ವಿಮಾನದ ಒಳಗೆ ಪ್ರಯಾಣಿಕರು ತಮ್ಮ ತಮ್ಮಲ್ಲೇ ಜಗಳವಾಡುತ್ತಿರುವಂತೆ ಕಾಣುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತುರ್ತು ನಿರ್ಗಮನ ಇರುವ 11ಎ ಆಸನಕ್ಕಾಗಿ ಪ್ರಯಾಣಿಕರ ನಡುವೆ ಜಗಳ ನಡೆಯುತ್ತಿರುವ ವಿಡಿಯೊ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ 11ಎ ಆಸನದಲ್ಲಿ ಕುಳಿತಿದ್ದವರು ಎನ್ನುವ ವಾಸ್ತವಾಂಶದ ಕಾರಣ ಈ ವಿಡಿಯೊ ಮಹತ್ವ ಪಡೆದಿದೆ. ಆದರೆ, ಇದು ಸುಳ್ಳು ಸುದ್ದಿ.
ನಿರ್ದಿಷ್ಟ ಪದದ ಮೂಲಕ ಗೂಗಲ್‌ನಲ್ಲಿ ಹುಡುಕಾಡಿದಾಗ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಗಲಿಲ್ಲ. ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಇದೇ ವಿಡಿಯೊ ಅನ್ನು ಶೋಬಿಜ್ ಸೆಲಬ್ರಿಟಿ ಅಫಿಶಿಯಲ್ ಎನ್ನುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದು ನಾಗಪುರದ ಫ್ಲೈಯಿಂಗ್ ಇನ್‌ಸ್ಟಿಟ್ಯೂಟ್ ಹಂಚಿಕೊಂಡಿರುವ ವಿಡಿಯೊ ಎನ್ನುವುದು ತಿಳಿಯಿತು. ಫ್ಲೈಯಿಂಗ್ ಇನ್‌ಸ್ಟಿಟ್ಯೂಟ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೇ ವಿಡಿಯೊ ಅನ್ನು 2025ರ ಜೂನ್ 16ರಂದು ಹಂಚಿಕೊಳ್ಳಲಾಗಿದೆ. ಪ್ರಯಾಣಿಕರನ್ನು ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ತರಬೇತಿ ನೀಡುವ ಸಲುವಾಗಿ ಈ ವಿಡಿಯೊ ರೂಪಿಸಲಾಗಿತ್ತು. ಅದನ್ನು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.