ADVERTISEMENT

ಆಹಾ ಪುರುಷಾಕಾರಂ! ಅದಕ್ಕೀಗ ಭಾರೀ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:45 IST
Last Updated 20 ನವೆಂಬರ್ 2019, 19:45 IST
ಪುರುಷ ಸೌಂದರ್ಯ
ಪುರುಷ ಸೌಂದರ್ಯ   

ನೋಡುವವರ ಹೃದಯ ಝಲ್‌ ಎನ್ನುವಂತೆಸಿಂಗರಿಸಿಕೊಳ್ಳುವುದು, ವ್ಯಾಕ್ಸಿಂಗ್ ಮಾಡಿಸಿಕೊಳ್ಳುವುದು, ಥ್ರೆಡಿಂಗ್ ಮಾಡಿಸಿಕೊಳ್ಳುವುದು ಮಹಿಳೆಯರಿಗಷ್ಟೇ ಸೀಮಿತವಾಗಿಲ್ಲ.‌ಆ ಸೌಂದರ್ಯದ ಕಲ್ಪನೆ ಇದೀಗ ಬದಲಾಗುತ್ತಿದೆ. ಪುರುಷರು ಕೂಡ ಮಹಿಳೆಯರಿಗೆ ಪೈಪೋಟಿ ನೀಡುವಂತೆ ದೇಹಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಹಾಗಾಗಿ ಪುರುಷ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆ ಮತ್ತು ಅದರ ಮಾರುಕಟ್ಟೆ ವಿಸ್ತಾರವಾಗಿ ಬೆಳೆಯುತ್ತಿದೆ.

ದಶಕದ ಹಿಂದೆ ‘ಪುರುಷರ ಸೌಂದರ್ಯ’ ಎಂಬ ಮಾತೇ ಇರಲಿಲ್ಲ. ಪುರುಷರು ಹೇಗೆ ಇದ್ದರೂ ನಡೆಯುತ್ತದೆ ಎಂಬ ಕಲ್ಪನೆ ಅನೇಕರಲ್ಲಿಇತ್ತು. ಉದ್ದುದ್ದ ಗಡ್ಡ ಬಿಟ್ಟರೂ ಸರಿ, ಬೆನ್ನಿಗೆ ತಾಕುವಂತೆ ಕೂದಲು ಬಿಟ್ಟರೂ ಆಗಬಹುದು, ಯಾವ ಬಣ್ಣದ ಬಟ್ಟೆ ತೊಟ್ಟರೂ ನಡೆದೀತು ಎಂಬುದು ಅನೇಕರಲ್ಲಿ ಇತ್ತು. ಅದರೀಗಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪುರುಷರು ಕೂಡ ಸುರರಂತೆ ಕಾಣಲು ನಡೆಸುತ್ತಿರುವ ಪ್ರಯತ್ನಗಳ ಫಲವಾಗಿ ಪುರುಷ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕಾ ಕ್ಷೇತ್ರ ಕ್ಷಿಪ್ರಗತಿಯಲ್ಲಿ ತನ್ನ ಬಾಹುಗಳನ್ನು ಎಲ್ಲೆಡೆ ಚಾಚುತ್ತಿದೆ.

ಪುರುಷ ಸೌಂದರ್ಯ ಕಾಳಜಿ ಹೆಚ್ಚಾಗುವುದಕ್ಕೆ ಸಿನಿಮಾ ನಟರು ಮತ್ತು ಕ್ರಿಕೆಟ್‌ ಆಟಗಾರರ ಪಾತ್ರ ಮುಖ್ಮುಯವಾದುದು. ಉದಾಹರಣೆಗೆ 90ರ ದಶಕದ ಹಲವು ಸಿನಿಮಾಗಳಲ್ಲಿ, ಬಾಲಿವುಡ್‌ ನಟರು ಕೂದಲು ಬೆಳೆಸಿರುವುದನ್ನು ಕಾಣಬಹುದಿತ್ತು.ಆದರೆ ಈಚೆಗೆ ಅವರು ನಟಿಸಿರುವ ಹಲವು ಜಾಹೀರಾತುಗಳನ್ನು ಗಮನಿಸಿದರೆ ಎದೆಯ ಮೇಲೆ ಒಂದು ಕೂದಲೂ ಕಾಣದಂತೆ ವ್ಯಾಕ್ಸಿಂಗ್ ಮಾಡಿಸಿರುವುದು ಗೊತ್ತಾಗುತ್ತದೆ. ಇದೆಲ್ಲಾ ನೋಡುಗರನ್ನು ಆಕರ್ಷಿಸುವ ಪ್ರಯತ್ನಗಳೇ. ಕ್ರೀಡಾ ತಾರೆಯರಾದ ಮಹೇಂದ್ರ ಸಿಂಗ್‌ ಧೋನಿ, ವಿರಾಟ್ ಕೊಹ್ಲಿ ಮತ್ತು ಲಿಯೊನಲ್ ಮೆಸ್ಸಿ ಕೇಶ ವಿನ್ಯಾಸಕ್ಕೆ ಸಂಬಂಧಿಸಿದಂತೆ ಹೊಸ ಪರಿಕಲ್ಪನೆಗಳನ್ನೇ ಮುಂದಿಟ್ಟರು. ನಟ ರಣವೀರ್ ಸಿಂಗ್‌, ಕ್ರಿಕೆಟಿಗ ಶಿಖರ್ ಧವನ್‌ ಮತ್ತು ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್ ಅವರ ಮೀಸೆಗಳು ಕೂಡ ಹೊಸ ಟ್ರೆಂಡ್‌ ಸೃಷ್ಟಿಸಿವೆ.

ADVERTISEMENT

ಇಂತಹ ಟ್ರೆಂಡ್‌ಗಳಿಂದಾಗಿ ಕೂದಲ ಆರೈಕೆಗೆ ನೆರವಾಗುವ ಶಾಂಪುಗಳಿಂದ ಹಿಡಿದು, ಫೇಸ್‌ವಾಷ್‌ಗಳು, ಫೇಸ್‌ಕ್ರೀಮ್‌ಗಳು, ಫೇಸ್‌ಜೆಲ್, ಹೇರ್‌ಜೆಲ್‌ಗಳು ಸೇರಿದಂತೆ ವಿವಿಧ ಬಗೆಯ ಪುರುಷ ಸೌಂದರ್ಯವರ್ಧಕ ಉತ್ಪನ್ನಗಳು ನಿತ್ಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

ಈ ಬದಲಾವಣೆಗಳಿಂದಾಗಿಯೇ ಬಿಯರ್ಡೊ, ದಿ ಮ್ಯಾನ್ ಕಂಪನಿ, ಬಾಂಬೆ ಶೇವಿಂಗ್ ಸೇರಿದಂತೆ ಹಲವು ಕಂಪನಿಗಳು ಪುರಷರಿಗಾಗಿಯೇ ವಿಶೇಷ ಸೌಂದರ್ಯವರ್ಧಕಗಳನ್ನು ತಯಾರಿಸುವಲ್ಲಿ ಮಗ್ನವಾಗಿವೆ.

ಕೆಲವು ವರ್ಷಗಳ ಹಿಂದೆ ‘ಸಂಪೂರ್ಣವಾಗಿ ಗಡ್ಡ ಕೆರೆಸಿ, ಕೂದಲು ತುಸು ಕತ್ತರಿಸಿದರೆ ಸಾಕು. ಚೆನ್ನಾಗಿಯೇ ಕಾಣಿಸುತ್ತೇವೆ’ ಎಂಬ ಭಾವನೆ ಹಲವರಲ್ಲಿತ್ತು. ಆದರೆ ಈಗ ಮುಖದ ಆಕೃತಿಗೆ ತಕ್ಕಂತೆ ಗಡ್ಡ ಬಿಡುವ ಪರಿಪಾಠ ಆರಂಭವಾಗಿದೆ. ಇದರಿಂದಾಗಿ ಗಡ್ಡದ ಆರೈಕೆಗೆಂದೇ ವಿಶೇಷ ದ್ರಾವಣಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ದೇಹದ ಸ್ಥಿತಿಗೆ ಅನುಗುಣವಾಗಿ ವಿಶೇಷ ಫೇಸ್‌ವಾಷ್‌ಗಳು, ಬಾಡಿವಾಷ್‌ಗಳು ಕೂಡ ಶಾಪಿಂಗ್‌ ಮಾಲ್‌ಗಳಲ್ಲಿ, ಅಂಗಡಿಗಳಲ್ಲಿ ರಾರಾಜಿಸುತ್ತಿವೆ.

2001ರಲ್ಲಿ ಅಮೆರಿಕದ ‘ನೈರ್’ ಕಂಪನಿ ಎದೆಯ ಮೇಲಿನ ರೋಮಗಳನ್ನು ಅಳಿಸಲು ನೆರವಾಗುವ ವಿಶೇಷ ಕ್ರೀಮ್‌ ಬಳಕೆಗೆ ತಂದಿತು. ಸೌಂದರ್ಯ ಉತ್ಪನ್ನಗಳ ತಯಾರಿಕಾ ಸಂಸ್ಥೆ ವೀಟ್‌ ಕೂಡ ಈಚೆಗೆ ‘ವೀಟ್ ಫಾರ್ ಮೆನ್‌’ ಹೆಸರಿನಲ್ಲಿ ಉತ್ಪನ್ನವನ್ನು ಮಾರುಕಟ್ಟೆಗೆ ತಂದಿದೆ. ಬಾಲಿವುಡ್ ನಟ ಕಾರ್ತಿಕ್ ಆರ್ಯನ್‌ ಈ ಉತ್ಪನ್ನದ ಪ್ರಚಾರ ರಾಯಭಾರಿಯಾಗಿದ್ದು, ಇದಕ್ಕೆ ಸಂಬಂಧಿಸಿದ ಜಾಹೀರಾತು ಕೂಡ ಹರಿದಾಡುತ್ತಿದೆ.

ಐಜೆನ್ ಬ್ಯೂಟಿ ಕನ್ಸ್ಯೂಮರ್ ವರದಿ ಪ್ರಕಾರ ಪುರುಷರ ತ್ವಚೆಯ ಆರೈಕೆಗೆ ನೆರವಾಗುವಂತಹ ಉತ್ಪನ್ನಗಳ ಮಾರಾಟ ಪ್ರಮಾಣ 2018ರಲ್ಲಿ ಶೇ 7ರಷ್ಟು ಹೆಚ್ಚಳವಾಗಿದೆ. 18ರಿಂದ 22 ವರ್ಷದ ಶೇ 40ರಷ್ಟು ಯುವಕರು ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಬಳಸಲು ಕಾಳಜಿ ತೋರುತ್ತಿರುವುದಾಗಿ ತಿಳಿಸಿದ್ದಾರೆ.

2022ರ ಹೊತ್ತಿಗೆ ಪುರುಷರ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕಾ ಮಾರುಕಟ್ಟೆ ₹11 ಲಕ್ಷ ಕೋಟಿಗೆ ತಲುಪಲಿದೆ ಎಂದು ಅಲೈಡ್ ಮಾರ್ಕೆಟ್ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ಪುರುಷರಿಗೆಂದೇ ವಿಶೇಷ ಸಲೂನ್‌ಗಳು

ಮಹಿಳೆಯರ ಬ್ಯೂಟಿ ಪಾರ್ಲರ್‌ಗಳಿಗೆ ಪೈಪೋಟಿ ನೀಡುವಂತೆ ಮೆನ್ಸ್‌ ಪಾರ್ಲರ್‌ಗಳು ತಲೆ ಎತ್ತುತ್ತಿವೆ. ದೇಹ ಸೌಂದರ್ಯದ ಕಾಳಜಿ ಹೊಂದಿರುವ ಹಲವರು ಸಮಯ ಮತ್ತು ಹಣ ಎರಡನ್ನೂ ಮೀಸಲಿಡಲು ನಡೆಸುತ್ತಿರುವ ಪ್ರಯತ್ನಗಳೇ ಇದಕ್ಕೆ ಸಾಕ್ಷಿ. ಇದರಿಂದ ಹೇರ್ ಸ್ಟೈಲಿಂಗ್, ಹೇರ್ ಸ್ಪಾಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಕೆಂಪು, ಬರ್ಗೆಂಡಿ, ಕಂದು ಸೇರಿದಂತೆ ಬಣ್ಣ ಬಣ್ಣದ ಕೂದಲು ತಯಾರಿಸಿಕೊಳ್ಳುವ ಪರಿಪಾಠವಂತೂ ಕೆಲವು ವರ್ಷಗಳ ಹಿಂದೆಯೇ ಆರಂಭವಾಗಿದೆ. ಇದು ಕೂಡ ಕೇಶವಿನ್ಯಾಸದ ಒಂದು ಭಾಗವೇ.

ಈ ಬದಲಾವಣೆಗಳಿಗೆ ತಕ್ಕಂತೆ, ಆನ್‌ಲೈನ್‌ನಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅರ್ಬನ್‌ಕ್ಯಾಪ್ ಸಂಸ್ಥೆ, ಮನೆಗಳಲ್ಲೇ ಸೇವೆ ಒದಗಿಸಲು ಮುಂದಾಗಿದೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ 9 ನಗರಗಳಲ್ಲಿ ಸೇವೆ ಒದಗಿಸುವುದಾಗಿ ಘೋಷಿಸಿದೆ.

ಪುರುಷರು ಮತ್ತು ಮಹಿಳೆಯರು ದೇಹ ಸೌಂದರ್ಯದ ಬಗ್ಗೆ ತೋರುತ್ತಿರುವ ಸಂಬಂಧಿಸಿದಂತೆ ಮೈಂಡ್‌ಬಾಡಿ ವೆಲ್‌ನೆಸ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲೂ ಪುರುಷರು ಕೂಡ ಮಹಿಳೆಯರಷ್ಟೇ ಕಾಳಜಿ ತೋರುತ್ತಿದ್ದಾರೆ ಎಂಬುದು ಗೊತ್ತಾಗಿದೆ.

46%

ದೇಹ ಸೌಂದರ್ಯದ ಕಾಳಜಿ ವ್ಯಕ್ತಪಡಿಸಿದ 18–25 ವರ್ಷದೊಳಗಿನ ಪುರುಷರು. ಇದೇ ವಯಸ್ಸಿನ ಮಹಿಳೆಯರು ಶೇ 48%

42%

ದೇಹ ಸೌಂದರ್ಯದ ಕಾಳಜಿ ವ್ಯಕ್ತಪಡಿಸಿದ 26–45 ವರ್ಷದೊಳಗಿನ ಪುರುಷರು. ಇದೇ ವಯಸ್ಸಿನ ಮಹಿಳೆಯರು ಶೇ 39%

₹2,000 (29 ಡಾಲರ್‌)

ಸೌಂದರ್ಯಕ್ಕಾಗಿಯೇ ಪುರುಷರು ತಿಂಗಳಿಗೆ ಖರ್ಚು ಮಾಡುತ್ತಿರುವ ಹಣ.

₹2,500 (39 ಡಾಲರ್‌)

ಸೌಂದರ್ಯಕ್ಕಾಗಿಯೇ ಮಹಿಳೆಯರು ತಿಂಗಳಿಗೆ ಖರ್ಚು ಮಾಡುತ್ತಿರುವ ಹಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.