ADVERTISEMENT

ಮತ್ತೆ ಬಂದಳು ವರಮಹಾಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 19:45 IST
Last Updated 8 ಆಗಸ್ಟ್ 2019, 19:45 IST
ಅನೂಪ್ ಆರ್. ತಿಪ್ಪೇಸ್ವಾಮಿ
ಅನೂಪ್ ಆರ್. ತಿಪ್ಪೇಸ್ವಾಮಿ   

ನಾಗರ ಪಂಚಮಿ ನಂತರ ಶ್ರಾವಣ ಮಾಸದ ಎರಡನೇ ಹಬ್ಬವಾದ ವರಮಹಾಲಕ್ಷ್ಮಿ ವ್ರತದ ಆಚರಣೆಯ ಮುನ್ನಾ ದಿನವಾದ ಗುರುವಾರ ನಗರದ ಮಾರುಕಟ್ಟೆಗಳಲ್ಲಿ ಸಡಗರ, ಸಂಭ್ರಮ ಮನೆಮಾಡಿತ್ತು.

ಶುಕ್ರವಾರದ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಹಣ್ಣು, ಹೂವು, ಬಾಳೆ ಕಂಬ ಮತ್ತು ಪೂಜಾ ಸಾಮಗ್ರಿ ಖರೀದಿಸಲು ಜನರು ಮುಂಜಾನೆಯೇ ಮಾರುಕಟ್ಟೆಗಳತ್ತ ಧಾವಿಸಿದರು. ಬಟ್ಟೆ, ಹಣ್ಣು, ತರಕಾರಿ ಹಾಗೂ ದಿನಸಿ ಅಂಗಡಿಗಳು ಗ್ರಾಹಕರಿಂದ ತುಂಬಿದ್ದವು. ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿತ್ತು.

ಹಬ್ಬಕ್ಕಾಗಿ ಹೂ, ಹಣ್ಣುಗಳ ಬೆಲೆ ದುಪ್ಪಟ್ಟಾಗಿವೆ‌.ಬೆಲೆ ಏರಿಕೆ ಬಿಸಿಯ ನಡುವೆಯೂ ನಗರದ ಕೆ.ಆರ್‌. ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ, ಮಲ್ಲೇಶ್ವರ, ಬಸವನಗುಡಿ ಮಾರುಕಟ್ಟೆಗಳುಕಾಲಿಡಲು ಜಾಗ ಇಲ್ಲದಷ್ಟು ಜನರಿಂದ ಗಿಜಿಗುಡುತ್ತಿದ್ದವು. ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂವು, ಹಣ್ಣು, ಬಾಳೆದಿಂಡು, ತೆಂಗಿನಕಾಯಿ ಮಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ADVERTISEMENT

ಹೂವು, ಹಣ್ಣು ಮಾರಾಟಗಾರರು ಹೇಳಿದ್ದೇ ದರ. ಚೌಕಾಶಿಗೆ ಅವಕಾಶವಿಲ್ಲ.‘ಬೇಕಾದರೆ ಕೊಂಡುಕೊಳ್ಳಿ, ಇಲ್ಲವಾದರೆ ಬಿಡಿ. ಮುಂದೆ ಹೋಗಿ, ಬೇರೆ ಗ್ರಾಹಕರಿಗೆ ದಾರಿ ಬಿಡಿ’ ಎಂದು ವರ್ತಕರು ನಿಷ್ಠುರವಾಗಿ ಮುಖಕ್ಕೆ ಹೊಡೆದಂತೆ ಹೇಳಿದರೆ, ಗ್ರಾಹಕರು ಮರುಮಾತಿಲ್ಲದೆ ಖರೀದಿಸುತ್ತಿದ್ದರು.

ಕೆ.ಆರ್‌. ಮಾರುಕಟ್ಟೆ ಮತ್ತು ಯಶವಂತಪುರ ಮಾರುಕಟ್ಟೆಗಳಲ್ಲಿ ಗುರುವಾರ ಬೆಳಗಿನ ಜಾವವೇ ರೈತರು ಮತ್ತು ವರ್ತಕರು ಹಣ್ಣು, ಹೂವು ಮತ್ತು ಬಾಳೆ ಗಿಡಗಳ ರಾಶಿ ಹಾಕಿಕೊಂಡು ನಿಂತಿದ್ದರು. ತುಂತರು ಮಳೆಯಲ್ಲೂ ಗ್ರಾಹಕರು ಖರೀದಿಯಲ್ಲಿ ತೊಡಗಿದ್ದರು. ಮಲ್ಲೇಶ್ವರ ಮತ್ತು ಬಸವನಗುಡಿಯಲ್ಲಿ ಗಂಧಿಗೆ ಅಂಗಡಿಗಳ ಮುಂದೆ ಪೂಜಾ ಸಾಮಗ್ರಿ ಖರೀದಿಸಲು ಜನರ ದಂಡು ನೆರೆದಿತ್ತು. ವರ್ತಕರಿಗೆ ಮಾತನಾಡಲು, ದುಡ್ಡು ತೆಗೆದುಕೊಳ್ಳಲು ಪುರಸೊತ್ತು ಇರಲಿಲ್ಲ.

ತೆಂಗಿನಕಾಯಿ, ಬಾಳೆಹಣ್ಣು, ದಾಳಿಂಬೆ, ಅನಾನಸ್‌, ಸೇಬು, ಮೋಸಂಬಿ, ಪೇರಲ ಹಾಗೂ ಇನ್ನಿತರ ಫಲ, ಪುಷ್ಪಗಳ ಬೆಲೆ ಕೇಳಿಯೇ ಗಾಬರಿಯಾಗಬೇಕು. ಸಾಮಾನ್ಯ ದಿನಗಳಲ್ಲಿ ದೊರೆಯುವ ದರಗಳಿಗಿಂತ ಮೂರ‍್ನಾಲ್ಕು ಪಟ್ಟು ಬೆಲೆಗಳು ಏರಿಕೆಯಾಗಿದ್ದವು.

ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು.ವಾಹನ ಸಂಚಾರ ನಿಯಂತ್ರಸಲು ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.