ADVERTISEMENT

ಮಹಿಳೆಯರಿಗಾಗಿ ನಡೆದ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 20:00 IST
Last Updated 28 ಫೆಬ್ರುವರಿ 2019, 20:00 IST
ಜಯನಗರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಯುವತಿಯರೊಂದಿಗೆ ಮಾತನಾಡಿದ ಶಾಸಕಿ ಸೌಮ್ಯಾ ರೆಡ್ಡಿ. ಶಾಸಕ ರಾಮಲಿಂಗಾ ರೆಡ್ಡಿ ಇದ್ದಾರೆ.
ಜಯನಗರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಯುವತಿಯರೊಂದಿಗೆ ಮಾತನಾಡಿದ ಶಾಸಕಿ ಸೌಮ್ಯಾ ರೆಡ್ಡಿ. ಶಾಸಕ ರಾಮಲಿಂಗಾ ರೆಡ್ಡಿ ಇದ್ದಾರೆ.   

ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಗುರುವಾರ ಮಹಿಳೆಯರಿಗಾಗಿ ಪ್ರಿಯದರ್ಶಿನಿ ಬೃಹತ್ ಕೌಶಲ ಮತ್ತು ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಈ ಉದ್ಯೋಗ ಮೇಳದಲ್ಲಿ 120ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. ಗೃಹಿಣಿಯರು, ವಿದ್ಯಾರ್ಥಿನಿಯರು, ನಿರುದ್ಯೋಗಿ ಮಹಿಳೆಯರು ತಮ್ಮ ವಿದ್ಯಾರ್ಹತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ರೀತಿಯ ಉದ್ಯೋಗಗಳನ್ನು ಪಡೆದುಕೊಂಡರು. ಕೆಲವರು ತಮಗೆ ಇಷ್ಟವಾಗುವ ಉದ್ಯೋಗ ಪಡೆಯಲು ತಮ್ಮ ಹೆಸರು ನೋಂದಾಯಿಸಿಕೊಂಡರು. ನೂರಾರು ಮಹಿಳೆಯರು ಉದ್ಯೋಗ ಪಡೆದು ಸಂಭ್ರಮಿಸಿದರು.

ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಶಾಸಕ ರಾಮಲಿಂಗಾ ರೆಡ್ಡಿ, ಉದ್ಯೋಗ ಪ್ರತಿಯೊಬ್ಬರ ಅವಶ್ಯಕತೆ. ಎಲ್ಲಾ ದುಡಿಯುವ ಕೈಗಳಿಗೆ ಕೆಲಸ ಸಿಗುವಂತಾಗಬೇಕು. ನಿರುದ್ಯೋಗ ಸಮಸ್ಯೆ ಮಹಿಳಾ ಸಮುದಾಯವನ್ನು ಬಾಧಿಸಬಾರದು ಎಂದರು.

ADVERTISEMENT

ಉದ್ಯೋಗ ಸೃಷ್ಟಿಗೆ ಪ್ರಧಾನ ಆದ್ಯತೆ ನೀಡಬೇಕಾಗಿದೆ. ಹೊಸ ಹೊಸ ಕಂಪನಿಗಳು ತಲೆ ಎತ್ತಿದಾಗ ಮಾತ್ರ ಉದ್ಯೋಗ ಸೃಷ್ಟಿಸಲು ಸಾಧ್ಯ. ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹರಿದು ಬಂದಲ್ಲಿ ಮಾತ್ರ ಉದ್ಯೋಗ ಸೃಷ್ಟಿಗೆ ಸೂಕ್ತ ವಾತಾವರಣ ನಿರ್ಮಿಸಲು ಸಾಧ್ಯ. ಇಡೀ ದೇಶದಲ್ಲಿಯೇ ಕರ್ನಾಟದಲ್ಲಿ ಹೂಡಿಕೆಗೆ ಪ್ರಶಸ್ತವಾದ ವಾತಾವರಣವಿದೆ. ಇದನ್ನು ಹೂಡಿಕೆದಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಮಹಿಳೆಯರು ಹೆಚ್ಚು ಸ್ವಾವಲಂಬಿಗಳಾಗಬೇಕಿದ್ದರೆ ಅವಕಾಶಗಳನ್ನು ಸೃಷ್ಟಿಸಿಕೊಡಬೇಕು. ಪುರುಷರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶ ಹೆಚ್ಚಿರುತ್ತದೆ. 225 ಸದಸ್ಯರ ರಾಜ್ಯ ವಿಧಾನಸಭೆಯ ಸಂಖ್ಯಾಬಲದಲ್ಲಿ ಕೇವಲ ಆರು ಮಹಿಳಾ ಶಾಸಕಿಯರಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ರಾಜಕೀಯ ಸ್ಥಾನಮಾನವೂ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಬೈರಸಂದ್ರ ವಾರ್ಡ್‌ನ ಸದಸ್ಯ ಎನ್‌. ನಾಗರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.