ADVERTISEMENT

ರಾಮದೇವರ ಬೆಟ್ಟದಲ್ಲಿ ಪ್ರಥಮ ಏಕಾದಶಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 19:45 IST
Last Updated 14 ಜುಲೈ 2019, 19:45 IST
ದೇವರ ಬೆಟ್ಟ
ದೇವರ ಬೆಟ್ಟ   

ಪ್ರಥಮ ಏಕಾದಶಿ ಎಂದರೆ ರಾಮದೇವರ ಬೆಟ್ಟದ ಮೇಲೆ ಇರುವ ರಾಮದೇವರ ಪಾದುಕೆ ದೇವಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ.

ತಳಿರು ತೋರಣ, ಬಾಳೆಕಂದುಗಳಿಂದ ಸಿಂಗಾರ, ಹೂಗಳಿಂದ ಅಲಂಕಾರಗೊಂಡ ಪಾದುಕೆಗಳು ಹಾಗೂ ದೇವರಮೂರ್ತಿಯ ಭಾವಚಿತ್ರ, ಹಲಸಿನಹಣ್ಣಿನ ರಸಾಯನದ ಘಮ, ಜಾಗಟೆ ಸದ್ದು, ಗೋವಿಂದ ಹಾಗೂ ನಾಮ ಸ್ಮರಣೆ, ದೇವರನ್ನು ಅಹವಾನಿಸಿಕೊಂಡಂತೆ ಒಲ್ಯಾ ಒಲ್ಯಾ ಅನ್ನುತ್ತಾ ಪರೆವು ತಿನ್ನುವ ದಾಸಯ್ಯ ಈ ರೀತಿಯ ದೃಶ್ಯ ಇಲ್ಲಿ ಸಾಮಾನ್ಯ.

ನೆಲಮಂಗಲ ತಾಲ್ಲೂಕು ದಾಬಸ್ ಪೇಟೆ ಸಮೀಪ ಈ ಬೆಟ್ಟ ಇದೆ. ಕಪ್ಪು ಶಿಲೆಯ ಈ ಬೆಟ್ಟಕ್ಕೊಂದು ಇತಿಹಾಸವಿದೆ. ಅಹಲ್ಯೆ ವಿಮೋಚನೆಯಾದ ಸ್ಥಳ ಎಂದು ಸ್ಥಳೀಯರು ಹೇಳುತ್ತಾರೆ. ಅದಕ್ಕೆ ಪ್ರತೀಕವಾಗಿ ಇಲ್ಲಿ ರಾಮನ ಪಾದುಕೆಗಳಿದ್ದು, ಅವುಗಳಿಗೆ ಪೂಜೆ ನಡೆಸಲಾಗುತ್ತದೆ. ಸುತ್ತಮುತ್ತಲ ಗ್ರಾಮದ ನೂರಾರು ಕುಟುಂಬಗಳಿಗೆ ಇದು ಮನೆ ದೇವರಾಗಿದೆ. ಪ್ರಥಮ ಏಕಾದಶಿ, ಶ್ರಾವಣ, ಸಂಕ್ರಾಂತಿ ಹಾಗೂ ಹಬ್ಬಹರಿದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ.

ADVERTISEMENT

ಪ್ರಥಮ ಏಕಾದಶಿಯಂದು ಮೊದಲಿಗೆ ರಾಮನ ಪಾದುಕೆಗಳಿಗೆ ನರಸೀಪುರದ ಗೋವಿಂದೆ ಗೌಡರ ವಂಶಸ್ಥರ ಹೆಸರಲ್ಲಿ ಅಭಿಷೇಕ ನಡೆಯುತ್ತದೆ. ಅದಾದ ಮೇಲೆ ದೇವಾಲಯದ ಮುಂಭಾಗದ ಆಂಜನೇಯ ಸಮೇತ ಗರುಡಗಂಬದ ಮುಂದೆ ದಾಸಯ್ಯರಿಂದ ಪೂಜೆ ನೆರವೇರುತ್ತದೆ. ಆಚರಣೆಯಂತೆ ದಾಸಯ್ಯರ ಸಮ್ಮುಖದಲ್ಲಿ ದೇವಾಯದ ಮೂರು ಕಡೆ ರಸಾಯನವಿಟ್ಟು ಗೋವಿಂದ ನಾಮಸ್ಮರಣೆಯಲ್ಲಿ ಮಣೇವು ಹಾಕುವುದು ಪದ್ಧತಿ. ಬಂದಂತಹ ಎಲ್ಲಾ ಭಕ್ತರ ರಸಾಯನದ ಮಣೇವು ಹಾಕಿಸಿ, ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.