ಭಾರತ–ಪಾಕಿಸ್ತಾನ ಸಂಘರ್ಷದಲ್ಲಿ ಕಾರಿ ಮೊಹಮ್ಮದ್ ಇಕ್ಬಾಲ್ ಎನ್ನುವವರು ಕಾಶ್ಮೀರದಲ್ಲಿ ಮೇ 7ರ ಬೆಳಿಗ್ಗೆ ಮೃತಪಟ್ಟಿದ್ದರು. ಅವರು ಮೋಸ್ಟ್ ವಾಂಟೆಡ್ ಟೆರರಿಸ್ಟ್ ಆಗಿದ್ದರು ಎಂದೂ ‘ಲಷ್ಕರ್ ಎ ತಯಬಾ’ದ ಮುಖ್ಯ ಕಮಾಂಡರ್ ಆಗಿದ್ದರು; ‘ಆಪರೇಷನ್ ಸಿಂಧೂರ’ ಭಾಗವಾಗಿ ಭಾರತದ ಸೇನೆಯು ಅವರನ್ನು ಭಾರತೀಯ ಸೇನೆ ಕೊಂದುಹಾಕಿದೆ ಎಂದೂ ರಿಪಬ್ಲಿಕ್ ಟಿ.ವಿ. ಸೇರಿದಂತೆ ಹಲವು ಭಾಷೆಗಳ ಹಲವು ಮುಖ್ಯವಾಹಿನಿ ಮಾಧ್ಯಮಗಳು ಚಿತ್ರಸಮೇತ ಸುದ್ದಿ ಪ್ರಸಾರ ಮಾಡಿದವು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಅನೇಕರು ಈ ಕುರಿತ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಕಾರಿ ಮೊಹಮ್ಮದ್ ಇಕ್ಬಾಲ್ ಹೆಸರಿನ ಆಧಾರದಲ್ಲಿ ಹುಡುಕಾಟ ನಡೆಸಿದಾಗ, ಈ ಬಗ್ಗೆ ಮೇ 7ರಂದು ಫೇಸ್‌ಬುಕ್‌ನಲ್ಲಿ ಸಯೀದ್ ಅಹ್ಮದ್ ಹಬೀಬ್ ಎನ್ನುವವರು ಪೋಸ್ಟ್ ಮಾಡಿದ್ದು ಕಂಡುಬಂತು. ‘ಪೂಂಛ್‌ನ ಜಾಮಿಯಾ ಜಿಯಾ–ಉಲ್–ಉಲೂಂನಲ್ಲಿ ಶಿಕ್ಷಕರಾಗಿದ್ದ ನಮ್ಮ ಪ್ರೀತಿಯ ಮೌಲಾನಾ ಕಾರಿ ಮೊಹಮ್ಮದ್ ಅವರು ಇತ್ತೀಚಿನ ಗಡಿ ಸಂಘರ್ಷಕ್ಕೆ ಬಲಿಯಾಗಿದ್ದಾರೆ. ಸಾವು ಸಂಭವಿಸಿದಾಗ ಅವರು ತಮ್ಮ ಕೊಠಡಿಯಲ್ಲಿದ್ದರು’ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು. ಮತ್ತಷ್ಟು ಹುಡುಕಾಟ ನಡೆಸಿದಾಗ, ಈ ಬಗ್ಗೆ ಜಿಲ್ಲಾ ಪೊಲೀಸರು ಕೂಡ ಸ್ಪಷ್ಟನೆ ನೀಡಿದ್ದು ಕಂಡಿತು. ಇಕ್ಬಾಲ್ ಅವರು ಸ್ಥಳೀಯ ಧಾರ್ಮಿಕ ಮುಖಂಡರಾಗಿದ್ದು, ಯಾವುದೇ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರಲಿಲ್ಲ ಎಂದು ಪ್ರಕಟಣೆ ನೀಡಿದ್ದಾರೆ. ಅವರ ಕುಟುಂಬದವರನ್ನೂ ಮಾತನಾಡಿಸಿರುವ ಆಲ್ಟ್ ನ್ಯೂಸ್ ಈ ಬಗ್ಗೆ ಫ್ಯಾಕ್ಟ್ ಚೆಕ್ ವರದಿ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.