ADVERTISEMENT

ಮಹಾದೇವ ಭೈರಗೊಂಡ ಬಂಧನ; ಸಿಐಡಿ ಕಸ್ಟಡಿಗೆ

ಭೀಮಾ ತೀರದ ರೌಡಿ ಗಂಗಾಧರ ಚಡಚಣನ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 14:12 IST
Last Updated 5 ಜುಲೈ 2018, 14:12 IST

ವಿಜಯಪುರ:ಭೀಮಾ ತೀರದ ರೌಡಿ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಕಾಂಗ್ರೆಸ್‌ ಮುಖಂಡ ಮಹಾದೇವ ಭೈರಗೊಂಡನನ್ನು ಸಿಐಡಿ ಪೊಲೀಸರು ಗುರುವಾರ ಆತನ ಮನೆಯಲ್ಲೇ ಬಂಧಿಸಿದ್ದಾರೆ.

ನಸುಕಿನಲ್ಲೇ ಮರಳು ಮಾಫಿಯಾ ಡಾನ್‌ನನ್ನು ಚಡಚಣ ತಾಲ್ಲೂಕಿನ ಕೆರೂರಿನಲ್ಲಿ ಬಂಧಿಸಿದ ಸಿಐಡಿ ತಂಡ, ವಿಜಯಪುರಕ್ಕೆ ಕರೆ ತಂದು ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ತೀವ್ರ ವಿಚಾರಣೆಗೊಳಪಡಿಸಿತು. ಇದಕ್ಕೂ ಮುನ್ನವೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆಯನ್ನು ನಡೆಸಿತು.

ಆರೋಗ್ಯ ತಪಾಸಣೆ, ವಿಚಾರಣೆ ಬಳಿಕ ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಈ ಸಂದರ್ಭ ಸಿಐಡಿ ಪರ ಹೆಚ್ಚುವರಿ ಸರ್ಕಾರಿ ವಕೀಲ ಆರ್.ಎ.ಗಡಕರಿ ವಾದ ಮಂಡಿಸಿ, ಆರೋಪಿಯನ್ನು 14 ದಿನ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

ADVERTISEMENT

ಸರ್ಕಾರಿ ವಕೀಲರ ಮನವಿ ಪುರಸ್ಕರಿಸಿದ ನ್ಯಾಯಾಧೀಶ ಅರವಿಂದ ಹಾಗರಗಿ ಇದೇ 12ರವರೆಗೆ ಆರೋಪಿಯನ್ನು ಸಿಐಡಿ ಕಸ್ಟಡಿಗೆ ನೀಡುವ ಆದೇಶ ಹೊರಡಿಸಿದರು. ಈ ಸಂದರ್ಭ ನ್ಯಾಯಾಲಯದ ಹೊರ ಭಾಗದಲ್ಲಿ ಮಹಾದೇವ ಭೈರಗೊಂಡನ ಅಪಾರ ಸಂಖ್ಯೆಯ ಬೆಂಬಲಿಗರು ಜಮಾಯಿಸಿದ್ದರಿಂದ ಬಿಗಿ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.