ADVERTISEMENT

Fact Check |ಭಾರತಕ್ಕೆ ಯುದ್ಧ ವಿಮಾನ ನಷ್ಟ ಎಂದು ಜೈಶಂಕರ್ ವಿಡಿಯೊ; ಇದು ಸುಳ್ಳು

ಫ್ಯಾಕ್ಟ್ ಚೆಕ್
Published 17 ಜುಲೈ 2025, 0:30 IST
Last Updated 17 ಜುಲೈ 2025, 0:30 IST
   
ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ವಿರುದ್ಧ ಕೈಗೊಂಡಿದ್ದ ‘ಆಪರೇಷನ್‌ ಸಿಂಧೂರ’ ನಂತರ ನಡೆದಿದ್ದ ಸೇನಾ ಸಂಘರ್ಷದಲ್ಲಿ ಭಾರತ ಮೂರು ರಫೇಲ್‌ ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು. 

ವಿಡಿಯೊ ತುಣುಕಿನ ಕೀ ಫ್ರೇಮ್‌ ಒಂದನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ಹಲವರು ಇದೇ ಪೋಸ್ಟ್‌ ಹಂಚಿಕೊಂಡಿರುವುದು ಕಂಡು ಬಂತು. ಜೈಶಂಕರ್‌ ಅವರು ಈ ಹೇಳಿಕೆ ನೀಡಿದ್ದಾರೆಯೇ ಎಂದು ಪರಿಶೀಲಿಸಲು ನಿರ್ದಿಷ್ಟ ಪದಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಾಡಿದಾಗ, ಅದನ್ನು ದೃಢಪಡಿಸುವಂತಹ ನಂಬಲರ್ಹ ವರದಿಗಳು ಸಿಗಲಿಲ್ಲ. ಮತ್ತೆ ಕೀ ಫ್ರೇಮ್‌ಗಳನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿದಾಗ ಅಮೆರಿಕದ ನಿಯತಕಾಲಿಕವಾದ ನ್ಯೂಸ್‌ವೀಕ್‌ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಜುಲೈ 1ರಂದು ಪ್ರಕಟಿಸಿದ ವಿಡಿಯೊ ಸಿಕ್ಕಿತು. ಇದು ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೊವನ್ನೇ ಹೋಲುತ್ತಿತ್ತು. ಹಾಗಾಗಿ, ವಿಡಿಯೊವನ್ನು ಕೂಲಂಕಷ ಪರಿಶೀಲನೆಗೆ ಒಳಪಡಿಸಲಾಯಿತು. ವಿಡಿಯೊದ 43.05ನೇ ನಿಮಿಷದಲ್ಲಿ ಜೈ ಶಂಕರ್‌ ಅವರು ‘ಪಾಕಿಸ್ತಾನದವರು ಆ ರಾತ್ರಿ ನಮ್ಮ ಮೇಲೆ ಭಾರಿ ಪ್ರಮಾಣದಲ್ಲಿ ದಾಳಿ ಮಾಡಿದರು. ಆ ಬಳಿಕ ನಾವು ಕ್ಷಿಪ್ರವಾಗಿ ಪ್ರತಿದಾಳಿ ನಡೆಸಿದೆವು. ಮರು ದಿನ ಬೆಳಿಗ್ಗೆ ರುಬಿಯೋ (ಅಮೆರಿಕ ವಿದೇಶಾಂಗ ಕಾರ್ಯದರ್ಶಿ) ನನಗೆ ಕರೆ ಮಾಡಿ, ಪಾಕಿಸ್ತಾನವರು ಮಾತುಕತೆಗೆ ಸಿದ್ಧರಿದ್ದಾರೆ ಎಂದು ಹೇಳಿದರು’ ಎನ್ನುವುದು ವಿಡಿಯೊದಲ್ಲಿದೆ. ಭಾರತ ರಫೇಲ್‌ ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂದು ಅವರೆಲ್ಲೂ ಹೇಳಿಲ್ಲ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿರುವ ಜೈಶಂಕರ್‌ ಅವರ ಧ್ವನಿಯನ್ನು ಪರಿಶೀಲಿಸುವುದಕ್ಕಾಗಿ ಎಐ ಆಧಾರಿತ ಟೂಲ್‌ ಬಳಸಲಾಯಿತು. ಅವರ ಧ್ವನಿಯನ್ನು ಎಡಿಟ್‌ ಮಾಡಿರುವುದು ಅದರಲ್ಲಿ ದೃಢಪಟ್ಟಿತು.  ಜೈಶಂಕರ್‌ ಅವರ ಧ್ವನಿಯನ್ನು ಡಿಜಿಟಲ್‌ ರೂಪದಲ್ಲಿ ತಿರುಚಿ ಈ ವಿಡಿಯೊ ಪೋಸ್ಟ್‌ ಮಾಡಲಾಗಿದೆ ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.