
ಪಂಜರದೊಳಗೆ ಗರ್ಭಿಣಿ ಮಹಿಳೆಯನ್ನು ಕೂಡಿ ಹಾಕಿರುವ ವಿಡಿಯೊ ತುಣುಕೊಂದನ್ನು ’ಎಕ್ಸ್’ ಖಾತೆದಾರರೊಬ್ಬರು ಹಂಚಿಕೊಂಡಿದ್ದು, ಅದನ್ನು ಎಪ್‌ಸ್ಟೈನ್ ಫೈಲ್ಸ್‌ಗೆ ತಳಕು ಹಾಕಿದ್ದಾರೆ. ‘ಗರ್ಭಿಣಿ ಬಾಲಕಿಯರನ್ನು ಪ್ರಾಣಿಗಳ ರೀತಿಯಲ್ಲಿ ನೋಡಲಾಗಿದೆ. ಮತ್ತು ಜಗತ್ತು ಈಗಲೂ ‘ಸಾಕ್ಷ್ಯ’ದ ಬಗ್ಗೆ ಚರ್ಚೆ ಮಾಡುತ್ತಿದೆ’ ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿದೆ. ನಂತರ ಹ್ಯಾಶ್‌ಟ್ಯಾಗ್ ಹಾಕಿ ಎಪ್‌ಸ್ಟೈನ್‌ಫೈಲ್ಸ್ ಎಂದು ಬರೆಯಲಾಗಿದೆ. ಆದರೆ, ಇದು ಸುಳ್ಳು.
ವಿಡಿಯೊದಿಂದ ಕೀ ಫ್ರೇಮ್‌ಗಳನ್ನು ಪ್ರತ್ಯೇಕಿಸಿ ರಿವರ್ಸ್ ಸರ್ಚ್ ವಿಧಾನದಲ್ಲಿ ಗೂಗಲ್ ಲೆನ್ಸ್ ಬಳಸಿ ಹುಡುಕಿದಾಗ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ‘ಐ ಆ್ಯಮ್ ದಿ ವೆಸೆಲ್ ಲೈಫ್ ಆಫ್ ಲಕ್ಷುರಿ ಫುಲ್ ವಿಡಿಯೊ’ ಎಂಬ ತಲೆಬರಹದ ಲಿಂಕ್ ಸಿಕ್ಕಿತು. ಅದರ ಆಧಾರದಲ್ಲಿ ಹುಡುಕಾಟ ನಡೆಸಿದಾಗ, ‘ಲೈಫ್ ಆಫ್ ಲಕ್ಷುರಿ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಹೆಚ್ಚು ಗುಣಮಟ್ಟದ, ಮೂಲ ವಿಡಿಯೊ ಸಿಕ್ಕಿತು. 2025ರ ಏಪ್ರಿಲ್ 5ರಂದು ಇದನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೊದಲ್ಲಿ 0.28ರಿಂದ 0.40 ಸೆಕೆಂಡುಗಳ ನಡುವೆ ಇರುವ ದೃಶ್ಯಾವಳಿಗಳು, ಈಗ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿರುವ ತುಣುಕಿನ ದೃಶ್ಯಗಳೇ ಆಗಿವೆ. ಆ ವಿಡಿಯೊದ ವಿವರಣೆಯಲ್ಲಿ, ‘ಇದನ್ನು ಕಲೆ ಮತ್ತು ಮನರಂಜನೆಯ ಉದ್ದೇಶಕ್ಕೆ ನಿರ್ಮಿಸಲಾಗಿದೆ’ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಇದು ಹಾರರ್ ವಿಡಿಯೊವಾಗಿದ್ದು, ಎಪ್‌ಸ್ಟೈನ್ ಫೈಲ್ಸ್‌ಗೂ ಇದಕ್ಕೂ ಸಂಬಂಧವಿಲ್ಲ ಎಂದು ಬೂಮ್ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.