ADVERTISEMENT

Fact check: ಸೌದಿ ಮಸೀದಿಗಳಲ್ಲಿ ಲೌಡ್‌ಸ್ಪೀಕರ್‌ಗೆ ನಿಷೇಧ?

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 19:30 IST
Last Updated 16 ಮಾರ್ಚ್ 2023, 19:30 IST
   

ರಂಜಾನ್ ಹಬ್ಬದ ಸಮಯದಲ್ಲಿ ಸೌದಿ ಅರೇಬಿಯಾದ ಮಸೀದಿಗಳಲ್ಲಿ ಲೌಡ್‌ಸ್ಪೀಕರ್‌ ಬಳಕೆಯ ಮೇಲೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ ಎಂದು ಹೇಳಲಾಗುವ ಟ್ವೀಟ್ ಹಾಗೂ ಯೂಟ್ಯೂಬ್ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಮ್ದಿ ಎಂಬುವರು ಟ್ವೀಟ್ ಮಾಡಿ ಸೌದಿ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ. ‘ಭಾರತದಲ್ಲಿ ಇಂತಹ ಕ್ರಮವನ್ನೇನಾದರೂ ತೆಗೆದುಕೊಂಡರೆ ಬಿರುಗಾಳಿ ಏಳುತ್ತದೆ’ ಎಂದು ಮೇಜರ್ ಸುರೇಂದರ್ ಪೂನಿಯಾ ಎಂಬುವರು ಟ್ವೀಟ್ ಮಾಡಿದ್ದಾರೆ. ಭಾರತದ ಹಲವು ಸುದ್ದಿ ಸಂಸ್ಥೆಗಳೂ ಈ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಇದು ಸುಳ್ಳು.

ಸೌದಿ ಸರ್ಕಾರವು ರಂಜಾನ್ ಸಮಯದಲ್ಲಿ ಲೌಡ್‌ಸ್ಪೀಕರ್‌ಗೆ ನಿಷೇಧ ಹೇರಿದೆ ಎಂಬುದು ಸುಳ್ಳು ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ. ಇಸ್ಲಾಮಿಕ್ ವ್ಯವಹಾರಗಳ ಸಚಿವ ಶೇಕ್ ಅಬ್ದುಲ್‌ ಲತೀಫ್ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ಎಲ್ಲಿಯೂ ಈ ವಿಚಾರ ಇಲ್ಲ. ಸರ್ಕಾರದ ವಕ್ತಾರ ಅಬ್ದುಲ್ಲಾ ಅಲ್–ಎನೇಜಿ ಅವರು ಲೌಡ್‌ಸ್ಪೀಕರ್‌ ನಿಷೇಧ ವಿಚಾರವನ್ನು ತಳ್ಳಿಹಾಕಿದ್ದಾರೆ. ಕಳೆದ ವರ್ಷದ ರಂಜಾನ್‌ ಅವಧಿಯಲ್ಲಿ ಸೌದಿ ಸರ್ಕಾರವು ಲೌಡ್‌ಸ್ಪೀಕರ್‌ ಬಳಕೆಗೆ ಕೆಲವು ಮಿತಿ ಪ್ರಕಟಿಸಿದ್ದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಮಸೀದಿಯಲ್ಲಿ ಗರಿಷ್ಠ ನಾಲ್ಕು ಮೈಕ್‌ ಮಾತ್ರ ಬಳಸಬೇಕು. ಮೈಕ್‌ನ ಧ್ವನಿ ಮಿತಿಯಲ್ಲಿರಬೇಕು ಎಂಬ ನಿಯಮಗಳನ್ನು ಪ್ರಕಟಿಸಿತ್ತು. ಆದರೆ, ನಿಷೇಧ ಹೇರಿರಲಿಲ್ಲ ಎಂದು ‘ಆಲ್ಟ್ ನ್ಯೂಸ್’ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT