ADVERTISEMENT

ಮೋಡ ಬಿತ್ತನೆಗೆ ತಡೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 20:15 IST
Last Updated 13 ಅಕ್ಟೋಬರ್ 2019, 20:15 IST
   

ಬೆಂಗಳೂರು: ಪ್ರಸಕ್ತ ಅವಧಿಯ ಮುಂಗಾರಿನ ಅಂತ್ಯದ ವೇಳೆಗೆ ರಾಜ್ಯದಲ್ಲಿ ಮಳೆ ಚುರುಕಾಗಿದ್ದು, ಮೋಡ ಬಿತ್ತನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಉತ್ತಮ ಮಳೆಯಾಗುತ್ತಿದ್ದು, ಮೋಡ ಬಿತ್ತನೆ ಹೆಸರಿನಲ್ಲಿ ಹಣ ಪೋಲು ಮಾಡುವುದನ್ನು ತಡೆಯಬೇಕು. ತಕ್ಷಣ ಈ ಕಾರ್ಯ ನಿಲ್ಲಿಸಬೇಕು. ಮುಂದಿನ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಮುಂದುವರಿಯಬಾರದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ವರ್ಷ ₹45 ಕೋಟಿ ವೆಚ್ಚದಲ್ಲಿ ಒಟ್ಟು 90 ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ಆರಂಭವಾಗಿದ್ದು, ಈವರೆಗೆ 70 ದಿನಗಳ ಕಾಲ ಬಿತ್ತನೆ ಮಾಡಲಾಗಿದೆ. ಇನ್ನೂ 20 ದಿನಗಳಷ್ಟೇ ಬಾಕಿ ಉಳಿದಿದ್ದು,ಈ ಕೆಲಸ ಅ. 23ಕ್ಕೆ ಕೊನೆಗೊಳ್ಳಬೇಕಿತ್ತು. ಈಗಾಗಲೇ ಮೊದಲ ತಿಂಗಳ ಬಿಲ್ ₹11 ಕೋಟಿ ಪಾವತಿಸಲಾಗಿದ್ದು, 2ನೇ ತಿಂಗಳ ಬಿಲ್ಸಲ್ಲಿಕೆ ಆಗಬೇಕಿದೆ.

ADVERTISEMENT

‘90 ದಿನಗಳ ಅವಧಿ ಮುಗಿದ ನಂತರವೂ ಹೆಚ್ಚುವರಿಯಾಗಿ ಇನ್ನೂ ಒಂದು ವಾರ ಹಣ ಪಡೆಯದೆ ಮೋಡ ಬಿತ್ತನೆ ಮಾಡಲು ಗುತ್ತಿಗೆ ಪಡೆದ ಸಂಸ್ಥೆ ಒಪ್ಪಿಕೊಂಡಿತ್ತು. ಮೋಡ ಬಿತ್ತನೆಯಿಂದ ಹೆಚ್ಚುವರಿಯಾಗಿ ಮಳೆಯಾಗಿದ್ದು, ಇನ್ನೂ ಸಮರ್ಪಕವಾಗಿ ಮಳೆಯಾಗದ ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಈ ಕಾರ್ಯ ನಡೆಯಬೇಕಿದೆ. ಈ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು. ನಂತರ ಕಾರ್ಯಾಚರಣೆ ನಡೆಯಬೇಕೆ? ಬೇಡವೆ? ಎಂಬುದು ನಿರ್ಧಾರವಾಗಲಿದೆ’ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.