ADVERTISEMENT

ಮಹಿಳೆಯರದ್ದೇ ಕಾರು+ಬಾರು!

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 19:30 IST
Last Updated 25 ಫೆಬ್ರುವರಿ 2020, 19:30 IST
ಲೆಗ್‌ ಮಸಾಜ್‌
ಲೆಗ್‌ ಮಸಾಜ್‌   

ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನಗರದ ಮಹಿಳೆಯರು ಸಂಭ್ರಮಿಸಬಹುದಾದ ವಿಶೇಷ ಕೊಡುಗೆಯಂದು ಅವರಿಗಾಗಿ ಕಾದಿದೆ!

ನಗರದ ಬ್ರಿಗೇಡ್‌ ರಸ್ತೆಯಲ್ಲಿ ಮಾರ್ಚ್‌ 8ರಂದು ಮಹಿಳೆಯರಿಗಾಗಿಯೇ ಪ್ರತ್ಯೇಕ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌‘ಮಿಸ್‌ ಆ್ಯಂಡ್‌ ಮಿಸೆಸ್ ಕ್ಲಬ್‌’ ಆರಂಭವಾಗಲಿದೆ. ಇದೊಂದು ಅಪ್ಪಟ ಮಹಿಳಾ ಸಾಮ್ರಾಜ್ಯ! ಇಲ್ಲಿ ಯಾವುದೇ ಕಾರಣಕ್ಕೂ ಪುರುಷರಿಗೆ ಪ್ರವೇಶವಿಲ್ಲ!!

‘ಮಹಿಳೆಯರಿಂದ ಮಹಿಳೆಯರಿಗಾಗಿ ಹಾಗೂ ಮಹಿಳೆಯರಿಗೋಸ್ಕರ’ ಎಂಬ ಧ್ಯೇಯದೊಂದಿಗೆನಗರದ ಸಮಾನ ಮನಸ್ಕ ಹೆಣ್ಣುಮಕ್ಕಳ ಜತೆಯಾಗಿ ಈ ಕ್ಲಬ್‌ ಆರಂಭಿಸಲು ಭರದ ಸಿದ್ಧತೆ ನಡೆಸಿದ್ದಾರೆ. ದೇಶದ ಪ್ರಥಮ ಮಹಿಳಾ ರೆಸ್ಟೊರೆಂಟ್‌ ಆ್ಯಂಡ್‌ ಲಾಂಜ್‌ ಬಾರ್‌ ಎಂಬ ಹೆಗ್ಗಳಿಕೆಗೆ ಈ ಕ್ಲಬ್‌ ಪಾತ್ರವಾಗಲಿದೆಯಂತೆ.

ADVERTISEMENT

ಮಾಲೀಕರಿಂದ ಬೌನ್ಸರ್‌ಗಳವರೆಗೆ, ಅಡುಗೆಯವರಿಂದ ವೇಟರ್‌ವರೆಗೆ, ಕೊನೆಗೆ ಗ್ರಾಹಕರು ‘ಚಿತ್‌’ ಆದರೆ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸವವರೆಗೆ ಎಲ್ಲರೂ ಮಹಿಳೆಯರು ಎನ್ನುವುದೇ ಈರೆಸ್ಟೊರೆಂಟ್‌ ವಿಶೇಷ!

ಲೆಕ್ಕ ಪತ್ರ ನಿರ್ವಹಣೆ, ಶೆಫ್‌ ತಂಡ, ಸ್ವಚ್ಛತೆ ಕೆಲಸ, ಸಪ್ಲೈಯರ್‌, ಅಕೌಂಟ್ಸ್‌, ಡಿಜೆ, ವೆಬ್‌ಸೈಟ್‌ ಡಿಸೈನ್‌, ಬಾರ್‌ ಆ್ಯಂಡ್‌ ಫುಡ್‌ ನಿರ್ವಹಣೆ, ಬೊಟಿಕ್‌, ಸ್ಪಾ ಹೀಗೆ ಎಲ್ಲಾ ವಿಭಾಗಗಳಲ್ಲೂ ಮಹಿಳೆಯರದೇ ಪಾರುಪತ್ಯ.

ಇಲ್ಲಿನ ಮುಖ್ಯ ಆಕರ್ಷಣೆ ‘ಮಿಸ್‌ ಆ್ಯಂಡ್‌ ಮಿಸೆಸ್‌ ಬಾರ್‌ ಆ್ಯಂಡ್‌ ಕಿಚನ್‌ ಲಾಂಜ್‌’. ಇಲ್ಲಿ ಯಾವುದೇ ಮುಜುಗರ ಇಲ್ಲದೇ ಮಹಿಳೆಯರು ತಮ್ಮಿಷ್ಟದ ಪಾನೀಯ, ಖಾದ್ಯ ಸೇವಿಸಬಹುದು. ಗೆಳತಿಯರ ಜೊತೆ ಹರಟೆ ಹೊಡೆಯಬಹುದು. ಯಾವುದೇ ಗಲಾಟೆಯಿಲ್ಲದೇಲ್ಯಾಪ್‌ಟಾಪ್‌ ಹಿಡಿದು ಆಫೀಸ್‌ ಕೆಲಸ ಮಾಡಬಹುದು ಎನ್ನುತ್ತಾರೆ ಈ ರೆಸ್ಟೊರೆಂಟ್‌ನ ಎಂ.ಡಿ ಪಂಜೂರಿ ವಿ.ಶಂಕರ್‌.

ಮಹಿಳೆಯರ ಆರೋಗ್ಯಕ್ಕೆ ಮೆನು

ಮಹಿಳೆಯರ ಆರೋಗ್ಯಕ್ಕಾಗಿ ವಿಶೇಷ ಮೆನು ಸಿದ್ಧಪಡಿಸಲಾಗಿದೆ. ಋತುಸ್ರಾವದ ದಿನಗಳಲ್ಲಿ ಹೆಣ್ಣುಮಕ್ಕಳು ಸೇವಿಸಬೇಕಾದ ಆರೋಗ್ಯಕರ ಆಹಾರಗಳ ಪಟ್ಟಿ ಇಲ್ಲಿದೆ. ಗರ್ಭಿಣಿ ಮಹಿಳೆಯರು ಹೆಚ್ಚು ಪೋಷಕಾಂಶಯುಳ್ಳ ಆಹಾರ ಸೇವಿಸಬೇಕಾಗುತ್ತದೆ. ಅಂತಹ ತಿನಿಸು, ಖಾದ್ಯಗಳನ್ನೂ ಇಲ್ಲಿನ ಬಾಣಸಿಗರ ತಂಡ ಸಿದ್ಧಮಾಡಿಕೊಡುತ್ತದೆ. ಮದ್ಯವಷ್ಟೇ ಅಲ್ಲ, ಹಣ್ಣು ಮತ್ತು ತರಕಾರಿ ಜ್ಯೂಸ್‌, ಕೂಡ ಸಿಗುತ್ತವೆ.

ಪಾರ್ಟಿಗಳಿಗೂ ಸೂಕ್ತ ಸ್ಥಳ

ಮಹಿಳೆಯರು ತಮ್ಮ ಸ್ನೇಹಿತೆಯರೊಟ್ಟಿಗೆ ಸೇರಿ ಪಾರ್ಟಿ ಮಾಡಬಹುದು. ಕಿಟ್ಟಿ ಪಾರ್ಟಿ ಜತೆಗೆ ಸೀಮಂತದಂತಹ ಕಾರ್ಯಕ್ರಮ ಮಾಡಬಹುದು. ಪ್ರತಿದಿನ ನಗರದ ಯುವ ಮಹಿಳಾ ಸಂಗೀತಗಾರರು ಹಾಗೂ ನೃತ್ಯಗಾರರು ಇಲ್ಲಿ ಕಾರ್ಯಕ್ರಮ, ಪ್ರದರ್ಶನ ನೀಡಲಿದ್ದಾರೆ. ಮಿಸ್‌ ಆ್ಯಂಡ್‌ ಮಿಸೆಸ್‌ ತಂಡವನ್ನು ಭೇಟಿ ಮಾಡಿ ಮಾಹಿತಿ ನೀಡಬೇಕು ಎನ್ನುತ್ತಾರೆ ಪಂಜೂರಿ.

ಹಲವು ಬಗೆಯ ಸೇವೆ

ಬ್ರಿಗೇಡ್‌ ರಸ್ತೆಯಲ್ಲಿ 5 ಸಾವಿರ ಚದರ ಅಡಿಯಲ್ಲಿ ಮಿಸ್‌ ಆ್ಯಂಡ್‌ ಮಿಸೆಸ್‌ ಕ್ಲಬ್‌ ಸಿದ್ಧವಾಗುತ್ತಿದೆ. ಇಲ್ಲಿ ರುಚಿಯಾದ ತಿನಿಸು, ಊಟದ ಜೊತೆಗೆ ಸ್ಪಾ, ನೇಲ್‌ ಆರ್ಟ್‌, ಪೆಡಿಕ್ಯೂರ್‌, ಲೆಗ್‌ ಮಸಾಜ್‌ ಸೇರಿದಂತೆ ಕೈಗೆಟಕುವ ದರದಲ್ಲಿ ಹಲವು ಹೆಲ್ತ್‌ ಆ್ಯಂಡ್‌ ವೆಲ್‌ನೆಸ್‌ ಸೇವೆಗಳು ದೊರೆಯುತ್ತವೆ.

ಇಲ್ಲಿ ಮಹಿಳಾ ವಿನ್ಯಾಸಕಾರರ ಬೊಟಿಕ್‌ ಇದೆ. ಬರೀ ಹೆಣ್ಣುಮಕ್ಕಳ ಬಟ್ಟೆಗಳಷ್ಟೇ ದೊರೆಯುತ್ತವೆ. ಇಷ್ಟಬಂದ ವಿನ್ಯಾಸದ ಬಟ್ಟೆ ಹೊಲಿಸಿಕೊಳ್ಳಬಹುದು. ರೆಡಿಯಾದ ಬಟ್ಟೆಗಳನ್ನು ಮನೆಗೆ ತಲುಪಿಸುವ ಸೌಲಭ್ಯವಿದೆ.

ಕಾಂಡೋಮ್‌, ಸ್ಯಾನಿಟರಿ ಪ್ಯಾಡ್ಸ್‌

ಕಾಂಡೋಮ್‌, ಗರ್ಭ ಧರಿಸದಂತೆ ತೆಗೆದುಕೊಳ್ಳಬೇಕಾದ ಮಾತ್ರೆ ಗರ್ಭಧಾರಣೆ ಖಚಿತಪಡಿಸಿಕೊಳ್ಳುವ ಕಿಟ್‌ಗಳನ್ನು ಮಹಿಳೆಯರು ಮುಜುಗರಪಡದೇ ಖರೀದಿಸಬಹುದು. ಸ್ಯಾನಿಟರಿ ಪ್ಯಾಡ್ಸ್‌, ಟಾಯ್ಲೆಟ್‌ ಸೀಟ್‌ ಸ್ಯಾನಿಟೈಸರ್‌ ಸ್ಪ್ರೇನಂತಹ ವಸ್ತುಗಳೂ ಇಲ್ಲಿ ಲಭ್ಯ. ಇಲ್ಲಿ ಸ್ಯಾನಿಟರಿ ವೆಂಡಿಂಗ್‌ ಮೆಷಿನ್‌ಗಳನ್ನೂ ಇರಿಸಲಾಗಿದೆ.

ಪಾರ್ಟಿ ನಂತರ ಮನೆಗೆ ತಲುಪಿಸಲು ವ್ಯವಸ್ಥೆ

ತಡ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೊರಡುವ ಹೆಣ್ಣುಮಕ್ಕಳನ್ನು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಇದೆ. ಮಿಸ್‌ ಆ್ಯಂಡ್‌ ಮಿಸೆಸ್‌ ತಂಡ ‘ಕ್ಯಾಬ್‌ ಶಿ’ ಜೊತೆ ಒಪ್ಪಂದ ಮಾಡಿಕೊಂಡಿದೆ. ‘ಕ್ಯಾಬ್‌ ಶಿ’ ಚಾಲಕರು ಕೂಡ ಮಹಿಳೆಯರೇ. ಮಧ್ಯಾಹ್ನ 12 ರಿಂದ ರಾತ್ರಿ 1ಗಂಟೆವರೆಗೆ ರೆಸ್ಟೊರೆಂಟ್‌ ತೆರೆದಿರುತ್ತದೆ ಎನ್ನುತ್ತಾರೆ ಕ್ಲಬ್‌ನ ಅಂಕಿತಾ ಎಂ. ಶೆಟ್ಟಿ.

ಸ್ಥಳ: ಮಿಸ್‌ ಆ್ಯಂಡ್‌ ಮಿಸೆಸ್‌ ಕ್ಲಬ್‌, ಬ್ರಿಗೇಡ್‌ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.