ADVERTISEMENT

ಧರ್ಮರಾಯನ ಅಂಗಳದಲ್ಲಿ ಪಾರ್ಕಿಂಗ್‌!

ದಿಲಾವರ್ ರಾಮದುರ್ಗ
Published 15 ಡಿಸೆಂಬರ್ 2019, 19:45 IST
Last Updated 15 ಡಿಸೆಂಬರ್ 2019, 19:45 IST
ಪಾರ್ಕಿಂಗ್‌ ತಾಣವಾಗಿರುವ ಧರ್ಮರಾಯಸ್ವಾಮಿ ದೇವಸ್ಥಾನದ ಅಂಗಳ
ಪಾರ್ಕಿಂಗ್‌ ತಾಣವಾಗಿರುವ ಧರ್ಮರಾಯಸ್ವಾಮಿ ದೇವಸ್ಥಾನದ ಅಂಗಳ   

ಕಾರ್ಪೊರೇಷನ್‌ಗೆ ಸಮೀಪದ ತಿಗಳರ ಪೇಟೆಯಲ್ಲಿ ಧರ್ಮರಾಯನ ದೇವಸ್ಥಾನವಿದೆ. ಪ್ರತಿ ವರ್ಷದ ಏಪ್ರಿಲ್ ತಿಂಗಳ ಚೈತ್ರಮಾಸದಲ್ಲಿ ಇಲ್ಲಿ ಕರಗ ಉತ್ಸವ ಜರುಗುತ್ತದೆ. ಇದು ನಗರದಲ್ಲಿರುವ ಅತ್ಯಂತ ಅಪರೂಪದ ಮತ್ತು ಮಹತ್ವದ ದೇವಸ್ಥಾನ ಎಂದು ಹೆಸರಾಗಿದೆ.

ಕೆಆರ್‌ ಮಾರ್ಕೆಟ್‌ ಕಡೆಯಿಂದ ಎಸ್‌ಜೆಪಿ ರಸ್ತೆ ಹಿಡಿದು ಟೌನ್‌ಹಾಲ್‌ ಕಡೆ ಸಾಗುವಾಗ ಹಾದಿಯಲ್ಲಿ ಎಡಕ್ಕೆ ಬರುವ ಸಣ್ಣ ತಿರುವ ಎಸ್‌ಪಿ ರಸ್ತೆ ಸೇರುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಓಲ್ಡ್‌ ತಾಲೂಕಾ ಕಚೇರಿ ರಸ್ತೆ ಅಥವಾ ಧರ್ಮರಾಯಸ್ವಾಮಿ ದೇವಸ್ಥಾನ ಮುಖ್ಯ ರಸ್ತೆಗೆ ಸೇರುವ ಪುಟ್ಟ ಸರ್ಕಲ್‌. ಅಲ್ಲಿಂದ ಎಡಕ್ಕೆ ಕೆಲವೇ ಮೀಟರ್‌ಗಳಷ್ಟು ಸಾಗಿದರೆ ಧರ್ಮರಾಯಸ್ವಾಮಿ ದೇವಸ್ಥಾನ ಕಾಣಸಿಗುತ್ತದೆ.

ಇಡೀ ರಸ್ತೆ ದೇವಸ್ಥಾನದ ಅಕ್ಕಪಕ್ಕ ಮನೆಗಳು ಮತ್ತು ಅಂಗಡಿಗಳಿಂದ ಗಿಜಿ ಗಿಜಿ ಎನ್ನುವಂತಿವೆ. ಈ ಕಿರಿದಾದ ರಸ್ತೆ ದಾಟಲು ಒಮ್ಮೊಮ್ಮೆ ದೊಡ್ಡ ಸಾಹಸವನ್ನೇ ಮಾಡಬೇಕಾಗುತ್ತದೆ. ಇಲ್ಲಿಂದ ಸ್ವಲ್ಪ ದೂರದಿಂದ ಉದ್ದಕ್ಕೂ ಇರುವ ಸ್ಟ್ರೀಟ್‌ ಫುಡ್‌ ತಿಂಡಿ ತಿನಿಸುಗಳ ಸವಿಯಲು ನಗರದ ಜನ ಸಂಜೆಯಷ್ಟೊತ್ತಿಗೆ ದಾಂಗುಡಿ ಇಡಲಾರಂಭಿಸುತ್ತಾರೆ.

ADVERTISEMENT

ಜನನಿಬಿಡ ಪ್ರದೇಶವಾದ್ದರಿಂದ ಇಲ್ಲಿ ಪಾರ್ಕಿಂಗ್‌ ಒಂದು ದೊಡ್ಡ ಸಮಸ್ಯೆ. ಇದನ್ನು ನೀಗಲು ಸುತ್ತಮುತ್ತಲಿನವರು ಧರ್ಮರಾಯನ ಸನ್ನಿಧಿಗೇ ಬರುತ್ತಾರೆ. ಅಂದರೆ ದೇವಸ್ಥಾನದ ಅಂಗಳದ ತುಂಬ ತಮ್ಮ ವಾಹನಗಳನ್ನು ಪಾರ್ಕ್‌ ಮಾಡುತ್ತಾರೆ.

ದೇವಾಲಯದ ಮುಖ್ಯ ಮಹಾದ್ವಾರ, ಒಳಕ್ಕೆ ಪ್ರವೇಶಸುತ್ತಿದ್ದಂತೆ ಅಂಗಳದ ಎಡಕ್ಕೆ ಸಿಗುವ ದೊಡ್ಡ ಕಂಬ, ರಥ ಮತ್ತು ಪ್ರವೇಶದ್ವಾರಕ್ಕೆ ಹತ್ತಿರದಲ್ಲಿ ಎರಡು ಸುಂದರ ಆನೆಯ ಶಿಲ್ಪಕಲಾಕೃತಿಗಳು ಮನಮೋಹಕ. ದೇವಸ್ಥಾನದ ಈ ಅಪರೂಪದ ಆ್ಯಂಬಿಯನ್ಸ್‌ ಅನ್ನು ಕಣ್ತುಂಬಿಕೊಳ್ಳುವುದಕ್ಕೆ ಸಂಜೆಯಾಗುತ್ತಿದ್ದಂತೆ ಸಾಧ್ಯವೇ ಆಗುವುದಿಲ್ಲ. ಇನ್ನು ರಾತ್ರಿಯಾಗುತ್ತಿದ್ದಂತೆ ದೇವಸ್ಥಾನದ ಅಂಗಳ ತುಂಬ ವಾಹನಗಳನ್ನು ಪಾರ್ಕ್‌ ಮಾಡುವುದರಿಂದ ಆ ಸಾಧ್ಯತೆ ಇನ್ನೂ ಕ್ಷೀಣ.

ಆನೆಯ ಸುಂದರ ಕಲಾಕೃತಿಗಳ ಪಕ್ಕ ಸಿಗುವ ಸಣ್ಣ ಜಾಗೆಯನ್ನು ಕೂಡ ಬಿಡದೆ ಸ್ಕೂಟರ್‌, ಬೈಕ್‌ ನಿಲ್ಲಿಸುತ್ತಾರೆ. ಅಲ್ಲಲ್ಲಿ ನಿಲ್ಲಿಸಿದ ಆಟೊಗಳು, ಗೂಡ್ಸ್‌ ಗಾಡಿಗಳು ಕೂಡ ಕಾಣಿಸುತ್ತವೆ. ಇಲ್ಲಿ ಸಂಜೆಯ ಹೊತ್ತು ಸಣ್ಣ ವ್ಯವಹಾರ, ವಾಹನ ರಿಪೇರಿಯ ಕೆಲಸವೂ ನಡೆಯುತ್ತಿರುತ್ತದೆ.

ಇದು ಗಂಭೀರವಾದ ಅಪರಾಧ ಎನ್ನುವುದು ಇಲ್ಲಿನ ವಾದವಲ್ಲ. ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರವಾಗಿ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ದೇವಸ್ಥಾನಗಳೂ ಬಳಕೆಯಾಗುವ ಅನಿವಾರ್ಯತೆ ನಗರಕ್ಕೆ ಬಂತಲ್ಲ ಎನ್ನುವುದಷ್ಟೇ. ಇಡೀ ರಾಜ್ಯದಲ್ಲಿ ಧರ್ಮರಾಯನ ದೇವಸ್ಥಾನ ಅಂತ ಇರುವುದು ಇದೊಂದೇ. ಹೀಗಾಗಿ ಪರಪಂಪರೆಯ ದೃಷ್ಟಿಯಿಂದ ಇದು ಮಹತ್ವದ್ದು ಕೂಡ.

ಇದು ಪೂಜೆ, ಶ್ರದ್ಧಾ ಭಕ್ತಿ ಸಮರ್ಪಣೆಗಷ್ಟೇ ಅಲ್ಲದೇ ಪ್ರವಾಸಿ ತಾಣವಾಗಿಯೂ ಮಹತ್ವ ಪಡೆದುಕೊಂಡಿದೆ ಎನ್ನುವುದು ಗಮನಾರ್ಹ. ಇದರ ಪ್ರಾಂಗಣ, ಶಿಲ್ಪಕಲೆ, ಕೆತ್ತನೆಯ ಕುಸುರಿ ಹೀಗೆ ಕಲಾತ್ಮಕ ದೃಷ್ಟಿಕೋನದಿಂದಲೂ ವೀಕ್ಷಣೆಗೆ ಯೋಗ್ಯ ಸ್ಥಳವೂ ಆಗಿರುತ್ತದೆ. ಧಾರ್ಮಿಕ ಚಟುವಟಿಕೆಗಳು ಮತ್ತು ಸಾಮುದಾಯಿಕವಾಗಿ ಒಂದೆಡೆ ನೆಮ್ಮದಿಗಾಗಿ ಇರುವ ಇಂಥ ತಾಣಗಳ ಸ್ವಚ್ಛತೆ ಕಾಪಾಡುವುದು ಮತ್ತು ದುರ್ಬಳಕೆಯನ್ನು ತಡೆಯುವುದು ಕೂಡ ಮುಖ್ಯ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಇಲ್ಲಿನ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ವಾಹನಗಳ ನಿಲುಗಡೆಗಾಗಿ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಅಗತ್ಯ ಎನ್ನುತ್ತಾರೆ ಸ್ಥಳೀಯರು.

ಸುಪ್ರಸಿದ್ದ ಧರ್ಮರಾಯ ದೇಗುಲ

ಮಹಾಭಾರತದ ಪಾಂಡವರಿಗೆ ಸಮರ್ಪಿತವಾಗಿರುವ ದೇಶದ ಏಕೈಕ ದೇವಸ್ಥಾನವಿದು.ದೇವಾಲಯ ನಿರ್ಮಾಣದ ಕಾಲ ಅಸ್ಪಷ್ಟ. ಮುಮ್ಮಡಿ ಕೃಷ್ಣರಾಜ ಒಡೆಯರು ದೇವಸ್ಥಾನಕ್ಕೆ ಭೂಮಿ ಕೊಟ್ಟಿದ್ದಾರೆ ಎನ್ನುವ ಪ್ರತಿಪಾದನೆಗಳಿವೆ. ವಿಶಾಲ ಅಂಗಳ, ಅಶ್ವತ್ಥಕಟ್ಟೆ, ದೊಡ್ಡ ಕಂಬ ಮತ್ತು ತೂಗುಯ್ಯಾಲೆ ದೇವಸ್ಥಾನದ ಪ್ರಮುಖ ಆಕರ್ಷಣೆ. ದ್ರಾವಿಡ ಶೈಲಿಯ ಗೋಪುರಗಳು ಕೂಡ ವಿಶೇಷವೇ.

ಗರ್ಭಗುಡಿಯೊಳಗೆ ಧರ್ಮರಾಯಸ್ವಾಮಿ, ಶ್ರೀಕೃಷ್ಣ, ಅರ್ಜುನ, ದ್ರೌಪದಿ ಮತ್ತು ಭೀಮಸೇನರ ಮೂರ್ತಿಗಳಿವೆ.

ವಹ್ನಿಕುಲ ಕ್ಷತ್ರಿಯ (ತಿಗಳ ಕ್ಷತ್ರಿಯ) ಜನಾಂಗದವರು ತಮ್ಮ ಆರಾಧ್ಯ ದೈವ ದ್ರೌಪದಿಗೆ ಕಳಸ ಹೊತ್ತು ನೃತ್ಯ ಮಾಡುತ್ತಾ ಹರಕೆ ಒಪ್ಪಿಸುತ್ತಾರೆ. ಹನ್ನೊಂದು ದಿನಗಳ ಕಾಲ ಕರಗ ನಡೆಯುತ್ತದೆ. ಈ ಅವಧಿಯಲ್ಲಿ 3 ದಿನಗಳ ಕಾಲ ತಾಯಿ ದ್ರೌಪದಿ ತಮ್ಮೊಡನೆ ಇರುತ್ತಾಳೆ ಎನ್ನುವುದು ತಿಗಳರ ನಂಬಿಕೆ.

ಇದು ಕರಗ ಮಹೋತ್ಸವದ ಕೇಂದ್ರ ಸ್ಥಾನವಾಗಿಯೂ ಗಮನಾರ್ಹ. ಮಧ್ಯರಾತ್ರಿ ಧರ್ಮರಾಯಸ್ವಾಮಿ ದೇವಾಲಯದಿಂದ ಆರಂಭಗೊಳ್ಳುವ ಕರಗ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕಾಟನ್‌ಪೇಟೆಯ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿ ದೇವಾಲಯಕ್ಕೆ ವಾಪಸ್‌ ಆಗುತ್ತದೆ. ಇದು ನಗರ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಸಾಮರಸ್ಯದ ಪ್ರತೀಕ.

ವಹ್ನಿಕುಲದ ಮೂಲ

ಇವರು ತಮಿಳುನಾಡಿನಿಂದ 15ನೇ ಶತಮಾನದಲ್ಲಿ ಮೈಸೂರು ಸಂಸ್ಥಾನಕ್ಕೆ ಬಂದು ನೆಲೆಸಿದ ಜನಾಂಗ. ವಹ್ನಿಕುಲ ಕ್ಷತ್ರಿಯರ ಧೈರ್ಯ ಹಾಗೂ ತೋಟಗಾರಿಕೆಯನ್ನು ಮೆಚ್ಚಿದ ಹೈದರಾಲಿ ಶ್ರೀರಂಗಪಟ್ಟಣದ ಗಂಜಾಂ ಮತ್ತು ಬೆಂಗಳೂರಿನಲ್ಲಿ ಇವರಿಗೆ ಆಶ್ರಯ ನೀಡಿದನೆಂದು ಇತಿಹಾಸ ಹೇಳುತ್ತದೆ. ಈ ಜನಾಂಗ ಬೆಂಗಳೂರು, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲೂ ನೆಲೆಗೊಂಡಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.