ADVERTISEMENT

ಶ್ರೀಮಂತ ಪರ, ಬಡ ವಿರೋಧಿ ನೀತಿ ಜಾರಿ ಮೂಲಕ ಮೋದಿ ದೇಶ ಇಬ್ಭಾಗ ಮಾಡಿದ್ದಾರೆ-ರಾಹುಲ್

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 9:11 IST
Last Updated 31 ಮಾರ್ಚ್ 2019, 9:11 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಅಂಧ್ರಪ್ರದೇಶ:ಒಂದೆಡೆ ಅನಿಲ್ ಅಂಬಾನಿ, ನೀರವ್ ಮೋದಿಯಂತಹ ಶ್ರೀಮಂತರನ್ನು ರಕ್ಷಿಸಿ ದೇಶವನ್ನುಕೊಳ್ಳೆ ಹೊಡುವಂತೆ ನೋಡಿಕೊಳ್ಳುವುದು, ಮತ್ತೊಂದು ಕಡೆ ರೈತ, ದಲಿತ, ಅಲ್ಪಸಂಖ್ಯಾತ, ಅರಣ್ಯವಾಸಿಗಳ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸುವ ಮೂಲಕ ದೇಶವನ್ನು ಇಬ್ಭಾಗ ಮಾಡುವುದೇ ನರೇಂದ್ರ ಮೋದಿಯ ರಾಜಕೀಯ ತಂತ್ರಗಾರಿಕೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಮೋದಿಯವರ ಅಂತಿಮ ಗುರಿ ಈ ದೇಶವನ್ನು ನಾಶ ಮಾಡುವುದೇ ಆಗಿದೆ.ಈ ದೇಶದಲ್ಲಿ ಕೊಲೆ, ಅತ್ಯಾಚಾರ ನಡೆದರೂ ಮೌನವಹಿಸುವ ಮೋದಿಯವರೇ ರೈತರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಅರಣ್ಯವಾಸಿಗಳಿಗೂ ನೆಮ್ಮದಿಜೀವನ ನಡೆಸುವ ಹಕ್ಕಿದೆ. ಇವರಿಗೆ ಯಾವುದೇ ಅನ್ಯಾಯವಾದರೂ ಕಾಂಗ್ರೆಸ್ ರಕ್ಷಣೆಗೆ ನಿಲ್ಲುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಆಂಧ್ರದ ವಿಜಯವಾಡದಲ್ಲಿ ಶನಿವಾರ ಚುನಾವಣಾ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ವ್ಯಾಪಾರ ಆರಂಭಿಸುವ ಯಾರೇ ಆಗಲಿ ಮೂರು ವರ್ಷದ ತನಕ ಸರ್ಕಾರಗಳು ಯಾವುದೇ ಪರವಾನಗಿ ಕೇಳುವಂತಿಲ್ಲ. ಮೂರು ವರ್ಷದ ನಂತರ ಪರವಾನಗಿ ಪಡೆದುಕೊಳ್ಳಬೇಕುಎಂಬ ನೀತಿಯನ್ನು ಜಾರಿಗೆ ತಂದು ಆ ಮೂಲಕ ಈ ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವುದಾಗಿ ರಾಹುಲ್ ಪ್ರಕಟಿಸಿದರು.

ADVERTISEMENT

ಮನಮೋಹನ್ ಸಿಂಗ್ ನೇತೃತ್ವದಲ್ಲಿ ಜಾರಿಗೆ ತಂದಿದ್ದ ಆಹಾರ ಭದ್ರತೆ, ಮನ್ರೇಗಾ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಛಿದ್ರಗೊಳಿಸುವ ಮೂಲಕ ಬಡವರಿಗೆ, ರೈತರಿಗೆ, ಹಿಂದುಳಿದವರಿಗೆ ನರೇಂದ್ರ ಮೋದಿಯವರು ಅನ್ಯಾಯ ಎಸಗಿದ್ದಾರೆ ಎಂದು ದೂರಿದರು.

ರಫೇಲ್ ಹಗರಣದಲ್ಲಿ ಅನಿಲ್ ಅಂಬಾನಿಗೆ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಟ್ಟ ಮೋದಿ, ಮತ್ತೊಂದೆಡೆ ರೈತರ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕುತ್ತಾರೆ. 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಮಾಡಿ ಇಡೀ ದೇಶದಲ್ಲಿಯೇ ಬಡವರು ಬ್ಯಾಂಕುಗಳ ಮುಂದೆ ದಿನವಿಡೀ ನಿಂತುಕೊಳ್ಳುವಂತೆ ಮಾಡಿದರು. ಆ ಮೂಲಕ ದೇಶದ ಅರ್ಥವ್ಯವಸ್ಥೆಯನ್ನೇ ಹಾಳು ಮಾಡಿಬಿಟ್ಟರು. ನೋಟುರದ್ಧತಿ ನಂತರ ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್‌ಟಿ)ಜಾರಿಗೆ ತಂದು ಚಿಕ್ಕ ಚಿಕ್ಕ ವ್ಯಾಪಾರಿಗಳ ನಾಶಕ್ಕೆ ಕಾರಣರಾದರು ಎಂದು ತೀವ್ರ ವಾಗ್ದಾಳಿ ನಡೆಸಿದರು.

ವಿಜಯಮಲ್ಯ ಈ ದೇಶದಿಂದ ಪರಾರಿಯಾಗುವ ಮೊದಲು ಅರ್ಥ ಸಚಿವ ಅರುಣ್ ಜೈಟ್ಲಿಗೆ ಹೇಳಿಯೇ ಹೋಗಿದ್ದಾರೆ. ಅಂತಹವರು ತಪ್ಪಿಸಿಕೊಂಡು ಹೋಗಲು ಮೋದಿ ಸರ್ಕಾರವೇ ಸಹಕಾರ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೋದಿಯಂತೆ ಸುಳ್ಳು ಹೇಳುವುದಿಲ್ಲ

ನಾನು ಮೋದಿಯಂತೆ ಸುಳ್ಳು ಹೇಳುವುದಿಲ್ಲ. ಯಾವ ಜಾತಿಯಾಗಲಿ, ಯಾವ ಧರ್ಮವಾಗಲಿ ಎಲ್ಲಾ ಜಾತಿಯ ಎಲ್ಲಾ ಧರ್ಮದ ಬಡವರಿಗೆ ತಿಂಗಳಿಗೆ 6 ಸಾವಿರ ರೂಪಾಯಿ ನೀಡುತ್ತೇವೆ. ಇದರ ಮೊತ್ತವರ್ಷಕ್ಕೆ 72 ಸಾವಿರರೂಪಾಯಿ ಮತ್ತು5 ವರ್ಷಕ್ಕೆ 3,60,000 ಸಾವಿರ ರೂಪಾಯಿಯಾಗುತ್ತದೆ. ಇಷ್ಟು ಹಣವನ್ನು ಮಾತ್ರಯಾವುದೇ ಸರ್ಕಾರವಾಗಲೀ ಬಡವರಿಗೆ ನೀಡಲು ಸಾಧ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರೈತರ ಸಾಲ ಮನ್ನಾ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡೇ ದಿನಗಳಲ್ಲಿ ಅಲ್ಲಿನ ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ, ಮೋದಿ ಮಾತ್ರ ರೈತರ ಒಂದು ನಯಾಪೈಸೆಯನ್ನೂ ಮನ್ನಾ ಮಾಡಲಿಲ್ಲ. ಕೇವಲ ಸುಳ್ಳು ಹೇಳಿಕೊಂಡೇ ಐದು ವರ್ಷ ಆಡಳಿತ ನಡೆಸಿದರು. 15 ಲಕ್ಷರೂಪಾಯಿ ಬಡವರಖಾತೆಗೆ ಬರಲಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ. ನಮ್ಮ ಯುದ್ಧ ಏನಿದ್ದರೂ ಬಡತನ ನಿರ್ಮೂಲನೆ ಮಾಡುವುದೇ ಹೊರತು ಮೋದಿಯಂತೆ ಬಡವರನ್ನೇ ನಾಶ ಮಾಡುವುದಿಲ್ಲ ಎಂದು ಮಾತಿನ ಚಾಟಿ ಬೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.