು.

ಈ ಬಾರಿಯೂ ಉತ್ತಮ ಮಳೆಯಾಗದಿದ್ದಲ್ಲಿ ಚೆನ್ನೈ ಅಪಾಯಕ್ಕೆ ಸಿಲುಕಲಿದೆ. ತಮಿಳುನಾಡಿನ ಇತರ ಪ್ರಮುಖ ನಗರಗಳಲ್ಲೂ ನೀರಿನ ಬವಣೆ ಇದೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.