ಫ್ಯಾಕ್ಟ್ ಚೆಕ್: ‘ಆರ್ಮಿ ವೆಲ್‌ಫೇರ್ ಕ್ಯಾಶುಯಾಲಿಟಿ ಫಂಡ್’
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವೊಂದು ಹಂಚಿಕೆಯಾಗುತ್ತಿದೆ. ‘ಆರ್ಮಿ ವೆಲ್‌ಫೇರ್ ಕ್ಯಾಶುಯಾಲಿಟಿ ಫಂಡ್’ ಮತ್ತು ’ಭಾರತ್ ಕೆ ವೀರ್’ಗಾಗಿ ಧನಸಹಾಯ ಮಾಡುವಂತೆ ಕೋರುವ ಸಂದೇಶ ಅದು. ‘ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಲಹೆಯ ಮೇರೆಗೆ ನರೇಂದ್ರ ಮೋದಿ ಅವರ ಸರ್ಕಾರ ಮತ್ತೊಂದು ಉತ್ತಮ ನಿರ್ಧಾರ ಕೈಗೊಂಡಿದೆ. ಅದಕ್ಕಾಗಿ ಧನಸಹಾಯ ಮಾಡಿ’ ಎಂದು ಪ್ರಚಾರ ಮಾಡಲಾಗುತ್ತಿದೆ. ಸಂಗ್ರಹವಾದ ಹಣವನ್ನು ಸೇನೆ ಮತ್ತು ಅರೆಸೇನಾ ಪಡೆಗಳಿಗೆ ಶಸ್ತ್ರಾಸ್ತ್ರ ಕೊಳ್ಳಲು ಬಳಸಲಾಗುವುದು ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಪೋಸ್ಟ್‌ನಲ್ಲಿ ಸೇನೆಗೆ ಸಂಬಂಧಪಟ್ಟ ಎರಡು ನಿಧಿಗಳನ್ನು ಒಟ್ಟಿಗೆ ಸೇರಿಸಲಾಗಿದೆ. ಇವುಗಳಲ್ಲಿ ‘ಆರ್ಮಿ ವೆಲ್‌ಫೇರ್ ಕ್ಯಾಶುಯಾಲಿಟಿ ಫಂಡ್’ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ‘ಭಾರತ್ ಕೆ ವೀರ್’ ನಿಧಿಯು ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಇದು ಅರೆಸೇನಾ ಪಡೆ ಮತ್ತು ಕೇಂದ್ರೀಯ ಪೊಲೀಸ್ ಪಡೆಯನ್ನು ಒಳಗೊಂಡಿದೆ. ಎಂಟು ಕೇಂದ್ರೀಯ ಪೊಲೀಸ್ ಪಡೆಗಳ ಮೃತ ಸಿಬ್ಬಂದಿಯ ಕುಟುಂಬಗಳಿಗೆ ನೆರವು ನೀಡುವ ಈ ನಿಧಿಯ ಬಗ್ಗೆ ಹಿಂದೆ ಅಕ್ಷಯ್ ಕುಮಾರ್ ಅವರು ಪ್ರಚಾರ ಮಾಡಿದ್ದರು. ಎರಡು ಬೇರೆ ಬೇರೆ ನಿಧಿಗಳನ್ನು ಬೆಸೆದು, ಅದರ ಜತೆಗೆ ಭಾರತೀಯ ಸೇನೆಯ ವೆಬ್‌ಸೈಟ್‌ನಲ್ಲಿರುವ ಬ್ಯಾಂಕ್ ಖಾತೆಯೊಂದನ್ನು ಬಳಸಿಕೊಂಡು ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.