ADVERTISEMENT

ಚನ್ನಪ್ಪ ಎರೇಸೀಮೆ ಎಂಬ ನುಡಿಗಾರುಡಿಗ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 19:45 IST
Last Updated 11 ಅಕ್ಟೋಬರ್ 2019, 19:45 IST
   

ನಾಡು, ನುಡಿಗೆ ಅಪಾರ ಸೇವೆ ಸಲ್ಲಿಸಿದ್ದಶಿಕ್ಷಣ ತಜ್ಞ ಮತ್ತು ಪ್ರವಚನಕಾರ ಪಂಡಿತ ಚನ್ನಪ್ಪ ಎರೇಸೀಮೆ ಅವರು ಈ ನಾಡು ಕಂಡ ಶ್ರೇಷ್ಠ ವಿದ್ವಾಂಸರಲ್ಲೊಬ್ಬರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಅವರು ಪ್ರವೃತ್ತಿಯಲ್ಲಿ ಸಾಹಿತಿ, ಬರಹಗಾರ ಮತ್ತು ಪ್ರಖರ ವಾಗ್ಮಿ.ಉತ್ತಮ ನಾಟಕಕಾರ, ಪ್ರವಚನಕಾರರಾಗಿದ್ದ ಅವರು ‘ನುಡಿಗಾರುಡಿಗ’ ಎಂದು ಖ್ಯಾತರಾಗಿದ್ದರು. ಸರಳ, ಸಜ್ಜನಿಕೆಯ ಸಾಕಾರಮೂರ್ತಿಯಂತಿದ್ದ ಅವರು ಕುತೂಹಲ ಕೆರಳಿಸುವಂತೆ ಕಥಾ ಕಾಲಕ್ಷೇಪ ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದರು.

ಶಿಕ್ಷಣ, ಸಾಹಿತ್ಯ ಕ್ಷೇತ್ರದ ಜತೆಗೆ ಸಂಪಾದನೆ, ಕೀರ್ತನೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವರುಬಹುಮುಖ ಪ್ರತಿಭೆಯ ಸಂಗಮವಾಗಿದ್ದರು.

ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕು ಹರವಿ ಗ್ರಾಮದ ಚನ್ನಪ್ಪ ಎರೇಸೀಮೆ (ಜನನ: 1919) ಮುಲ್ಕಿ ಪರೀಕ್ಷೆಯ ನಂತರ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡರು. ಶಿಕ್ಷಕರಾಗಿದ್ದುಕೊಂಡೇ ನಾಟಕ ಬರೆದರು. ಕೀರ್ತನೆ ಹೇಳಿದರು. ಪ್ರವಚನ ಮಾಡಿದರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ ಭಾಷಾ ಸಾಹಿತ್ಯದ ಶಿಕ್ಷಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಎರೇಸೀಮೆ ಅವರು ವಿದ್ಯಾರ್ಥಿಗಳ ಪಾಲಿಗೆ ‘ಪ್ರೀತಿಯ ಮೇಷ್ಟ್ರು’ ಆಗಿದ್ದರು.

ADVERTISEMENT

ಸಾಹಿತ್ಯ ಕ್ಷೇತ್ರದಲ್ಲೂ ಅಮೂಲ್ಯ ಕೃತಿಗಳನ್ನು ನೀಡಿದ್ದಾರೆ. ಹೊಸಗನ್ನಡ ಸರಳ ವ್ಯಾಕರಣ ಪಾಠಗಳು, ಅರವಿಂದ, ಬಸವಣ್ಣನವರ ಕ್ರಾಂತಿ ಕಹಳೆ, ಬಸವಣ್ಣನವರ ಪಂಚಪರುಷ, ಅಜಗಣ್ಣ-ಮುಕ್ತಾಯಕ್ಕ, ಸಿದ್ಧರಾಮನ ಲಿಂಗತಪಸ್ಸು, ಸಿದ್ಧಗಂಗಾ ಕ್ಷೇತ್ರದ ಇತಿಹಾಸ-ಪರಂಪರೆ, ಚನ್ನಮಲ್ಲಿಕಾರ್ಜುನ, ಉದ್ದಾನ ಶಿವಯೋಗಿ, ರಾಜಶೇಖರ ವಿಳಾಸ ಸೇರಿದಂತೆ ಹದಿನೆಂಟಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನೂ ನೀಡಿದ್ದಾರೆ.

ಹಿರಿಯ ವಿದ್ವಾಂಸರ ಜತೆ ಸೇರಿ ಹತ್ತಕ್ಕೂ ಹೆಚ್ಚು ಶ್ರೇಷ್ಠ ಪ್ರೌಢ ಗ್ರಂಥ ಸಂಪಾದಿಸಿದ್ದಾರೆ. ಎಂಬತ್ತಕ್ಕೂ ಹೆಚ್ಚು ಮೌಲಿಕ ಲೇಖನಗಳು ಪ್ರಕಟವಾಗಿವೆ. ಮಕ್ಕಳಿಗೆ ಸಂಬಂಧಿಸಿದಂತೆ ಅನೇಕ ಕೃತಿಗಳೂ ಪ್ರಕಟವಾಗಿವೆ. ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಅನೇಕ ಕಾರ್ಯಕ್ರಮ ಬಿತ್ತರಗೊಂಡಿವೆ.

ಎರೇಸೀಮೆ ಅವರು ತುಮಕೂರಿನ ಸಿದ್ಧಗಂಗಾ ಮಠ ಹಾಗೂ ಡಾ. ಶಿವಕುಮಾರ ಸ್ವಾಮೀಜಿ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು.ಮೂರು ದಶಕಗಳ ಕಾಲ ಸಿದ್ಧಗಂಗಾ ಕ್ಷೇತ್ರದಿಂದ ಪ್ರಕಟವಾಗುತ್ತಿರುವ ‘ಸಿದ್ಧಗಂಗಾ’ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಡಾ.ಶಿವಕುಮಾರ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವದ ಮಹಾಸಂಪುಟ ‘ಸಿದ್ಧಗಂಗಾಶ್ರೀ’ ಮತ್ತು ವಜ್ರಮಹೋತ್ಸವ ಮಹಾಸಂಪುಟ ‘ದಾಸೋಹಸಿರಿ’ ಉದ್ಗ್ರಂಥಗಳನ್ನು ಟಿ.ಆರ್. ಮಹಾದೇವಯ್ಯನವರ ಜೊತೆ ಸೇರಿ ಹೊರ ತಂದಿದ್ದರು.

ಪ್ರಾಥಮಿಕ, ಪ್ರೌಢಶಾಲಾ ಮತ್ತು ಪಿಯು ಮಂಡಳಿ ಪಠ್ಯಪುಸ್ತಕ ಸಮಿತಿ, ಕೇರಳ ರಾಜ್ಯ ಪಠ್ಯಪುಸ್ತಕ ಸಮಿತಿ, ಪ್ರೌಢಶಾಲಾ ಪಾಠಪಠ್ಯ ಸಮಿತಿ, ಕೇಂದ್ರ ಸರ್ಕಾರದ ಪಠ್ಯಪುಸ್ತಕ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು. ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಹಲವಾರು ಗೌರವ ಪ್ರಶಸ್ತಿಗಳು ಸಂದಿವೆ. 2004ರಲ್ಲಿ ತಮ್ಮ 80ನೇ ವರ್ಷದಲ್ಲಿ ಚನ್ನಪ್ಪನವರು ನಿಧನರಾದರು.ಶನಿವಾರ ನಡೆಯುವ ಶತಮಾನೋತ್ಸವ ಸಮಾರಂಭದಲ್ಲಿ ನಿಘಂಟು ತಜ್ಞ ಹೀ.ಚಿ. ಶಾಂತವೀರಯ್ಯನವರಿಗೆ ‘ಪಂಡಿತ ಚೆನ್ನಪ್ಪ ಎರೇಸೀಮೆ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.