ADVERTISEMENT

ಬಡತನವ ಮೆಟ್ಟಿ, ರಂಗದ ಮೆಟ್ಟಿಲು ಹತ್ತಿ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ನವೆಂಬರ್ 2018, 20:00 IST
Last Updated 20 ನವೆಂಬರ್ 2018, 20:00 IST
ಲಕ್ಷಣ್‌ ಪೂಜಾರಿ
ಲಕ್ಷಣ್‌ ಪೂಜಾರಿ   

ಆಟ ಆಡ್ಕೊಂಡು, ಪಾಠ ಕಲಿಯಬೇಕಾದ ವಯಸ್ಸಿನಲ್ಲಿಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಹೋಟೆಲ್‌ ಕೆಲಸಕ್ಕೆ ಸೇರಿಕೊಂಡವರು ಲಕ್ಷ್ಮಣ್‌ ಪೂಜಾರಿ. ಓದಿರೋದು ಕೇವಲ 7ನೇ ತರಗತಿ ಆದರೂ ಹವ್ಯಾಸಿ ಕಲಾವಿದರಾಗಿ ಸಕ್ರಿಯವಾಗಿ ನಾಲ್ಕು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಊದನೂರು ಗ್ರಾಮದ ನಾಗೂ ಪೂಜಾರಿ ಮತ್ತು ಗೀತಾ ಪೂಜಾರಿಯ ನಾಲ್ಕನೇಯ ಮಗ ಲಕ್ಷ್ಮಣ್‌ ಪೂಜಾರಿ. ಸ್ವಂತ ಶ್ರಮದಿಂದ ರಂಗಭೂಮಿ ಪ್ರವೇಶ ಪಡೆದವರು.

‘ಹುಟ್ಟು ದಾರಿದ್ರ್ಯವಾದರೂ ಸಾವು ಚರಿತ್ರೆಯಾಗಬೇಕು’ಎಂಬು ನಾಣ್ನುಡಿ ಇವರಿಗೆ ಸ್ಫೂರ್ತಿ. ಹಾಗಾಗಿ ಎಷ್ಟೇ ಕಷ್ಟವಾದರೂ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಬೆಳಗಾವಿ, ಬಾಗಲಕೋಟೆ, ಮಂಗಳೂರು, ಬೆಂಗಳೂರು ಹೀಗೆ ಎಲ್ಲಾ ಕಡೆ ಹೋಟೆಲ್‌ ಕೆಲಸ ಮಾಡುತ್ತಲೇ ಸಮಯ ಹೊಂದಿಸಿಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಾರೆ ಲಕ್ಷ್ಮಣ್.

ADVERTISEMENT

ಲಕ್ಷ್ಮಣ್ ಅವರ ರಂಗಭೂಮಿ ಪ್ರವೇಶ ಅನಿರೀಕ್ಷಿತವಾದುದು. ಹೋಟೆಲ್‌ ಕೆಲಸ ಮಾಡುವಾಗ ನಿರ್ದೇಶಕ ಸೂರಿಯವರನ್ನು ಕಂಡು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಹುಚ್ಚು ಹಿಡಿಸಿಕೊಂಡಿದ್ದೆ. ಆದರೆ ಸಿನಿಮಾ ಕ್ಷೇತ್ರವನ್ನು ಸೇರುವುದಾದರು ಹೇಗೆ ಎಂದು ಬಹಳ ಕಾಲ ಯೋಚಿಸುತ್ತಲೇ ಇದ್ದೆ. ಒಂದು ದಿನ ನಮ್ಮ ಹೋಟೆಲ್‌ಗೆ ಬರುತ್ತಿದ್ದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಬಳಿ ನನ್ನ ಆಸೆ ಹೇಳಿಕೊಂಡಾಗ, ಅವರು ರಂಗಭೂಮಿಯಲ್ಲಾದರೂ ಕೆಲಸ ಮಾಡಿದ್ದು, ನಟನೆಯ ಅನುಭವವಿದ್ದರೆ ಸಿನಿಮಾ ಕ್ಷೇತ್ರದಲ್ಲಿ ಪ್ರವೇಶ ಪಡೆಯಬಹುದು ಎಂದಿದ್ದರು. ಅಂದೇ ರಂಗಭೂಮಿ ತರಬೇತಿ ಕೇಂದ್ರವನ್ನು ಹುಡುಕಿ ಸೇರಿಕೊಂಡೆ ಎಂದು ತಮ್ಮ ಕನಸಿನ ಹಿಂದಿನ ನಡೆಯನ್ನು ಮೆಲಕು ಹಾಕುತ್ತಾರೆ ಲಕ್ಷ್ಮಣ್.

‘ಈ ತರಬೇತಿಯಲ್ಲಿ ಪರಿಚಯವಾದ ಗೆಳೆಯನ ಸಹಾಯದಿಂದ ಕಲಾಸಾಗರ ತಂಡದಲ್ಲಿ ಮೊದಲು ನಟಿಸಲು ಅವಕಾಶ ಸಿಕ್ಕಿತು. ಅಂದೇ ನನಗೆ ರಂಗಭೂಮಿ ಪರಿಚಯವಾಗಿದ್ದು, ಇದನ್ನು ಸದುಪಯೋಗಪಡಿಸಿಕೊಂಡೆ. ಇದರ ನಂತರ ಒಂದೊಂದರಂತೆ ಅನೇಕ ನಾಟಕಗಳಲ್ಲಿನ ಮುಖ್ಯ ಪಾತ್ರಗಳು ಅರಸಿ ಬಂದವು. ಇದಕ್ಕೆ ಬದ್ಧತೆ ಮತ್ತು ಸಮಯ ಪ್ರಜ್ಞೆಯೇ ಕಾರಣ’ ಎಂದು ಹೆಮ್ಮೆಯಿಂದ ಹೇಳುತ್ತಾರೆಅವರು.

ಇಲ್ಲಿಯವರೆಗೆ ಲಕ್ಷ್ಮಣ್ 18 ನಾಟಕಗಳಲ್ಲಿ ಅಭಿನಯಿಸಿ, 160 ಪ್ರದರ್ಶನಗಳನ್ನು ನೀಡಿದ್ದಾರೆ. ಸದ್ಯಕ್ಕೆ ಈಗ ನಾಲ್ಕು ನಾಟಕಗಳನ್ನು ಮಾಡುತ್ತಿದ್ದಾರೆ. ಕಲಾಸಾಗರ, ರಂಗಮಿತ್ರರು, ಕಲಾಸ್ಮೃತಿ, ಚಿತ್ತಾರ, ಅಶ್ವಘೋಷ ಥಿಯೇಟರ್‌, ತಿರುವು ಡ್ರಾಮಾಟ್ರಿಕ್‌ ತಂಡ ಹೀಗೆ ಆರು ರಂಗ ತಂಡಗಳಲ್ಲಿ ಕೆಲಸ ಮಾಡಿದ್ದಾರೆ.

ಇವರ ಮೊದಲ ನಾಟಕ ‘ವಲಸೆ ಹಕ್ಕಿಯ ಹಾಡು’. ನಂತರ ರಂಗಮಹಲ್‌, ಬುರಕಿ ವ್ರತ, ಎಡಬಿಡಂಗಿಗಳು, ರಂಗಮಹಲ್‌ ರಹಸ್ಯ, ಅಂತಃಕರಣ, ನಮ್ಮ–ನಿಮ್ಮೊಳಗೊಬ್ಬ, ಮುದ್ದಣ್ಣನ ಪ್ರಮೋಷನ್‌ ಪ್ರಸಂಗ, ಪುರಹರ, ಅಭಿನವ ಚಾಪ್ಲಿನ್ ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ. ಇವರಿಗೆ ರಂಗಭೂಮಿಯಲ್ಲಿ ತಿರುವುಕೊಟ್ಟ ನಾಟಕ ಎಂದರೆ ಡ್ರಮಾಟ್ರಿಕ್ಸ್‌ ತಂಡದ 'ರಾಮ್‌ ಫ್ರಮ್‌ ತೆನಾಲಿ'. ಈ ನಾಟಕವು ಈಗಾಗಲೇ 48 ಪ್ರದರ್ಶನಗಳನ್ನು ಕಂಡು, ಲಕ್ಷ್ಮಣ್‍ ಅವರಿಗೆ ಹೆಸರು ತಂದುಕೊಟ್ಟಿದೆ. ರಂಗಶ್ರೀ ಕಲಾತಂಡವುಇವರಿಗೆ ‘ಸರಣಿ ಶ್ರೇಷ್ಠ ಪೋಷಕ ನಟ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಲಕ್ಷ್ಮಣ್ ಮೊದಲ ನಾಟಕದ ರಿಹರ್ಸಲ್ ಓಡಾಟಕ್ಕೆ ₹ 3 ಸಾವಿರ ಖರ್ಚಾಗಿತ್ತಂತೆ. ಬರುವ ₹ 8ಸಾವಿರ ಸಂಬಳದಲ್ಲಿ ಓಡಾಟದ ಖರ್ಚು ನಿಭಾಯಿಸಲು ಸೈಕಲ್ ಖರಿದೀಸಿರುವ ಲಕ್ಷ್ಮಣ್ ತಮ್ಮ ವೃತ್ತಿ ಮತ್ತು ನಾಟಕದ ಕೆಲಸಗಳಿಗೆ ಇದನ್ನೇ ಬಳಸುತ್ತಾರಂತೆ.

ಒಂದೆಡೆ ಮನೆಯಲ್ಲಿ ಬಡತನ, ಇನ್ನೊಂದೆಡೆ ನಟನೆಯ ಹುಚ್ಚು. ಅಭಿನಯದ ಅವಕಾಶ ಅರಸಿಕೊಂಡು ಬೆಂಗಳೂರಿಗೆ ಬಂದಾಗ ಆಶ್ರಯ ನೀಡಿ, ರಂಗಭೂಮಿಯಲ್ಲಿ ಮುಂದುವರಿಯಲು ಬೆನ್ನೆಲುಬಾಗಿ ನಿಂತವರು ಶಾರದಾ ಪೂಜಾರಿ, ಮಲ್ಲಿಕಾ ಪೂಜಾರಿ, ದಿವಾಕರ್‌ ಪೂಜಾರಿ ಮತ್ತು ಪ್ರಿಸ್ಟಲ್‌ ಲೊಬೋ ಎಂಬ ನಾಲ್ಕು ಜನ ಸ್ನೇಹಿತರು ಎಂದು ನೆನೆಯುತ್ತಾರೆ ಲಕ್ಷ್ಮಣ್‌.

ರಂಗಭೂಮಿಯಲ್ಲಿ ಇನ್ನೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ರಂಗಶಂಕರದ ಮಾದರಿಯಲ್ಲಿ ತನ್ನ ಹುಟ್ಟೂರಿನಲ್ಲಿ ಕಲಾಕ್ಷೇತ್ರವೊಂದನ್ನು ಕಟ್ಟಬೇಕು ಮತ್ತು ಅವಕಾಶ ಸಿಕ್ಕಾಗ ಸಿನಿಮಾ ಕ್ಷೇತ್ರದಲ್ಲಿ ನಟಿಸಬೇಕು ಎನ್ನುವುದು ಲಕ್ಷ್ಮಣ್ ಪೂಜಾರಿ ಅವರ ಕನಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.