ಮಹಾರಾಷ್ಟ್ರ ವಿಧಾನಸಭೆಯ ಬಿಜೆಪಿ ಶಾಸಕ ನಿತೇಶ್ ರಾಣೆ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗ್ರಾಫಿಕ್ ಚಿತ್ರವೊಂದನ್ನು ಹಂಚಿಕೊಂಡಿದ್ದರು. ‘ವಕ್ಫ್ ಬೋರ್ಡ್ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ತನ್ನದೆಂದು ಹಕ್ಕು ಚಲಾಯಿಸುತ್ತಿದೆ. ಹೀಗಾಗಿ ಯುಬಿಟಿ, ಕಾಂಗ್ರೆಸ್‌ಗೆ ಮತ ಚಲಾಯಿಸಬೇಡಿ’ ಎಂದು ಅವರು ತಮ್ಮ ಪೋಸ್ಟ್ ಅಡಿಬರಹದಲ್ಲಿ ಉಲ್ಲೇಖಿಸಿದ್ದರು. ‘ಸಕಾಳ್’ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳ ಲಾಂಛನದೊಂದಿಗೆ ಈ ಗ್ರಾಫಿಕ್ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.
ವಕ್ಫ್ ಬೋರ್ಡ್ ಗ್ರಾಫಿಕ್ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡತೊಡಗಿದ ನಂತರ ಈ ಬಗ್ಗೆ ಪ್ರಕಟಣೆ ನೀಡಿದ ‘ಸಕಾಳ್’ ಮಾಧ್ಯಮ ಸಂಸ್ಥೆಯು, ‘ಕೆಲವು ಕಿಡಿಗೇಡಿಗಳು ನಮ್ಮ ಲಾಂಛನ ನಕಲು ಮಾಡಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಸ್ಪಷ್ಟೀಕರಣ ನೀಡಿದೆ. ಸಿದ್ಧಿವಿನಾಯಕ ದೇವಸ್ಥಾನದ ಖಜಾಂಚಿಯೂ ಆಗಿರುವ ಮುಂಬೈ ಬಿಜೆಪಿ ಘಟಕದ ಉಪಾಧ್ಯಕ್ಷ ಪವನ್ ತ್ರಿಪಾಠಿ ಅವರು ಕೂಡ ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಮುಂಬೈ ಜಿಲ್ಲಾ ವಕ್ಫ್ ಅಧಿಕಾರಿಯನ್ನು ಸಂಪರ್ಕಿಸಿದಾಗ, ತಾವು ಅಂಥ ಯಾವುದೇ ಹಕ್ಕು ಪ್ರತಿಪಾದನೆ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.