ADVERTISEMENT

ಎರಡೂ ಕಡೆ ಫೋಟೊ ತೆಗೆದಿದ್ದು ಒಬ್ಬನೇ

ರಘುನಾಥ ರಾವ್ ತಾಪ್ಸೆ
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST
   

ಫೋಟೊಗ್ರಫಿ ಕಲಿಕೆಯ ದಿನಗಳಲ್ಲಿ ನನ್ನ ಬಂಧುಗಳು, ಗೆಳೆಯರು ಅವರವರ ಮನೆಯ ವಿವಾಹ, ಶುಭಕಾರ್ಯಗಳಲ್ಲಿ ಫೋಟೊಗಳನ್ನು ತೆಗೆಯಲು ನನಗೆ ಹೇಳುತ್ತಿದ್ದರಿಂದ ಅವರ ಖರ್ಚಿನಲ್ಲಿ ಉಚಿತವಾಗಿ ಫೋಟೊ ತೆಗೆದು ಕೊಡುತ್ತಿದ್ದೆ.

1981ರ ನನ್ನ ಮದುವೆಯ ಸಂದರ್ಭದಲ್ಲಿ ಮದುವೆಯ ಸವಿ ಸವಿ ನೆನಪಿಗೆ ಇರಲೆಂದು, ಹಿಂದಿನ ದಿನ ಕೇವಲ 12 ಫೋಟೊ ತೆಗೆಯಲು ಒಂದು ಸ್ಟುಡಿಯೊಗೆ ಆರ್ಡರ್ ಕೊಟ್ಟು ಬಂದೆ. ಮದುವೆ ಆಯ್ತು, ಹೆಂಡ್ತಿ ಮನೆಗೆ ಬಂದಾಯ್ತು. ಸ್ಟುಡಿಯೊದಿಂದ ಮದುವೆ ಫೋಟೊ ತಂದಾಯ್ತು. ಫೋಟೊಗಳು ಎಷ್ಟು ಚೆನ್ನಾಗಿ ತೆಗೆದಿದ್ದಾನೆ ಅಂತಾ ನೋಡಿದ್ದೇ ನೋಡಿದ್ದು.

ಮದುವೆಯಾದ ಹೊಸತರಲ್ಲಿ ತವರಿಗೆ ಹೋಗಿದ್ದ ಪತ್ನಿಯನ್ನು ಮನೆಗೆ ಕರೆತರಲು ಹೋಗಿದ್ದೆ. ಮಧ್ಯಾಹ್ನ ಊಟವಾದ ನಂತರ 'ಮದುವೆ ಫೋಟೊ ನೋಡಿ ಭಾವ' ಎಂದು ನನ್ನ ಭಾವಮೈದುನ ಆಲ್ಬಂಕೊಟ್ಟ. ಕುತೂಹಲದಿಂದ ನೋಡಲು ಆಶ್ಚರ್ಯವಾಯ್ತು. ಎಲ್ಲಾ ಫೋಟೊ ನೋಡುತ್ತಿರಲು ಈ ಫೋಟೊಗಳನ್ನು ಮೊದಲು ನೋಡಿದ್ದೆ ಎನಿಸುತ್ತಿತ್ತು.

ADVERTISEMENT

ಸಂಜೆಯ ವೇಳೆಗೆ ಹೆಂಡ್ತಿಯನ್ನು ಕರೆದುಕೊಂಡು ಮನೆಗೆ ಬಂದು ಕಪಾಟಿನಲ್ಲಿದ್ದ ನನ್ನ ಮದುವೆಯ ಆಲ್ಬಂ ತೆರೆದು ಮತ್ತೊಮ್ಮೆ ಫೋಟೊಗಳನ್ನು ನೋಡಿದೆ. 'ಅರೇ... ಆ ಫೋಟೊಗಳು... ಈ ಫೋಟೊಗಳು ಒಂದೇ ಆಗಿವೆಯಲ್ಲಾ’ ಎಂದು ಖಚಿತಪಡಿಸಿಕೊಂಡೆ. ಆಗ ಸ್ಟುಡಿಯೋದವನ ಜಾಣತನ ಗೊತ್ತಾಯ್ತು. ಮದುವೆಯಲ್ಲಿ ಫೋಟೊ ತೆಗೆಯಲು ನಾನು ಹೇಳಿದ್ದು, ನನ್ನ ಮಾವನವರು ಹೇಳಿದ್ದು ಒಂದೇ ಸ್ಟುಡಿಯೋದವನಿಗೆ. ಅಂದರೆ ಎರಡು ಆರ್ಡರ್‌ಗಳು. ಫೋಟೊಗಳು ಮಾತ್ರ ಒಂದೇ.

ಸಿದ್ದವೀರಪ್ಪ ಬಡಾವಣೆ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.