ADVERTISEMENT

ಕೋವಿಡ್–19: ಭೀತಿಯ ನಡುವೆಯೂ ಹರಿದಾಡುತ್ತಿವೆ ನಗೆಯುಕ್ಕಿಸುವ ಮಿಮ್‌ಗಳು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 14:35 IST
Last Updated 10 ಮಾರ್ಚ್ 2020, 14:35 IST
   
""
""
""
""
""
""

ಕೋವಿಡ್‌ –19 ವೈರಸ್‌ ಭೀತಿಯ ನಡುವೆಯೂ ವಾಟ್ಸ್‌ ಆ್ಯಪ್, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಾನಾ ಬಗೆ, ಬಗೆಯ ಮೀಮ್‌ಗಳು, ಟಿಕ್‌ ಟಾಕ್‌ಗಳು ನಗೆಯ ಬುಗ್ಗೆ ಉಕ್ಕಿಸುತ್ತವೆ. ಕೋವಿಡ್‌ಗೆ ಸಂಬಂಧಿಸಿದ ಮೀಮ್‌, ಕೊರೊನಾ ಕವನಗಳು ವೈರಸ್‌ಗಿಂತ ವೇಗವಾಗಿ ಹರಿದಾಡುತ್ತಿವೆ. ಅಂತಹ ಕೆಲವು ಆಯ್ದ ಸ್ಯಾಂಪಲ್‌ಗಳು ನಿಮಗಾಗಿ...

***

ಕಳೆದ ಎರಡು ಮೂರು ದಿನಗಳಿಂದ ಯಾವುದೇ ಮೊಬೈಲ್‌ಗೆ ಕರೆ ಮಾಡಿದರೂ, ಮೊದಲು ಕೆಮ್ಮುವ ಶಬ್ಧ ಕೇಳಿಸುತ್ತಿದೆ. ನಂತರ ‘ಕೊರೊನಾ ವೈರಸ್‌ ಸೋಂಕು’ ಕುರಿತು ಜಾಗೃತಿ ಮೂಡಿಸುವ ಇಂಗ್ಲಿಷ್ ಅಥವಾ ಹಿಂದಿ ಸಂದೇಶ ಪ್ರಸಾರವಾಗುತ್ತದೆ. ನಂತರ ರಿಂಗ್‌ ಟೋನ್‌ ಕೇಳಿಸುತ್ತದೆ..!

ADVERTISEMENT

‘ಕೋವಿಡ್‌ 19‘ ವೈರಸ್‌ ಸೋಂಕು ನಿಯಂತ್ರಣಕ್ಕಾಗಿಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೈಗೊಂಡಿರುವ ಈ ಪ್ರಚಾರದ ವಿಧಾನ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ‘ಇಂಗ್ಲಿಷ್‌, ಹಿಂದಿಯಾಗೆ ಒದರಿದರೆ, ನಮ್‌ ಮಂದಿಗೆ ಹೆಂಗ್‌ ಅರ್ಥವಾಗಬೇಕು. ಕನ್ನಡದಾಗಿ ಮಾತಾಡಿಸ್ರಿ‘ ಅಂತ ಅಲ್ಲಲ್ಲೇ ಜೋರ್‌ ಮಾಡ್ತಿದ್ದಾರೆ. ಆದರೆ, ಕೆಲವರುಈ ಪ್ರಚಾರವನ್ನೇ ಹಾಸ್ಯ, ವಿಡಂಬನೆಯಾಗಿ ಬಳಕೆ ಮಾಡುತ್ತಾ ‘ಮೀಮ್‌‘ಗಳನ್ನು ಸೃಷ್ಟಿಸಿದ್ದಾರೆ. ಆ ಮೀಮ್‌ಗಳು ಈಗ ವ್ಯಾಟ್ಸ್‌ ಆ್ಯಪ್‌ಗಳಲ್ಲಿ ವೈರಲ್‌ ಆಗಿವೆ.

ವೈರಲ್‌ ‘ಕೊರೊನಾ’
ಆರಂಭದಲ್ಲಿ ‘ಚೀನಾಕ್ಕೆ ಫ್ರೀ ಟ್ರಿಪ್‌ ಕರ್ಕೊಂಡು ಹೋಗ್ತಿದ್ದೀವಿ.. ಯಾರ್ ಬರ್ತೀರಪ್ಪಾ...’ ಎಂಬ ಜೋಕ್‌ ವ್ಯಾಟ್ಸ್‌ಆ್ಯಪ್ – ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿತ್ತು. ಇಂಥ ‘ಜೋಕ್‌‘ಗಳೂ ವೈರಸ್‌ನಂತೆ ರೂಪಾಂತರಗೊಳ್ಳುತ್ತಾ ವೈರಲ್‌ ಆದವು. ಕೆಲವರು ‘ಕರೀನಾ ಅಂದರೆ ಎಲ್ಲರೂ ಓಡೋಡಿ ಬರ್ತಾರೆ.. ಕೊರೊನಾ ಅಂದರೆ ಎಲ್ಲರೂ ಓಡಿ ಹೋಗ್ತಾರೆ...’ ಅಂತ ಬಾಲಿವುಡ್‌ ನಟಿ ಕರೀನಾ ಕಪೂರ್ ಫೋಟೊ ಹಾಕಿ ಹನಿಗವನ ಬರೆಯುತ್ತಿದ್ದಾರೆ.

‘ಚೀನಾ ಗೋಡೆ ದಾಟಿ ಬಂದ ಕೊರೊನಾಗೆ ಮಾಸ್ಕ್‌ ದಾಟಲು ಆಗದೇ?’ ಎಂದು ನೆಟ್ಟಿಗರು ಕೇಳಿದ್ದಾರೆ.

ಟ್ರೈನ್‌ ಫುಲ್‌ ರಶ್‌ ಇತ್ತು. ಒಬ್ಬ ಗೆಳೆಯನನ್ನು ಕಂಡು ‘ಯಾವಾಗ ಬಂದಿ ಚೀನಾದಿಂದ..’ ಅಂತ ಕೇಳುತ್ತಿದ್ದಂತೆ.. ಇಡೀ ಟ್ರೈನ್ ಖಾಲಿಯಾಯ್ತು..‘ ಅಂತ ಬರೆದ ಹಾಸ್ಯ ಚುಟುಕು ವ್ಯಾಟ್ಸ್‌ಅಪ್‌ನಲ್ಲಿ ವೈರಲ್‌ ಆಯಿತು.

ಫೇಸ್‌ಬುಕ್‌ನಲ್ಲಿ ಕೊರೊನಾ
‘ಕೊರೊನಾ ವೈರಸ್‌ನಿಂದ ಆಸ್ಪತ್ರೆ ಸೇರೋವ್ರಿಗಿಂತ, ಈ ಕಾಲರ್ ಟ್ಯೂನ್ ಕೇಳಿ ನಿಮಾನ್ಸ್ ಸೇರೋವ್ರ ಸಂಖ್ಯೆ ಹೆಚ್ಚಾಗಲಿದೆ... ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ....’

ಇದನ್ನು ಸಿನಿಮಾ ನಿರ್ದೇಶಕ ಮಂಸೋರೆ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ !

‘ಫೋನ್ ಬೇಗ ಎತ್ರೀ ಪ್ಲೀಜ್ ...ಆ ಕೆಮ್ಮಿನ ಸದ್ದು ಕೇಳೋಕಾಗ್ತಿಲ್ಲ...’ ಬರಹಗಾರಡಾ.ವಿ.ಎ.ಲಕ್ಷ್ಮಣ್ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.

ಕುಮಾರ ರೈತ ಅವರು, 'ಅವ್ನು/ ಅವ್ಳು ಧೈರ್ಯ ಇದ್ರೆ ನನ್ನ ಮುಂದೆ ಬಂದು ಕೆಮ್ಲಿ ಅಂತ ಡೈಲಾಗ್ ಹೊಡೆಯೊರೆಲ್ಲ ಈಗ್ಲೂಆ ಡೈಲಾಗ್ ಕಂಟಿನ್ಯೂ ಮಾಡ್ತಾರಾ?’ಎಂದು ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.

‘ಮೊದಲು ನಮ್ ಬಾಸ್‌, ರಜೆ ಕೇಳಿದರೆ ಕೆಮ್ಮಂಗಿಲ್ಲ ಅಂತ ಹೇಳ್ತಿದ್ದರು, ಈಗ ಕೆಮ್ಮಿದರೆ ಸಾಕು, ರಜೆ ತೊಗಳ್ಳಿ ಅಂತಾರೆ’ – ಇದು ಕೊರೊನಾ ಕುರಿತ ಜನಪ್ರಿಯ ಮೀಮ್‌ಗಳಲ್ಲಿ ಒಂದು.

ಕೊರೊನಾ ಕವನಗಳು
ಮುಖ ಮುಚ್ಕೊಂಡು ಮಾಲ್‌ನಲ್ಲಿ ಓಡಾಡುವುದಕ್ಕಿಂತ...ಸುಮ್ನೆ ಮನೆಯಲ್ಲಿ ಬಿದ್ಕೋಳ್ಳೋದು ಲೇಸು ಸರ್ವಜ್ಞ!

ಇಷ್ಟು ದಿನ ಟೆಕಿಗಳು ವೈರಸ್‌ ಹುಡುಕುತ್ತಿದ್ದರು, ಈಗ ವೈರಸ್‌ಗಳೇ ಟೆಕಿಗಳನ್ನು ಹುಡುಕುತ್ತಿವೆ!

ಹೆಂಗಸರು ಮೊದಲು ಸೀರೆಗೆ ಮ್ಯಾಚಿಂಗ್‌ ರವಿಕೆ ಕೇಳುತ್ತಿದ್ದರು, ಈಗ ಮ್ಯಾಚಿಂಗ್‌ ಮಾಸ್ಕ್‌ ಕೇಳುತ್ತಿದ್ದಾರೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.