
ನದಿಯನ್ನು ದಾಟಲು ನೂರಾರು ಜನ ಕಿಕ್ಕಿರಿದು ತುಂಬಿದ್ದು, ಕೆಲವರು ದೋಣಿಗಳನ್ನು ಹತ್ತಿ ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರೆಲ್ಲಾ ಅಕ್ರಮ ವಲಸಿಗರಾಗಿದ್ದು, ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಘೋಷಣೆಯಾದ ನಂತರ ಅದಕ್ಕೆ ಹೆದರಿ ಪಶ್ಚಿಮ ಬಂಗಾಳವನ್ನು ತೊರೆದು ಹೋಗುತ್ತಿದ್ದಾರೆ (ಘರ್ ವಾಪ್ಸಿ) ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊದ ಕೀಫ್ರೇಮ್ ಅನ್ನು ಪ್ರತ್ಯೇಕಿಸಿ, ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ‘ಬಾಂಗ್ಲಾದೇಶ್ ಟೆಲಿವಿಷನ್’ನಲ್ಲಿ ಇದೇ ಚಿತ್ರ ಪ್ರಕಟವಾಗಿರುವುದು ಕಂಡಿತು. ಚಿತ್ರದೊಂದಿಗೆ, ಬಾಂಗ್ಲಾದೇಶದ ಖುಲ್ನಾದಲ್ಲಿರುವ ಮೊಂಗ್ಲಾ ಘಾಟ್ ಅನ್ನು ಜನ ದಾಟಲು ಹರಸಾಹಸ ಮಾಡುತ್ತಿರುವ ಬಗ್ಗೆ ವರದಿ ಪ್ರಕಟವಾಗಿತ್ತು. ‘ಬಾಂಗ್ಲಾದೇಶ್ ಟೆಲಿವಿಷನ್’ನ ವರದಿಗಾರ ಮೊಹಮ್ಮದ್ ಜಸೀಮುದ್ದೀನ್ ಅವರನ್ನು ಸಂಪರ್ಕಿಸಿದಾಗ, ಅವರು ಇದು ಮೊಂಗಲ್ ಘಾಟ್‌ನ ವಿಡಿಯೊ ಎನ್ನುವುದನ್ನು ಖಚಿತಪಡಿಸಿದರು. ಆ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಸುದ್ದಿ ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.