ADVERTISEMENT

ಸಮುದಾಯ ಪ್ರಜ್ಞೆ ಮೆರೆದ ವೈಯಾಲಿಕಾವಲ್‌ ನಾಗರಿಕರು

ಜನಪ್ರತಿನಿಧಿ, ಅಧಿಕಾರಿಗಳಿಗೆ ಜನರ ಉತ್ತರ * ಎ.ಎನ್‌. ಬ್ಲಾಕ್‌ ನಿವಾಸಿಗಳ ಮಾದರಿ ಕೆಲಸ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 19:46 IST
Last Updated 11 ಸೆಪ್ಟೆಂಬರ್ 2019, 19:46 IST
   

ಒಂಬತ್ತು ವರ್ಷಗಳಿಂದ ಮಣ್ಣು, ಕಸ, ಕಡ್ಡಿ, ಪಾಚಿ ತುಂಬಿ ಗಬ್ಬೆದ್ದು ನಾರುತ್ತಿದ್ದ ವೈಯಾಲಿಕಾವಲ್‌ನ ನೀರಿನ ಟ್ಯಾಂಕ್‌ಅನ್ನು ಸ್ಥಳೀಯರು ಚಂದಾ ಎತ್ತಿ ಸ್ವಚ್ಛಗೊಳಿಸುವ ಮೂಲಕ ಜನಪ್ರತಿನಿಧಿಗಳು ಮತ್ತು ಪಾಲಿಕೆ, ಜಲಮಂಡಳಿಯ ಅಧಿಕಾರಿಗಳ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ.

ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸುವಂತೆ ಹಲವಾರು ತಿಂಗಳಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮಾಡಿಕೊಂಡ ಮನವಿ ಫಲ ನೀಡದಿದ್ದಾಗ ರೋಸಿಹೋದ ಸ್ಥಳೀಯರು ಸ್ವಯಂ ಪ್ರೇರಣೆಯಿಂದ ಅದನ್ನು ಸ್ವಚ್ಛಗೊಳಿಸಲು ಮುಂದಾದರು.

ಪ್ರತಿ ಮನೆಯಿಂದ ನೂರು ರೂಪಾಯಿಯಂತೆ ಚಂದಾ ಎತ್ತಿದರು. ಒಟ್ಟು ₹9 ಸಾವಿರ ರೂಪಾಯಿ ಸಂಗ್ರಹವಾಯಿತು. ಟ್ಯಾಂಕ್‌ ಮತ್ತು ಸಂಪ್‌ ಸ್ವಚ್ಛಗೊಳಿಸುವ ಏಜೆನ್ಸಿ ಸಂಪರ್ಕಿಸಿದರು. ಈ ಕೆಲಸಕ್ಕೆ ಏಜೆನ್ಸಿ ₹14 ಸಾವಿರಕ್ಕೆ ಬೇಡಿಕೆ ಇಟ್ಟಿತು. ‘ಇದು ಸಾರ್ವಜನಿಕರ ಕೆಲಸ. ಅಷ್ಟೊಂದು ದುಡ್ಡು ನಮ್ಮ ಬಳಿ ಇಲ್ಲ. ಇದೊಂದು ಸೇವೆ ಎಂದು ಭಾವಿಸಿ. ನಿಮ್ಮ ಕೆಲಸಕ್ಕೆ ನಾವೂ ಕೈ ಜೋಡಿಸುತ್ತೇವೆ’ ಎಂದು ಸ್ಥಳೀಯರು ದುಂಬಾಲು ಬಿದ್ದರು. ಅವರ ಮನವಿಗೆ ಸ್ಪಂದಿಸಿದ ಏಜೆನ್ಸಿ ಸಿಬ್ಬಂದಿಯು ‘ಆಯ್ತು, ತಿಳಿದಷ್ಟು ಕೊಡಿ’ ಎಂದರು. ಕೊನೆಗೆ ₹5,500 ಪಡೆದರು.

ADVERTISEMENT

ಟೊಂಕಕಟ್ಟಿ ನಿಂತ ಸ್ಥಳೀಯರು

ಮಂಗಳವಾರ ಬೆಳಿಗ್ಗೆ ವೈಯಾಲಿಕಾವಲ್‌ನ 2ನೇ ಮುಖ್ಯರಸ್ತೆಯಲ್ಲಿರುವ ಎ.ಎನ್‌. ಬ್ಲಾಕ್‌ಗೆ ಸಂಪ್ ಸ್ವಚ್ಛಗೊಳಿಸುವ ವಾಹನ ಬಂದು ನಿಂತಿತು. ಆ ಹೊತ್ತಿಗಾಗಲೇ ಎ.ಎನ್‌. ಬ್ಲಾಕ್‌ನ ಮಹಿಳೆಯರು, ಮಕ್ಕಳು, ವೃದ್ಧರ ಆದಿಯಾಗಿ ಎಲ್ಲರೂ ಸ್ವಯಂ ಪ್ರೇರಣೆಯಿಂದ ಟ್ಯಾಂಕ್‌ ಸ್ವಚ್ಛಗೊಳಿಸಲು ಟೊಂಕ ಕಟ್ಟಿ ನಿಂತಿದ್ದರು.

‘ಒಳಗೆ ಇಣುಕಿದರೆ ಸಹಿಸಲು ಅಸಾಧ್ಯವಾದ ಗಬ್ಬು ವಾಸನೆ. ಕಾಲಿಡಲು ಸಾಧ್ಯವಾಗದಷ್ಟು ಕಟ್ಟಿಕೊಂಡಿದ್ದ ಪಾಚಿ. ಮೊಣಕಾಲವರೆಗೆ ಹೂಳು ತುಂಬಿತ್ತು. ಕ್ರಿಮಿ, ಕೀಟಗಳ ಆವಾಸದಂತಿದ್ದ ಟ್ಯಾಂಕ್‌ನಲ್ಲಿದ್ದ ನೀರು ಒಳಚರಂಡಿ ನೀರಿಗಿಂತಲೂ ಗಬ್ಬು ನಾರುತ್ತಿತ್ತು. ಸಹಿಸಲು ಅಸಾಧ್ಯವಾದ ವಾಸನೆಯಿಂದ ವಾಕರಿಕೆ ಬರುತ್ತಿತ್ತು’ ಎಂದು ಸ್ವಚ್ಛತಾ ಶ್ರಮದಾನ ಕಾರ್ಯದಲ್ಲಿ ಭಾಗಿಯಾಗಿದ್ದ ಯುವಕರು ‘ಮೆಟ್ರೊ’ ಜತೆ ಅನುಭವ ಹಂಚಿಕೊಂಡರು.

ನಾಲ್ಕು ತಾಸು ಸ್ವಚ್ಛತೆ

ಟ್ಯಾಂಕ್ ಸ್ವಚ್ಛಗೊಳಿಸಲು ಒಟ್ಟು ನಾಲ್ಕು ತಾಸು ಬೇಕಾಯಿತು. ಮೊದಲು ಪಂಪ್‌ಸೆಟ್‌ನಿಂದ ನೀರು ಹೊರ ಹಾಕಲಾಯಿತು. ನಂತರ ರಾಶಿ, ರಾಶಿ ಮಣ್ಣು, ಅದರಲ್ಲಿದ್ದ ಕಲ್ಲು, ಕೊಳೆತ ಬಟ್ಟೆ ಮತ್ತು ಕಟ್ಟಿಗೆ ತುಂಡು, ಕಬ್ಬಿಣದ ತುಂಡು, ಪ್ಲಾಸ್ಟಿಕ್‌ ಎಲ್ಲವನ್ನೂ ಹೊರ ಹಾಕಲಾಯಿತು. ಇದನ್ನೆಲ್ಲ ನೋಡಿ ಅಲ್ಲಿದ್ದವರಿಗೆಲ್ಲ ಆಶ್ಚರ್ಯ! ‘ಇದು ನಾವು ಬಳಸುತ್ತಿದ್ದ ನೀರಾ!’ ಎಂದು ಬೆರಗಾಗುವಷ್ಟು ಅದು ಕೊಳಕಾಗಿತ್ತು.

‘ಈ ಟ್ಯಾಂಕ್‌ ನಿರ್ಮಾಣ ಮಾಡಿ ಒಂಬತ್ತು ವರ್ಷವಾಗಿದೆ. ಅಂದಿನಿಂದಲೂ ಇದನ್ನು ಸ್ವಚ್ಛಗೊಳಿಸಿರಲಿಲ್ಲ. ಕೊಳಾಯಿಯಲ್ಲಿ ಮಣ್ಣುಮಿಶ್ರಿತ ಗಲೀಜು ನೀರಿನ ಜತೆಗೆ ಕ್ರಿಮಿ, ಕೀಟ, ಹುಳುಗಳು ಬರುತ್ತಿದ್ದವು. ನೀರನ್ನು ಪಾಲಿಕೆ, ಜಲಮಂಡಳಿ, 64ನೇ ವಾರ್ಡ್‌ನ ಪಾಲಿಕೆ ಸದಸ್ಯೆ, ಮಲ್ಲೇಶ್ವರದ ಶಾಸಕರಿಗೆ ತೋರಿಸಲಾಯಿತು. ಅದರಿಂದ ಪ್ರಯೋಜನವಾಗಲಿಲ್ಲ’ ಎಂದು ಎ.ಎನ್‌. ಬ್ಲಾಕ್‌ ನಿವಾಸಿಗಳು ಆಕ್ರೋಶ ಹೊರ ಹಾಕಿದರು.

ರೋಸಿಹೋದ ಜನತೆ

‘ಆಯ್ತು, ನೋಡೋಣ, ಮಾಡೋಣ’ ಎಂದು ಜನಪ್ರತಿನಿಧಿಗಳು ಭರವಸೆ ನೀಡಿ ಸಾಗ ಹಾಕಿದರು. ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಅಧಿಕಾರಿಗಳು ನುಣುಚಿಕೊಂಡರು. ಕಚೇರಿಯಿಂದ ಕಚೇರಿಗೆ ಅಲೆದು ರೋಸಿ ಹೋದ ಸ್ಥಳೀಯರು, ತಾವೇ ಒಟ್ಟಾಗಿಟ್ಯಾಂಕ್‌ ಸ್ವಚ್ಛಗೊಳಿಸುವ ನಿರ್ಧಾರಕ್ಕೆ ಬಂದರು. ಅಭಯ ಸಮಾಜ ಸಂಘದ ಅಧ್ಯಕ್ಷ ಕೃಷ್ಣಯ್ಯ, ಪದಾಧಿಕಾರಿಗಳು ಬೆಂಬಲವಾಗಿ ನಿಂತರು.

ಕಾರ್ಯಾಚರಣೆಯ ಸಂಪೂರ್ಣ ವಿಡಿಯೊ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದು ಸಾಕಷ್ಟು ವೈರಲ್‌ ಆಗಿದೆ. ಇಷ್ಟಾದರೂ ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಇನ್ನೂ ಇತ್ತ ಸುಳಿದಿಲ್ಲ ಎನ್ನುವ ಆಕ್ರೋಶ ಸ್ಥಳೀಯರಲ್ಲಿ ಮಡುಗಟ್ಟಿದೆ.

ಶ್ರಮದಾನದ ಮೂಲಕ ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡಿದ ಆತ್ಮತೃಪ್ತಿ ಇಲ್ಲಿನ ನಿವಾಸಿಗಳಿಗಿದೆ. ರಾಜಕೀಯ ನಾಯಕರು, ಅಧಿಕಾರಿಗಳಿಗಾಗಿ ಕಾಯದೆ, ಜನರು ಮುನ್ನುಗ್ಗಿದರೆ ಏನೆಲ್ಲ ಒಳ್ಳೆಯ ಕೆಲಸ ಮಾಡಬಹುದು ಎಂಬುದನ್ನು ಎ.ಎನ್‌. ಬ್ಲಾಕ್‌ ನಿವಾಸಿಗಳು ಮಾಡಿ ತೋರಿಸಿದ್ದಾರೆ.

‘ಮತ ಕೇಳಲು ಬರುತ್ತಾರೆ, ನಂತರ ನೆಪ ಹೇಳುತ್ತಾರೆ’

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವೈಯಾಲಿಕಾವಲ್‌ ಕ್ಷೇತ್ರವನ್ನು ಉಪ ಮುಖ್ಯಮಂತ್ರಿ ಡಾ. ಅಶ್ವಥ್‌ ನಾರಾಯಣ ಪ್ರತಿನಿಧಿಸುತ್ತಿದ್ದಾರೆ. ಹೇಮಲತಾ ಜಗದೀಶ್‌ ಈ ವಾರ್ಡ್‌ನ ಪಾಲಿಕೆ ಸದಸ್ಯರು.

‘ಚುನಾವಣೆ ಸಮಯದಲ್ಲಿ ಮತ ಕೇಳಲು ಬಂದು ಹೋದವರು ಮತ್ತೆ ಇತ್ತ ಸುಳಿದಿಲ್ಲ. ಟ್ಯಾಂಕ್‌ ಸಮಸ್ಯೆ ಮಾತ್ರವಲ್ಲ, ಇಂತಹ ನೂರಾರು ಜ್ವಲಂತ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಪರಿಹಾರ ಕೋರಿ ಹಲವಾರು ಬಾರಿ ಅಲೆದರೂ ಪ್ರಯೋಜನವಾಗಿಲ್ಲ’ ಎಂದು ಎ.ಎನ್‌. ಬ್ಲಾಕ್‌ ಹಿರಿಯ ನಾಗರಿಕರಾದ ಪದ್ಮಾ ಆಕ್ರೋಶ ಹೊರಹಾಕಿದರು.

‘ಎರಡು ಮೂರು ತಿಂಗಳಿಂದ ಕೊಳಾಯಿ ನೀರಿನಲ್ಲಿ ಹುಳು ಬರುತ್ತಿದ್ದವು. ನೀರು ಬಳಸಿದ ಜನರು ಕಾಯಿಲೆ ಬೀಳುತ್ತಿದ್ದರು. ನಾನೇ ಸ್ವಂತ ಹಣ ಹಾಕಿ ಚಿಕ್ಕಪುಟ್ಟ ದುರಸ್ತಿ ಮಾಡಿದ್ದೆ’ ಎಂದು ಕೊಳಾಯಿ ಕೆಲಸ ಮಾಡುವ ಸುಧಾಕರ್‌ ಹೇಳಿದರು.

‘ಶಾಸಕರು, ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗೆ ಈ ಬಗ್ಗೆ ಹೇಳಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಖುದ್ದಾಗಿ ಜನರಿಂದ ಹಣ ಸಂಗ್ರಹಿಸಿ ಟ್ಯಾಂಕ್‌ ಸ್ವಚ್ಛ ಗೊಳಿಸಲು ಮುಂದಾದೆವು’ ಎಂದು ಅಭಯ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಯ್ಯ ಪರಿಸ್ಥಿತಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.