ADVERTISEMENT

ರಸ್ತೆ ಗುಡಿಸುತ್ತೇವೆ ದತ್ತು ಕೊಡಿ!

ಶರತ್‌ ಹೆಗ್ಡೆ
Published 17 ಡಿಸೆಂಬರ್ 2019, 19:33 IST
Last Updated 17 ಡಿಸೆಂಬರ್ 2019, 19:33 IST
ಸ್ವಚ್ಛತಾ ಯಂತ್ರ
ಸ್ವಚ್ಛತಾ ಯಂತ್ರ   

ಸ್ವಚ್ಛತೆಗೂ ಒಂದು ಮಾರ್ಕೆಟ್‌ ಬಂತು. ಇದೀಗ ನವೋದ್ಯಮವಾಗಿ ಬೆಳೆಯುವ ಹಂತಕ್ಕೆ ಬಂದಿದೆ. ಇಲ್ಲೊಂದು‘ಐ ಕ್ಲೀನ್‍ ಎಕ್ಸ್‌’ ಎನ್ನುವ ನವೋದ್ಯಮ ಕಂಪನಿ ‘ಸ್ವಚ್ಛತೆಗೊಂದು ಅವಕಾಶ ಕೊಡಿ’ ಎಂದು ಕೇಳುತ್ತಿದೆ.

ಪುಟ್ಟ ತಳ್ಳು ಗಾಡಿಯಂತಿರುವ ಇಂಧನ ಮೂಲ ಬಯಸದ ಮಾನವ ಚಾಲಿತ ಸರಳ ಯಂತ್ರವೊಂದನ್ನು ಈ ಕಂಪನಿ ರೂಪಿಸಿದೆ. ಕನಿಷ್ಠ ನಿರ್ವಹಣಾ ವೆಚ್ಚ ಕೊಡಿ ಅಥವಾ ಯಂತ್ರ ಖರೀದಿಸಿ ನಿಮ್ಮ ಬಡಾವಣೆಯನ್ನು ನಾವು ಸ್ವಚ್ಛಗೊಳಿಸುತ್ತೇವೆ ಎನ್ನುತ್ತಾರೆ ಈ ಕಂಪನಿಯ ಮುಖ್ಯಸ್ಥ ಪ್ರಕಾಶ್‍ ಹೊಸದುರ್ಗ.

ಇತ್ತೀಚೆಗೆ ಬಸವನಗುಡಿಯಲ್ಲಿ ನಡೆದ ಕಡಲೆಕಾಯಿ ಪರಿಷೆಯಲ್ಲಿ ರಾಶಿ ಬಿದ್ದ ಕಸವನ್ನು ಈ ಯಂತ್ರ ನಿಮಿಷಗಳಲ್ಲಿ ಸ್ವಚ್ಛಗೊಳಿಸಿತು. ಪೌರ ಕಾರ್ಮಿಕರಿಗೂ ನಿರಾಳತೆ ನೀಡಿ ಅವರ ಕೆಲಸವನ್ನು ಸರಳಗೊಳಿಸಿತು. ಜನರ, ಖಾಸಗಿ ಸಂಸ್ಥೆಗಳ ಗಮನ ಸೆಳೆದ ಈ ಯಂತ್ರ ದಾವಣಗೆರೆ, ಹುಬ್ಬಳ್ಳಿ ಮಹಾನಗರ ಪಾಲಿಕೆಗಳಿಗೂ ಇಷ್ಟವಾಯಿತು. ಅಲ್ಲಿ ಸ್ವಚ್ಛತೆಗೆ ಬಳಕೆಯಾಗುತ್ತಿದೆ. ಪ್ರಮುಖ ಮಾಲ್‍ಗಳಲ್ಲಿಯೂ ಬಳಕೆಯಾಯಿತು. ಆದರೆ, ರಾಜಧಾನಿಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಸ್ವಯಂ ಸೇವೆಯ ದಾರಿ ಹುಡುಕುತ್ತಿದೆ.

ADVERTISEMENT

ಏನಿದು ರಸ್ತೆ ದತ್ತು?

‘ನಗರದ ಯಾವುದೇ ಬಡಾವಣೆ, ಪ್ರಮುಖ ರಸ್ತೆಯೊಂದನ್ನು ನಮಗೆ ದತ್ತು ಕೊಡಿ. ಪ್ರತಿದಿನ ನಮ್ಮ ಯಂತ್ರದ ನೆರವಿನಿಂದ ನಮ್ಮದೇ ಸಿಬ್ಬಂದಿ ಅಲ್ಲಿನ ಕಸ ಗುಡಿಸಿ ಸ್ವಚ್ಛಗೊಳಿಸುತ್ತಾರೆ. ಬಡಾವಣೆ ನಿವಾಸಿ ಸಂಘಗಳು, ಕಾರ್ಪೊರೇಟ್‍ ಸಂಸ್ಥೆಗಳು ಯಂತ್ರ ಖರೀದಿಸಿದರೂ ಆಗಬಹುದು. ಇಲ್ಲವಾದರೆ ಕನಿಷ್ಠ ನಿರ್ವಹಣಾ ವೆಚ್ಚ ಕೊಟ್ಟರೆ ಸಾಕು. ಹೀಗೆ ಸಾಮೂಹಿಕ ಪಾಲ್ಗೊಳ್ಳುವಿಕೆಯಿಂದ ಪ್ರತಿ ಬಡಾವಣೆಗಳು ಸ್ವಚ್ಛವಾದರೆ ಇಡೀ ನಗರ ಸ್ವಚ್ಛವಾಗುತ್ತದೆ’ ಎನ್ನುತ್ತಾರೆ ಪ್ರಕಾಶ್‍.

‘ಸ್ವಚ್ಛತಾ ಯಂತ್ರ ಬಳಕೆ ಯೋಜನೆಯ ಮುಂದಿನ ಹಂತವಾಗಿ ಬ್ಯಾಟರಿ ಚಾಲಿತ ಕಸ ಗುಡಿಸುವ ವಾಹನವೊಂದನ್ನು ಕಂಪೆನಿ ರೂಪಿಸುತ್ತಿದೆ. ಎಲ್ಲವೂ ಯೋಜನೆಯಂತೆ ನಡೆದರೆ ವಿಪರೀತ ಸಂಚಾರ ದಟ್ಟಣೆಯ ನಡುವೆಯೂ ರಸ್ತೆಯ ಕಸ ಗುಡಿಸಲು ಸಾಧ್ಯ. ಲಘು ಮತ್ತು ಸರಳ ನಿರ್ವಹಣೆಯ ವಾಹನವಿದು’ ಎನ್ನುವುದು ಅವರ ಆಶಯ.

‘ಎಲ್ಲೆಡೆ ಸ್ವಚ್ಛಭಾರತದ ಮಾತು ಕೇಳಿಬರುತ್ತಿದೆ. ಅದನ್ನು ನಾವು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ದೇಶಕ್ಕೇನಾದರೂ ಕೊಡುಗೆ ನೀಡಬೇಕು ಅನಿಸಿತು. ಹೀಗಾಗಿ ಹೊಸ ಯಂತ್ರ ರೂಪಿಸಲು ಮುಂದಾದೆ’ ಎನ್ನುತ್ತಾರೆ ಪ್ರಕಾಶ್‍.

ಸ್ವಚ್ಛತೆಯ ಪರಿಕಲ್ಪನೆಯೊಂದರ ಸಾಕಾರಕ್ಕೆ ಮುಂದಾದ ಅವರು ರಸ್ತೆ ದತ್ತು ಕೇಳಿ ಆಡಳಿತ ವ್ಯವಸ್ಥೆಯ ಬಾಗಿಲು ತಟ್ಟಿದ್ದಾರೆ. ಬಡಾವಣೆಗಳ ನಿವಾಸಿ ಸಂಘಟನೆಗಳನ್ನು ಕೋರಿದ್ದಾರೆ. ಕಾರ್ಪೊರೇಟ್‍ ಸಂಸ್ಥೆಗಳಿಗೂ ಮನವರಿಕೆ ಮಾಡಿದ್ದಾರೆ. ಆದರೆ, ಬಂದ ಪ್ರತಿಕ್ರಿಯೆ ಮಾತ್ರ ನಿರಾಶಾದಾಯಕ ಎನ್ನುವ ಬೇಸರ ಅವರದು.

ಪುಟ್ಟ ಯಂತ್ರವೂ ಬಾಡಿಗೆಗೆ

‘ಕಸಗುಡಿಸುವ ಯಂತ್ರವನ್ನು ಖರೀದಿಸಲು ನಿವಾಸಿ ಸಂಘದವರೂ ಹಿಂದೇಟು ಹಾಕಿದರು. ಅಂಥವರಿಗಾಗಿ ಈ ಯಂತ್ರಗಳನ್ನು ಕನಿಷ್ಠ ದರದಲ್ಲಿ ಬಾಡಿಗೆಗೆ ಕೊಡುತ್ತಿದ್ದೇವೆ. ಕಂತುಗಳಲ್ಲಿ ಖರೀದಿಸುವ ಅವಕಾಶವನ್ನೂ ಕೊಟ್ಟಿದ್ದೇವೆ’ ಎಂದರು ಪ್ರಕಾಶ್‌.

ಪ್ರಕಾಶ್‍ ಓದಿದ್ದು ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್‍. ಮಾಡಿದ್ದು ರಫ್ತು ಉದ್ಯಮ. ಜಗತ್ತು ಸುತ್ತಿದ ಅನುಭವದಲ್ಲಿ ಕಂಡುಕೊಂಡಿದ್ದು ನಮ್ಮ ದೇಶಕ್ಕೆ ಸ್ವಚ್ಛತಾ ಯಂತ್ರದ ಅಗತ್ಯವನ್ನು. ಅದಕ್ಕಾಗಿ ಯೋಜನೆ ಸಿದ್ಧಪಡಿಸಿ ಕಾರ್ಯರೂಪಕ್ಕಿಳಿಸಿದರು. ಈ ಯಂತ್ರದ ಅಗತ್ಯ ಖಂಡಿತ ಇದೆ. ಆದರೆ ಇದಕ್ಕೆ ಮಾರುಕಟ್ಟೆ ರೂಪಿಸುವುದು ಅಷ್ಟೇ ದೊಡ್ಡ ಸವಾಲು ಎನ್ನುವುದು ಅವರ ಸದ್ಯದ ಅನುಭವ.
ಯಂತ್ರ ಹೇಗಿದೆ?

ಮೇಲ್ನೋಟಕ್ಕೆ ನೋಡಿದರೆ ಇದೊಂದು ತಳ್ಳುಗಾಡಿಯಂತೆ ಕಾಣುತ್ತದೆ. ಇಕ್ಕೆಲಗಳಲ್ಲಿ ತಲಾ ಎರಡು, ನಡುವಿನಲ್ಲಿ ಒಂದು ಸೇರಿ ಎರಡು ದೊಡ್ಡ ಗಾತ್ರದ, ಮೂರು ಪುಟ್ಟ ಗಾತ್ರದ ಚಕ್ರಗಳನ್ನು ಹೊಂದಿದೆ. ಮುಂಭಾಗದಲ್ಲಿ ಪೊರಕೆ ಮಾದರಿಯ ಎರಡು, ಯಂತ್ರದ ತಳಭಾಗದಲ್ಲಿ ಒಂದು ಪ್ರಬಲವಾದ ಬ್ರಷ್‍ಗಳಿವೆ (ಬ್ರಿಸೆಲ್ಸ್‍) ಯಂತ್ರವನ್ನು ಸುಮ್ಮನೆ ತಳ್ಳಿಕೊಂಡು ಹೋದರೆ ಸಾಕು ಮೂರು ಬ್ರಷ್‍ಗಳು ತಿರುಗಲು ಶುರುಮಾಡುತ್ತವೆ. ದೂಳು ಸಹಿತ ಸಣ್ಣ, ದೊಡ್ಡ ಗಾತ್ರದ ಎಲ್ಲ ಕಸವನ್ನು ಮೇಲ್ಭಾಗದಲ್ಲಿರುವ ತೊಟ್ಟಿಗೆ ರವಾನಿಸಿ ತುಂಬಿ ಬಿಡುತ್ತವೆ. ಒಮ್ಮೆ ಚಲನೆ ಆರಂಭವಾಯಿತೆಂದರೆ ಸುತ್ತಮುತ್ತ ಐದಾರು ಅಡಿ ವ್ಯಾಪ್ತಿಯ ಪ್ರದೇಶ ಪೂರ್ಣ ಸ್ವಚ್ಛ.

ಯಂತ್ರವನ್ನು ತಳ್ಳುವವರ ಅನುಕೂಲಕ್ಕೆ ತಕ್ಕಂತೆ ಹಿಡಿಕೆಯ ಎತ್ತರ ಹೊಂದಿಸಬಹುದು. ಕಸವನ್ನು ಕೈಯಿಂದ ಮುಟ್ಟಬೇಕಾಗಿಲ್ಲ. ತೊಟ್ಟಿಯಲ್ಲಿ ಸಂಗ್ರಹವಾಗುವ ಕಸವನ್ನು ನೇರವಾಗಿ ಡಂಪರ್‌ ಅಥವಾ ಕಸ ಸಂಗ್ರಹದ ಜಾಗಕ್ಕೆ ತಂದು ಸುರಿಯಬಹುದು. ಸುಮ್ಮನೆ ವಾಕಿಂಗ್‍ ಮಾಡಿದಷ್ಟೇ ದೈಹಿಕ ಶ್ರಮ ಸಾಕು.

ಸಾಮಾನ್ಯ ಕಸ ಗುಡಿಸುವ ಪ್ರಕ್ರಿಯೆಗಿಂತ ಹತ್ತುಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಕೆಲಸ ಮಾಡುತ್ತದೆ. ಲೋಹ ತ್ಯಾಜ್ಯ, ಪ್ಲಾಸ್ಟಿಕ್‍ ತ್ಯಾಜ್ಯ, ಬಾಟಲಿ ಎಲ್ಲವನ್ನೂ ಸಂಗ್ರಹಿಸುವ ವ್ಯವಸ್ಥೆ ಯಂತ್ರದಲ್ಲಿದೆ ಎನ್ನುತ್ತಾರೆ ಪ್ರಕಾಶ್‍.

ಯಾರಿಗೆ ಸೂಕ್ತ?

ಆಯಾ ಕ್ಷೇತ್ರದ ಅಗತ್ಯಕ್ಕನುಗುಣವಾಗಿ ಯಂತ್ರ ಲಭ್ಯವಿದೆ. ಸಣ‍್ಣ, ಮಧ್ಯಮ ಅಥವಾ ಭಾರೀ ಕೈಗಾರಿಕಾ ಸ್ಥಾವರಗಳು, ಅಪಾರ್ಟ್‌ಮೆಂಟ್‍ಗಳು, ಕಲ್ಯಾಣ ಮಂಟಪ, ಮಾಲ್‍ಗಳು, ಗ್ಯಾರೇಜ್‍, ಶಿಕ್ಷಣ ಸಂಸ್ಥೆಗಳು, ಕಾಲೊನಿಗಳು… ಹೀಗೆ ಎಲ್ಲಿ ಬೇಕಾದರೂ ಬಳಸುವ ಮಾದರಿಗಳು ಲಭ್ಯ ಎನ್ನುತ್ತಾರೆ ಪ್ರಕಾಶ್‍.

ಬೆಲೆ: ₹30 ಸಾವಿರ (ಅಪಾರ್ಟ್‌ಮೆಂಟ್‍ಗಳಿಗೆ ರಿಯಾಯಿತಿಯೂ ಇದೆ)
ತಯಾರಕರು: ಟ್ರಿಯಾಂಗಲ್‍ ಇನ್ನೋವೇಷನ್ಸ್ ಪ್ರೈವೇಟ್‍ ಲಿಮಿಟೆಡ್‍ ಬೆಂಗಳೂರು.
ಎಲ್ಲಿ ಲಭ್ಯ?: ಸದ್ಯ ತಯಾರಕರಿಂದ ನೇರ ಮಾರಾಟ
ಮಾಹಿತಿಗೆ ಮೊ. 9900565857

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.