ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಮಾ ಮಸೀದಿಯಲ್ಲಿ ಇತ್ತೀಚೆಗೆ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ 1,500 ವರ್ಷಗಳಷ್ಟು ಹಳೆಯದಾದ ಮಹಾವಿಷ್ಣುವಿನ ವಿಗ್ರಹ, ಶಿವಲಿಂಗ, ಸುದರ್ಶನ ಚಕ್ರ ಪತ್ತೆಯಾಗಿದೆ ಎಂದು ಹೇಳಿಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಾಲ್ಕು ಫೋಟೊಗಳನ್ನು ಒಳಗೊಂಡ ಕೊಲಾಜ್ ಅನ್ನು ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು.
ನಾಲ್ಕು ಚಿತ್ರಗಳನ್ನು ರಿವರ್ಸ್ ಇಮೇಜ್ ವಿಧಾನದಲ್ಲಿ ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದಾಗ ಈ ವರ್ಷದ ಫೆಬ್ರುವರಿ ಮೊದಲ ವಾರದಲ್ಲಿ ಎನ್‌ಡಿಟಿವಿ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಸಿಕ್ಕಿದವು. ವರದಿಯಲ್ಲಿದ್ದ ಎರಡು ಫೋಟೊಗಳು ಈ ಕೊಲಾಜ್‌ನಲ್ಲಿಯೂ ಇವೆ. ಆ ಸುದ್ದಿಯು ರಾಯಚೂರು–ತೆಲಂಗಾಣ ಗಡಿಭಾಗದಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ವೇಳೆ ಶಿವಲಿಂಗ ಮತ್ತು ಮಹಾವಿಷ್ಣುವಿನ ವಿಗ್ರಹಗಳು ಪತ್ತೆಯಾಗಿರುವ ಬಗ್ಗೆ ಇತ್ತು. ಸುದರ್ಶನ ಚಕ್ರದ ಚಿತ್ರವನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ಇಂಡಿಯಾಮಾರ್ಟ್ ಎಂಬ ಇ–ಕಾಮರ್ಸ್ ಪೋರ್ಟಲ್‌ನಲ್ಲಿ ಇದೇ ಚಿತ್ರ ಇರುವುದು ಕಂಡು ಬಂತು. ಅದು ಮಾರಾಟಕ್ಕೆ ಇಟ್ಟಿದ್ದ ಸುದರ್ಶನ ಚಕ್ರದ ಫೋಟೊ. ಹಾಗಾಗಿ, ಮಸೀದಿಯಲ್ಲಿ ವಿಗ್ರಹಗಳು ಪತ್ತೆಯಾಗಿವೆ ಎಂಬುದು ಸುಳ್ಳು ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.