ADVERTISEMENT

ಇದು ಬರಿಯ ಮಣ್ಣಲ್ಲ, ಡಿಸೆಂಬರ್ 5 'ವಿಶ್ವ ಮಣ್ಣು ದಿನ'

ಸುಬ್ರಹ್ಮಣ್ಯ ಎಚ್.ಎಂ
Published 4 ಡಿಸೆಂಬರ್ 2019, 19:31 IST
Last Updated 4 ಡಿಸೆಂಬರ್ 2019, 19:31 IST
   

ಮಣ್ಣೆಂದರೆ ಬರಿ ಮಣ್ಣಲ್ಲ. ಬರಿಗಣ್ಣಿಗೆ ಕಾಣುವ ಹಾಗೂ ಕಾಣಲಾಗದ ವಿವಿಧ ಬಗೆಯ, ಜೀವಿ-ಜೀವಾಣುಗಳಿಂದ ಕೂಡಿರುವ ಸಜೀವಿ ಮಣ್ಣು. ಬಾಳ್ವೆಗೂ ಮಣ್ಣೊಳಗಿನ ಜೀವ ಜಂತುಗಳಿಗೂ ನೇರ ಸಂಬಂಧವಿದೆ. ಇಂಥ ಮಣ್ಣಿನ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ವರ್ಷ ಡಿಸೆಂಬರ್ 5ರಂದು ಜಗತ್ತಿನಾದ್ಯಂತ ವಿಶ್ವ ಮಣ್ಣು ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಣ್ಣು ಮತ್ತು ಬದುಕು ಕುರಿತ ವಿಶೇಷ ವರದಿ ಇಲ್ಲಿದೆ.

ಮಣ್ಣಿಗೂ ಬದುಕಿಗೂ ಸಂಬಂಧವಿದೆ. ಮಣ್ಣಿಗೂ ಸಂಸ್ಕೃತಿಗೂ ಅನುಬಂಧವಿದೆ. ನಾಗರಿಕತೆ ಉಗಮ ಕೂಡ ನದಿ – ಬಯಲಿನಲ್ಲೇ. ಮಣ್ಣಿಗೂ ಮಾನಸಿಕ ಸ್ವಾಸ್ಥ್ಯಕ್ಕೂ ಸಂಬಂಧವಿದೆ. ಗಭೀರ್ಣಿಯರು ಕೆಮ್ಮಣ್ಣು ತಿನ್ನುವುದರಿಂದ ಆರೋಗಕ್ಕೂ ಪೂರಕವಾಗಿದೆ. ಮಕ್ಕಳು ಮಣ್ಣಿನಲ್ಲಿ ಆಟವಾಡುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಮಣ್ಣು ಮತ್ತು ನೀರು ದಾಂಪತ್ಯ ಗೀತೆ ಇದ್ದಂತೆ. ಮಣ್ಣಿನೊಂದಿಗೆ ಇಷ್ಟೆಲ್ಲ ನಂಟು ಇದ್ದರೂ ಮನುಷ್ಯನ ದುರಾಸೆಗೆ ಮಿತಿಯೇ ಇಲ್ಲ. ಮಣ್ಣು ಬಗೆದು ಅನೇಕ ಅನಾಹುತಗಳಿಗೆ ಹೊಣೆಗಾರನಾಗಿದ್ದಾನೆ.

ಹಸಿ ತ್ಯಾಜ್ಯವನ್ನು ನಗರವಾಸಿಗಳು ತೊಟ್ಟಿಗೆ ಸುರಿಯುತ್ತಾರೆ. ಅದು ವಾಪಸ್ ಭೂಮಿಗೆ ಸೇರುತ್ತದೆ. ಮಣ್ಣಿಗೆ ಸೇರುವ ವಸ್ತುಗಳನ್ನು ಬಳಸದೆ ಇದ್ದಾಗ ಮಾತ್ರ ಮಣ್ಣಿನ ಆರೋಗ್ಯ ಉಳಿಯಲು ಸಾಧ್ಯ. ಜಲ ಸಂರಕ್ಷಣೆಗೂ, ಮಣ್ಣಿಗೂ ಅವಿನಾಭಾವ ನಂಟು. ನಗರಗಳು ಕಾಂಕ್ರೀಟ್‌ ಕಾಡಾಗಿದ್ದು ನೀರು ಇಂಗುತ್ತಿಲ್ಲ. ಪರ್ಯಾಯ ಮಾರ್ಗ ಕಂಡುಕೊಳ್ಳದಿದ್ದರೆ ಭಾರಿ ಬೆಲೆಯೇ ತೆತ್ತಬೇಕಾದೀತು ಎನ್ನುವುದು ಪರಿಸರ ತಜ್ಞರ ಕಳವಳ.

ADVERTISEMENT

ನಗರೀಕರಣ ಬೆಳೆದಂತೆ ಮುಗಿಲೆತ್ತರ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಮಣ್ಣಿನ ಒಡಲು ಬಗೆಯಲಾಗುತ್ತಿದೆ. ಬೆಂಗಳೂರಿನಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನೀರು, ಮಣ್ಣು ಸರಾಗವಾಗಿ ಹರಿಯದಂತೆ ಮನುಷ್ಯ ಕೇಂದ್ರಿತ ವಿಕೋಪ ಸೃಷ್ಟಿಸಲಾಗಿದೆ. ಅಪಾರ ಪ್ಲಾಸ್ಟಿಕ್‌ಯನ್ನು ಮಣ್ಣಿಗೆ ಸುರಿಯಲಾಗುತ್ತಿದೆ. ಇದರಿಂದಾಗಿ ಮಣ್ಣು ಜೀವಸತ್ವ ಕಳೆದುಕೊಳ್ಳುತ್ತಿದೆ. ಕಲುಷಿತ ತ್ಯಾಜ್ಯ ಮಣ್ಣಿನಲ್ಲಿ ಬೆರೆತು ಅನೇಕ ರೋಗಗಳಿಂದ ಪ್ರತಿದಿನ ನಗರವಾಸಿಗಳು ಪರಿತಪಿಸುತ್ತಿದ್ದಾರೆ. ಮಣ್ಣಿನ ಪರಿಮಳಕ್ಕೂ ಆರೋಗ್ಯಕ್ಕೂ ಸಂಬಂಧವಿದೆ. ಮಣ್ಣಿನ ಪರಿಮಳ ಸಿಗದೆ ಅದು ಘಾಟು ಆಗಿ ಪರಿವರ್ತನೆಗೊಂಡಿದೆ. ಇದರಿಂದ ನಗರದ ಮಕ್ಕಳಿಗೆ ಅಲರ್ಜಿ, ತುರಿಕೆಯಂತಹ ಸಮಸ್ಯೆಗಳಿಗೂ ಕಾರಣವಾಗಿದೆ ಎಂದು ವೈದ್ಯರು ಹೇಳುತ್ತಾರೆ.

ಆಹಾರ ಪೌಷ್ಟಿಕವಾಗಿ ಇರಬೇಕಾದರೆ ಮಣ್ಣಿನಲ್ಲಿ ಸತ್ವ ಇರಬೇಕು. ಮಣ್ಣು ಮಕ್ಕಳಂತೆ. ನಾವು ಕೊಟ್ಟಿದ್ದನ್ನು ತಿನ್ನುತ್ತದೆ. ಬೆಳೆಸಿದಂತೆ ಬೆಳೆಯುತ್ತದೆ. ಬಿತ್ತಿದಂತೆ ಬೆಳೆ. ಜಗತ್ತಿನಲ್ಲಿ 3ಲಕ್ಷ ಬಗೆಯ ಮಣ್ಣಿನ ವಿಧಗಳಿವೆ. ಇದರಲ್ಲಿ ಸಾವಿರಾರು ರೀತಿಯ ಬ್ಯಾಕ್ಟೀರಿಯಾಗಳಿವೆ. ಲಕ್ಷಾಂತರ ಬಗೆಯ ಫಂಗಿಗಳಿವೆ. ಸಹಸ್ರಾರು ಜಾತಿ‌ಯ ಕೀಟಗಳಿವೆ. ಮಣ್ಣಿನಲ್ಲಿ ಇರುವ ಜೀವಸತ್ವ ಸಂರಕ್ಷಣೆ ಮಾಡಿದರೆ ಅನೇಕ ಬಿಕ್ಕಟ್ಟುಗಳಿಗೆ ಪರಿಹಾರ ಸಿಗಲಿದೆ ಎನ್ನುವುದು ತಜ್ಞರ ಕಿವಿಮಾತು.

ಬೆಂಗಳೂರಿನಲ್ಲಿ ಹಲವು ರೀತಿಯ ಕೆರೆಗಳಿದ್ದವು. ಅವೆಲ್ಲವೂ ಒತ್ತುವರಿಯಾದ ಮೇಲೆ ಮಣ್ಣು ನಾಶವಾಗಿದೆ. ನಗರ ಹೊರವಲಯದಲ್ಲಿರುವ ಕೆರೆದಂಡೆ ಪ್ರದೇಶಗಳು ಇಟ್ಟಿಗೆ ಕಾರ್ಖಾನೆಗಳಾಗಿ ಬೆಳೆದಿವೆ. ‘ನಮ್ಮಲ್ಲಿ ನೀರಿಗೆ, ರಸಗೊಬ್ಬರಕ್ಕೆ, ಕೃಷಿಗೆ, ರೇಷ್ಮೆಗೆ, ತೋಟಗಾರಿಕೆಗೆ, ಅರಣ್ಯಕ್ಕೆ, ಪಶುಸಂಗೋಪನೆ ಸೇರಿದಂತೆ ಎಲ್ಲದಕ್ಕೂ ಮಂತ್ರಿಗಳಿದ್ದಾರೆ. ಹತ್ತು ಹಲವು ಇಲಾಖೆಗಳಿವೆ. ಆದರೆ, ಇಡೀ ಜೀವಸಂಕುಲಕ್ಕೆ ಮೂಲವಾದ ಮಣ್ಣಿಗೆ ಯಾವುದೇ ಮಂತ್ರಿ ಇಲ್ಲ, ಇಲಾಖೆ ಇಲ್ಲ. ಸಂರಕ್ಷಣೆಗೆ ಯಾವುದೇ ಕಾಯ್ದೆ ಇಲ್ಲ. ಸರ್ಕಾರದಿಂದ ಅಧಿಸೂಚನೆ ಇಲ್ಲ. ಅಗತ್ಯ ಕಾನೂನು ಕೂಡಲೇ ಜಾರಿಗೊಳಿಸಬೇಕು’ ಎನ್ನುತ್ತಾರೆ ಸಾಯಿಲ್ ಟ್ರ‌ಸ್ಟ್‌ನ ಶ್ರೀನಿವಾಸ್‌. (ಸಾಯಿಲ್ ವಾಸು)

ನಗರವಾಸಿಗಳ ಆದ್ಯತೆ ಹೀಗಿರಲಿ

* ಮಣ್ಣಿಗೆ ಹಾಕುವ ವಸ್ತುಗಳ ಬಳಕೆ ಮಾಡದಿರಿ

* ಕೊಳ್ಳುಬಾಕ ಸಂಸ್ಕೃತಿ ತಿರಸ್ಕರಿಸಿ

* ಮಡಿಕೆಯಂತಹ ವಸ್ತುಗಳನ್ನೇ ಬಳಸಿ

* ತ್ಯಾಜ್ಯ ಬೇರ್ಪಡಿಸಿ ಸದ್ಬಳಕೆ ಮಾಡಿಕೊಳ್ಳಿ

* ಮಣ್ಣಿಗೆ ಎಷ್ಟು ಸಾಧ್ಯವೋ ಅಷ್ಟು ಸಾವಯವ ವಸ್ತು ಬೆರೆಸಿ

* ಮಣ್ಣು ಬಿರುಬಿಸಿಲಿಗೆ ಬೇಯದಂತೆ, ಗಾಳಿಗೆ ಚದುರದಂತೆ, ಮಳೆಗೆ
ಮುಕ್ಕಾಗದಂತೆ ಹೊದಿಕೆ ನಿರ್ಮಾಣ ಮಾಡಿ

* ಎಷ್ಟು ಸಾಧ್ಯವೋ ಅಷ್ಟು ಮಣ್ಣಲ್ಲಿ ತೇವಾಂಶ ಕಾಪಾಡಿ

ಮಣ್ಣು ಎಂದರೆ ಅದು ನಾಗರಿಕರಿಗೂ ಸಂಬಂಧಿಸಿದ್ದು

ಮಣ್ಣು ಎಂದರೆ ಕೃಷಿಕರಿಗೆ, ಹಳ್ಳಿಗರಿಗೆ, ಕುಂಬಾರಿಕೆಗಷ್ಟೇ ಸಂಬಂಧಿಸಿದ್ದಲ್ಲ. ಅದು ನಗರದ ನಾಗರಿಕರಿಗೂ ಸಂಬಂಧಿಸಿದ್ದು.ನಮ್ಮನ್ನೂ ಒಳಗೊಂಡಂತೆ ಮಣ್ಣ ಮೇಲಿನ ಸಕಲ ಜೀವಮಂಡಲದ ಬದುಕು, ಬಾಳುವೆಗೂ ಮಣ್ಣೊಳಗಿನ ಜೀವಜಂತುಗಳಿಗೂ ನೇರ ಸಂಬಂಧವಿದೆ. ಇದನ್ನು ಹೀಗೆ ಅರ್ಥಮಾಡಿಕೊಳ್ಳಬಹುದು. ನಮ್ಮ ಆರೋಗ್ಯ ಚೆನ್ನಾಗಿರಬೇಕೆಂದರೆ, ನಮ್ಮ ಶರೀರದ ಸಕಲ ಭಾಗಗಳೂ ಸರಿಯಾಗಿ ಕೆಲಸ ಮಾಡಬೇಕು. ಹಾಗೆ ಕೆಲಸ ಮಾಡಲು ಅವುಗಳಿಗೆ ವಿವಿಧ ಬಗೆಯ ಪೌಷ್ಟಿಕಾಂಶ ಪೂರೈಕೆಯಾಗಬೇಕು. ಈ ಶಾರೀರಿಕ ಪೌಷ್ಟಿಕಾಂಶ ನಮಗೆ ಸಿಗುವುದೇ ನಾವು ತಿನ್ನುವ ಆಹಾರದಿಂದ.

ನಮ್ಮ ಆಹಾರದ ಮೂಲ ಗಿಡಗಳು. ಅಲ್ಲಿಗೆ ಗಿಡಗಳಲ್ಲೂ ಆ ವಿವಿಧ ಬಗೆಯ ಪೌಷ್ಟಿಕಾಂಶ ಇರಬೇಕೆಂದಾಯಿತು. ಇದನ್ನೇ ನಾವು ಗಿಡಗಳಿಗೆ ಒದಗಿಸುವ ಪೋಷಕಾಂಶ ಎನ್ನುತ್ತೇವೆ.

ಗಿಡಗಳ ವಿವಿಧ ಭಾಗಗಳು ಆರೋಗ್ಯವಾಗಿ ಬೆಳೆಯಲು ಅವುಗಳಿಗೆ ವಿವಿಧ ಬಗೆಯ ಪೋಷಕಾಂಶಗಳು ಬೇಕು. ಗಿಡಗಳಿಗೆ ಈ ಬಗೆಯ ವಿವಿಧ ರೂಪದ ಪೋಷಕಾಂಶಗಳು ಪೂರೈಕೆಯಾಗುವುದೇ ಮಣ್ಣಿಂದ. ಅಂದರೆ ಮಣ್ಣಲ್ಲೂ ಸಹ ಆ ವಿವಿಧ ಬಗೆಯ ಪೋಷಕಾಂಶಗಳು ಇರಬೇಕಲ್ಲವೆ. ಮಣ್ಣಲ್ಲಿ ಈ ಬಗೆಯ ಪೋಷಕಾಂಶಗಳು ಸೃಷ್ಟಿಯಾಗುವುದು ನಾವು ಮಣ್ಣಿಗೆ ಒದಗಿಸುವ ಸಾವಯವ ಗೊಬ್ಬರಗಳಿಂದ.

ಹಾಗೆಂದಾಕ್ಷಣ ಮಣ್ಣಿಗೆ ಗೊಬ್ಬರವನ್ನು ಕೊಟ್ಟ ಕೂಡಲೇ ಗಿಡದ ಬೇರುಗಳು ಗೊಬ್ಬರವನ್ನು ಗಬಗಬನೆ ತಿನ್ನುವುದಿಲ್ಲ. ಗಿಡದ ಬೇರುಗಳು ಈ ಗೊಬ್ಬರವನ್ನು ಹೀರುವ ಸ್ಥಿತಿಯಲ್ಲೂ ಗೊಬ್ಬರಗಳಿರುವುದಿಲ್ಲ. ಈ ಗೊಬ್ಬರವು ಪೋಷಕಾಂಶವಾಗಿ ಪರಿವರ್ತನೆಯಾಗಬೇಕು. ಮಣ್ಣಲ್ಲಿ ಈ ಪರಿವರ್ತನಾ ಕೆಲಸವನ್ನು ಮಾಡುವವರೇ ಮಣ್ಣೊಳಗಿನ ಮಹಾನುಜೀವಿಗಳು!

ಈ ಜೀವಿಗಳು ಗೊಬ್ಬರವನ್ನು ಪೋಷಕಾಂಶವಾಗಿ ಪರಿವರ್ತನೆ ಮಾಡದಿದ್ದರೆ, ಗಿಡಗಳಿಗೆ ಅವುಗಳು ಸಿಗುವುದಿಲ್ಲ. ಗಿಡಗಳಿಗೆ ಸಿಕ್ಕದಿದ್ದಲ್ಲಿ ಆಹಾರೋತ್ಪಾದನೆ ಆಗುವುದಿಲ್ಲ. ಆಹಾರವಿಲ್ಲದೆ ನಾವು ಬದುಕಲಾಗುವುದಿಲ್ಲ. ನಮ್ಮ ಆರೋಗ್ಯಕ್ಕೂ ಮಣ್ಣೊಳಗಿನ ಜೀವಜಂತುಗಳಿಗೂ ಹೀಗೆ ಸಂಬಂಧವಿದೆ.

ಇಂಥ ಮಣ್ಣೊಳಗಿನ ಜೀವಮಂಡಲದ ರಕ್ಷಣೆ - ಪಾಲನೆ - ಪೋಷಣೆ - ನಿರ್ವಹಣೆ ನಮ್ಮೆಲ್ಲರ ಹೊಣೆಯಾಗಿದೆ. ಈ ಮಣ್ಣು ಜೀವಿಗಳನ್ನು ಸಂರಕ್ಷಿಸಿ - ಉಳಿಸಿ - ಬೆಳೆಸಿ ‘ಮಣ್ಣು ಜೀವಿಗಳ ಸಂತತಿ ಸಾವಿರವಾಗಲಿ‘ ಎನ್ನುವತ್ತ ಕೆಲಸ ಮಾಡಬೇಕು ಎನ್ನುತ್ತಾರೆ ಮಣ್ಣಿನ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸಾಯಿಲ್ ಟ್ರಸ್ಟ್‌ನ ಮುಖ್ಯಸ್ಥ ಶ್ರೀನಿವಾಸು.

ನಗರದಲ್ಲಿ ಮಣ್ಣಿನ ಸಂರಕ್ಷಣೆ ಮಾಡಬೇಕೆಂದರೆ, ಮಣ್ಣಿಗೆ ಪ್ಲಾಸ್ಟಿಕ್‌ನಂತಹ ತ್ಯಾಜ್ಯ ಸೇರದಂತೆ, ಕೈಗಾರಿಕಾ ತ್ಯಾಜ್ಯಗಳು ಮಣ್ಣಲ್ಲಿ ಬೆರೆಯದಂತೆ ಮಾಡಬೇಕು. ಮಣ್ಣುಜೀವಿಗಳ ರಕ್ಷಣೆಯೇ ನಮ್ಮ ಗುರಿಯಾಗಿದ್ದಲ್ಲಿ, ನಾವು ಇಷ್ಟು ಮಾಡಿದರೆ ಸಾಕು.

ಈ ಎಲ್ಲ ಅಂಶಗಳನ್ನು ಅರಿತುಕೊಂಡು ಬೇರೆಯವರಿಗೂ ತಿಳಿಸುತ್ತಾ, ವಿಶ್ವ ಮಣ್ಣು ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಇದನ್ನು ಮಣ್ಣು ದಿನ ಎನ್ನುವುದಕ್ಕಿಂತ ’ಸಜೀವಿ ಮಣ್ಣು ದಿನ’ ಎಂದು ಆಚರಿಸುವುದು ಅರ್ಥಪೂರ್ಣ.

ಮಕ್ಕಳಿಗೆ ಮಣ್ಣಿನ ಮಹತ್ವ

ಶಾಲಾ ಹಂತದಿಂದಲೇ ಮಕ್ಕಳಿಗೆ ಮಣ್ಣಿನ ಮಹತ್ವ ಹೇಳುವ ಕೆಲಸ ಆರಂಭವಾಗಬೇಕು. ಹೇಗೆ ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಟಿಪ್ಸ್‌...

* ನಗರದ ಮಕ್ಕಳಿಗೆ ಮಣ್ಣನ್ನು ಕೈಯಿಂದ ಮುಟ್ಟಿಸಿ. ದೂಳು ಮಾಡಿಕೊಳ್ಳುವುದನ್ನು ಕಲಿಸಬೇಕು. ಹೀಗೆಂದಾಗ, ನಗರದಲ್ಲಿ ಅಂಥ ಶುದ್ಧ ಮಣ್ಣು ಎಲ್ಲಿದೆ’ ಎಂಬ ಪ್ರಶ್ನೆ ಮೂಡುತ್ತದೆ. ಹಾಗಾಗಿ, ಮೊದಲು ಮಣ್ಣನ್ನು ಹೇಗೆ ಶುದ್ಧವಾಗಿಟ್ಟುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಬೇಕು.

* ಹಲವು ಬಣ್ಣದ ಮಣ್ಣುಗಳಿವೆ. ವಿವಿಧ ಗುಣಗಳಿರುವ ಮಣ್ಣುಗಳಿವೆ. ಈ ವೈವಿಧ್ಯವನ್ನು ಮಕ್ಕಳಿಗೆ ಪರಿಚಯಿಸಲು ಮಕ್ಕಳಿಗೆ ಬಣ್ಣ ಬಣ್ಣದ ಮಣ್ಣನ್ನು ತರಲು ಸೂಚಿಸಿ. ಬಣ್ಣದ ಮಣ್ಣುಗಳ ಪ್ರದರ್ಶನ ಏರ್ಪಡಿಸಿ, ಮಣ್ಣು ತಜ್ಞರಿಂದ ವಿವರಣೆ ಕೊಡಿಸಿ. ಪ್ರೌಢಶಾಲಾ ವಿದ್ಯಾರ್ಥಿಗಳಿಗಾದರೆ, ಅವರ ವಿಜ್ಞಾನ ಪಠ್ಯವನ್ನೂ ಈ ಪ್ರದರ್ಶನದಲ್ಲಿ ಬಳಸಿಕೊಳ್ಳಿ.

* ಮಣ್ಣಿನಲ್ಲಿ ಆಡುವುದು ಅಲರ್ಜಿಯಲ್ಲ ಎನ್ನುವುದನ್ನು ತಿಳಿದುಕೊಳ್ಳಿ. ಮಕ್ಕಳಿಗೂ ತಿಳಿಹೇಳಿ. ಆರೋಗ್ಯ ಪೂರ್ಣ ಮಣ್ಣಿನಲ್ಲಿರುವ ಅನೇಕ ಬ್ಯಾಕ್ಟೀರಿಯಾಗಳು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ತುಂಬುತ್ತವೆ.

*ಮಕ್ಕಳಿಗೆ ಕೈತೋಟದಲ್ಲಿ ಸೊಪ್ಪು, ತರಕಾರಿ ಬೆಳೆಸುವುದನ್ನು ಕಲಿಸಿ. ಆಗ, ತರಕಾರಿ ಬೆಳವಣಿಗೆಯನ್ನು ನೋಡುತ್ತಲೇ, ಮಣ್ಣಿನ ಆರೋಗ್ಯದ ಬಗ್ಗೆಯೂ ತಿಳಿದುಕೊಳ್ಳುತ್ತಾರೆ. ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಬಗ್ಗೆ ತಿಳಿವಳಿಕೆ ನೀಡಿ. ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಬೆಳೆಯುವ ಬೆಳೆಯನ್ನು ಕುತೂಹಲದಿಂದ ನೋಡುತ್ತಾ, ಮಣ್ಣಿನೊಂದಿಗೆ ಮಕ್ಕಳು ಬಾಂಧವ್ಯ ಬೆಳೆಸಿಕೊಳ್ಳುತ್ತಾರೆ. ನೆನಪಿಡಿ: ಆರೋಗ್ಯಪೂರ್ಣ ಮಣ್ಣಿನ ದೂಳಿನಲ್ಲಿರುವ ಬ್ಯಾಕ್ಟೀರಿಯಾ ನಮಗೆ ನಿರೋಧಕ ಶಕ್ತಿ ಕೊಡುತ್ತದೆ.

* ತರಹೇವಾರಿ ಮಣ್ಣನ್ನು ಕುಟ್ಟಿ, ಪುಡಿ ಮಾಡಿ ಪೌಡರ್ ಮಾಡಿ, ಜರಡಿ ಹಿಡಿದರೆ, ನಯವಾದ ಮಣ್ಣು ಬರುತ್ತದೆ. ಆ ಮಣ್ಣಿಗೆ ಅಂಟು (ಗಮ್) ಮತ್ತು ನೀರು ಹಾಕಿ ಕಲಸಿದರೆ, ಸ್ವಾಭಾವಿಕ ಬಣ್ಣ ಸಿದ್ಧವಾಗುತ್ತದೆ. ಅದರಿಂದಲೇ ಮಕ್ಕಳಿಂದ ಚಿತ್ರ ಬರೆಸಿ. ಸಾಧ್ಯವಾದರೆ ‘ಚಿತ್ರಕಲಾ ಸ್ಪರ್ಧೆ’ಯನ್ನು ಏರ್ಪಡಿಸಬಹುದು.

ವಿಶ್ವ ಮಣ್ಣು ದಿನ ಆಚರಣೆ ಹಿನ್ನೆಲೆ

ಇಷ್ಟಕ್ಕೂ ಪ್ರತೀ ವರ್ಷ ಡಿಸೆಂಬರ್ 05ರಂದೇ ಏಕೆ ’ವಿಶ್ವ ಮಣ್ಣು ದಿನ’ದ ಆಚರಣೆ ? ಇದಕ್ಕೊಂದು ಸ್ವಾರಸ್ಯಕರ ಹಿನ್ನೆಲೆ ಇದೆ. ಮಣ್ಣಿನ ಅಧ್ಯಯನವನ್ನೇ ಜೀವನದ ದೀಕ್ಷೆ ಎಂಬಂತೆ ಸ್ವೀಕರಿಸಿದ ಸಾವಿರಾರು ಮಣ್ಣು ವಿಜ್ಞಾನಿಗಳು 1927ರಲ್ಲೇ ಜಾಗತಿಕ ಮಟ್ಟದಲ್ಲಿ ’ಮಣ್ಣು ವಿಜ್ಞಾನಿಗಳ ಅಂತರಾಷ್ಟ್ರೀಯ ಒಕ್ಕೂಟ’ ವನ್ನು ರಚಿಸಿದರು. ನಾನಾ ದೇಶಗಳಿಗೆ ಸೇರಿದ ಈ ವಿಜ್ಞಾನಿಗಳು 2002ರ ಡಿಸೆಂಬರ್ 05 ರಂದು ಮೊದಲ ’ಮಣ್ಣು ದಿನ’ವನ್ನು ಆಚರಿಸಿದರು.

ಜಗತ್ತಿನ ಭತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದ ಥಾಯ್ಲೆಂಡ್ ದೇಶದಲ್ಲಿ ಭಾರತೀಯ ಸಂಸ್ಕೃತಿಯ ಛಾಯೆ ದಟ್ಟವಾಗಿದೆ. ಅಲ್ಲಿನ ರಾಜನ ಹೆಸರು ಭೂಮಿಬಲ ಅತುಲ್ಯತೇಜ. ಅವರಿಗೆ ’9ನೇ ರಾಮ’ ಎಂಬ ಉಪಾಧಿಯೂ ಇದೆ. 1946ರಂದು ಪಟ್ಟಕ್ಕೆ ಬಂದ ಈ ರಾಜ ಜಗತ್ತಿನ ಅತೀ ದೀರ್ಘಕಾಲದ ರಾಜ್ಯಾಡಳಿತ ನಡೆಸಿದವರೆಂದು ಹೆಗ್ಗಳಿಕೆ ಕೂಡಾ ಪಡೆದಿದ್ದಾರೆ.

ವಿಶೇಷವೆಂದರೆ ಮಣ್ಣಿನ ಆರೋಗ್ಯದ ಬಗ್ಗೆ ಸಾಕಷ್ಟು ಆಸಕ್ತಿ ಮತ್ತು ಪರಿಣತಿ ಬೆಳೆಸಿಕೊಂಡ ಇವರು ಕೃಷಿಭೂಮಿಯ ಸುತ್ತಾ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಸ್ ಹುಲ್ಲು ಬೆಳೆಸುವಂತ ಮಾದರಿ ಪ್ರಯೋಗಗಳನ್ನು ನಡೆಸಿದವರು.ತಮ್ಮ ದೇಶದ ರಾಜಧಾನಿ ಬ್ಯಾಂಕಾಕ್ ನಲ್ಲಿ ಮಣ್ಣು ವಿಜ್ಞಾನಿಗಳ ಜಾಗತಿಕ ಸಮಾವೇಶಕ್ಕೆ ಅನುವು ಮಾಡಿಕೊಟ್ಟ ಈ ರಾಜನ ಜನ್ಮದಿನದ ನೆನಪಿಗಾಗಿ ಡಿಸೆಂಬರ್ 05ನ್ನು ’ಮಣ್ಣು ದಿನ’ ವೆಂದು ಆಚರಿಸಲು ನಿರ್ಧರಿಸಲಾಗಿದೆ.

ಇದೀಗ ವಿಶ್ವಸಂಸ್ಥೆಯೂ ಈ ’ಮಣ್ಣು ದಿನ’ ಕ್ಕೆ ಮಾನ್ಯತೆ ನೀಡಿ, ಎಲ್ಲಾ ರಾಷ್ಟ್ರಗಳೂ ಇದನ್ನು ಜನಜಾಗೃತಿಯ ದಿನವಾಗಿ ಆಚರಿಸಬೇಕೆಂದು ಕರೆನೀಡಿದೆ.

(ಮೂಲ: ನಾಗೇಶ ಹೆಗಡೆಯವರ "ಮಣ್ಣು - ಅದೇ ಅಸಲೀ ಹೊನ್ನು" ಪುಸ್ತಕದಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.