ADVERTISEMENT

ಮಾನ್ಸೂನ್‌ ಮಳೆರಾಗಗಳ ‘ಫ್ಯೂಜನ್’

ವಿಕ್ರಂ ಕಾಂತಿಕೆರೆ
Published 14 ಜುಲೈ 2019, 19:45 IST
Last Updated 14 ಜುಲೈ 2019, 19:45 IST
ಅಶ್ವಿನಿ ಭಿಡೆ
ಅಶ್ವಿನಿ ಭಿಡೆ   

ಮಧುರ ರಾಗಾಲಾಪದೊಂದಿಗೆ ಮುದ ನೀಡಿದ ವೇದಿಕೆಯಲ್ಲೇ ವಾದ್ಯಗಳಲ್ಲಿ ಹಿಂದುಸ್ತಾನಿ-ಕರ್ನಾಟಕ ಶೈಲಿಯ ಝೇಂಕಾರದ ಆಮೋದ. ಕೊನೆಯಲ್ಲಿ ಗಾಯನ, ವಾದನಗಳ ಜುಗಲ್ ಬಂದಿ; ಅದನ್ನೂ ದಾಟಿ ಕಛೇರಿಯು ‘ಫ್ಯೂಜನ್’ ರೂಪ ಪಡೆಯುತ್ತಿದ್ದಂತೆ ಕಲಾರಸಿಕರು ಭಾವಲೋಕದಲ್ಲಿ ಬಂಧಿ.

ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಬ್ಯಾನಿಯನ್ ಟ್ರೀ ಸಂಸ್ಥೆ ಶನಿವಾರ ಆಯೋಜಿಸಿದ್ದ ಮಳೆರಾಗಗಳ ಸಂಗೀತೋತ್ಸವ ‘ಬರ್ಖಾ ಋತು’ ರಸಿಕರನ್ನು ರಾಗದ ಅಲೆಗಳಲ್ಲಿ ತೇಲಿಸಿ ರೋಮಾಂಚನಗೊಳಿಸಿತು.

ಭಾರತದ ಮೂರು ಭಾಗಗಳ ಮೂವರು ಕಲಾವಿದರು ಮೂರು ಪ್ರಕಾರಗಳಲ್ಲಿ ಪ್ರಸ್ತುತಪಡಿಸಿದ ಮಳೆರಾಗಗಳು, ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದರೆ ಕೊನೆಯಲ್ಲಿ ಪಾಶ್ಚಾತ್ಯ ಶೈಲಿಯ ವಾದನವೂ ಸೇರಿ ಸೃಷ್ಟಿಯಾದ ಫ್ಯೂಜನ್ ಲೋಕ ಯುವ ತಲೆಮಾರಿನವರ ಮನವನ್ನೂ ರಂಗೇರಿಸಿತು.

ADVERTISEMENT

ಕೋಲ್ಕತ್ತದ ಉಸ್ತಾದ್ ಶುಜಾತ್ ಹುಸೇನ್ ಖಾನ್, ಮುಂಬೈನ ವಿದುಷಿ ಅಶ್ವಿನಿ ಭಿಡೆ ಮತ್ತು ಚೆನ್ನೈನ ಪ್ರಸನ್ನ ಅವರ ಗಾಯನ-ವಾದನಕ್ಕೆ ರವೀಂದ್ರ ಯಾವಗಲ್, ವ್ಯಾಸಮೂರ್ತಿ ಕಟ್ಟಿ, ಅಮಿತ್ ಚೌಬೆ, ಸಪನ್ ಅಂಜಾರಿಯಾ ಮತ್ತು ಪ್ರಪಂಚಂ ರವೀಂದ್ರನ್ ಅವರ ತಾಳ-ಲಯವೂ ಸೇರಿದಾಗ ಸಭಾಂಗಣದಲ್ಲಿ ರಾಗದ ಮಳೆಯ ಸಿಂಚನವಾಯಿತು.

ಜೈಪುರ-ಅತ್ರೌಲಿ ಘರಾಣದ ಮೇರು ಕಲಾವಿದೆ ಅಶ್ವಿನಿ ಭಿಡೆ, ಮಿಯಾ ಕಿ ಮಲ್ಹಾರ್‌ ರಾಗದ ಮೂಲಕ ಕಛೇರಿಗೆ ಚಾಲನೆ ನೀಡಿದ್ದರು. ಮೇವಾತಿ-ಪಟಿಯಾಲ ಘರಾಣೆಯ ಅಂಶಗಳನ್ನೂ ಸೇರಿಸಿಕೊಂಡು ತಮ್ಮದೇ ಆದ ಗಾಯನ ಶೈಲಿ ರೂಢಿಸಿಕೊಂಡಿರುವ ಅಶ್ವಿನಿ ಪ್ರಸ್ತುತಪಡಿಸಿದ ‘ಕರೀಮ ನಾಮ ತೇರೋ…’ದಲ್ಲಿ ಮಳೆಯ ಪ್ರಸ್ತಾಪವಿರಲಿಲ್ಲ. ಆದರೂ ಭಾವದ ವರ್ಷಧಾರೆ ಸುರಿಸಿತು. ಇದು ಭಕ್ತಿ ಪ್ರಧಾನವಾದ ರಚನೆ. ವಿಳಂಬಿತ್ ತೀನ್ ತಾಳ್‌ನಲ್ಲಿ ಪ್ರಸ್ತುತಪಡಿಸಿದ ಖಯಾಲ್ ಮೋಹಕ ಆಲಾಪಗಳ ಮೂಲಕ ಹೃದಯಾದಳಕ್ಕೆ ಇಳಿಯಿತು. ಧೃತ್ ತೀನ್ ತಾಳ್‌ನಲ್ಲಿ ‘ಬೋಲೆ ರೆ ಪಪಿಹರಾ…’ ಹಾಡಿದಾಗ ಸಹೃದಯರ ಮನ ಕುಣಿಯಿತು.

ಮುಂದಿನದು ರಾಗ ಪ್ರತೀಕ್ಷಾ. ಅಪರೂಪದ ಏಳೂವರೆ ಮಾತ್ರದ ಮಧ್ಯಲಯದಲ್ಲಿ ‘ಕಾರಿ ಬದರಿಯಾ…ಪಿಯಾ ನಹಿ ಪಾಸ್ ಅಬ್ ಕೈಸೆ ಕಹೂಂ ಸಖಿ…’ ಪ್ರಸ್ತುತಗೊಂಡಾಗ ತಲೆದೂಗಿದ ಶ್ರೋತೃಗಳಿಗೆ ಸರ್‌ಗಂ ಗಳ ರುಚಿಯೂ ಕಾದಿತ್ತು. ಧೃತ್ ಗತ್‌ನಲ್ಲಿ ’ಪ್ರೀತಂ ಬಿನಾ ಲಾಗತ್ ನಾಹಿ ಜಿಯಾ’ ಕೂಡ ಮುದ ನೀಡಿತು. ಸಂತ ತುಕಾರಾಂ ಅವರ ‘ಅತಾ ಕೋಠೆ ದಾವೆ ಮನ್’ ಅಭಂಗ್ ಹಾಡಿ ಗಾಯನಕ್ಕೆ ಕೊನೆ ಹಾಡಿದರು.

ಸಿತಾರ್ ವಾದನ-ಗಾಯನದ ಮ್ಯಾಜಿಕ್

ಎಲೆಕ್ಟ್ರಿಕ್ ಗಿಟಾರ್‌ನಲ್ಲಿ ಅಮೃತವರ್ಷಿಣಿ ನುಡಿಸಿದ ಪ್ರಸನ್ನ ಅವರ ಕಛೇರಿ ನಂತರ ವೇದಿಕೆಯೇರಿದವರು ಇಮ್ದಾದ್ ಖಾನ್ ಘರಾಣದಲ್ಲಿ ಪಳಗಿರುವ ಗಾಯಕ, ಸಿತಾರ್ ವಾದಕ ಸುಜಾತ್ ಹುಸೇನ್. ಅವರು ರಾಗ-ಲಯದ ಮ್ಯಾಜಿಕ್ ಮಾಡಿದರು. ‘ಗೌಡ್ ಮಲ್ಹಾರ್‌’ ರಾಗವನ್ನು ಸಾಂಪ್ರದಾಯಿಕ ಆಲಾಪ್-ಜೋಡ್ –ಜಾಲಾದ ಮೂಲಕ ಮುಂದಿಟ್ಟ ನಂತರ ಪ್ರಸನ್ನ ಅವರನ್ನೂ ವೇದಿಕೆಗೆ ಕರೆದು ಜುಗಲ್ ಬಂದಿ ಪ್ರಸ್ತುತಪಡಿಸಿದರು. ತಮ್ಮದೇ ರಚನೆ ‘ಜಿಂದಗಿ ಸೆ ಬಡಿ ಸಜಾ ಹಿ ನಹಿ…ಔರ್ ಕ್ಯಾ ಜುಲ್ಮ್ ಹೇ ಪತಾಹಿ ನಹಿ’ಯನ್ನು ಹಾಡುತ್ತ ರಸಿಕರನ್ನು ಕುಣಿಸಿದರು. ಎರಡು ಜೋಡಿ ತಬಲಾ ಮತ್ತು ಮೃದಂಗದ ನಾದವೂ ಸೇರಿದಾಗ ಸಭಾಂಗಣದಲ್ಲಿ ದೈವೀಕ ಭಾವ ಸೃಷ್ಟಿಯಾಯಿತು. ಬರಬರುತ್ತ ಪ್ರಸನ್ನ ಅವರ ಗಿಟಾರ್ ಪಾಶ್ಚಾತ್ಯ ಶೈಲಿಯನ್ನು ಮೀಟಿತು. ಹೀಗಾಗಿ ಕಛೇರಿಗೆ ಫ್ಯೂಜನ್‌ನ ಸ್ಪರ್ಶವೂ ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.