
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿರುವ ವಿಡಿಯೊ ತುಣುಕನ್ನು ಅಬ್ಬಾಸ್ ಚಾಂಡಿಯೊ (@AbbasChandio__) ಎಂಬ ‘ಎಕ್ಸ್’ ಖಾತೆಯಲ್ಲಿ ಇದೇ 14ರಂದು ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಪ್ರಶ್ನೆಗೆ ಉತ್ತರಿಸುವ ದ್ವಿವೇದಿ ಅವರು, ‘ಆಪರೇಷನ್ ಸಿಂದೂರ ಇನ್ನೂ ನಡೆಯುತ್ತಿದೆ ಎಂದು ನಾನು ಈ ಹಿಂದೆ ಹೇಳಿದ್ದೆ. ಯಾಕೆಂದರೆ ಆ ಕಾರ್ಯಾಚರಣೆಯ ಉದ್ದೇಶ ಇನ್ನೂ ಪೂರ್ಣವಾಗಿ ಈಡೇರಿಲ್ಲ. ನಮಗೆ ಬೇಕಾದ ಫಲಿತಾಂಶವನ್ನು ಪಡೆಯಲು ನಾವು ಬದ್ಧರಾಗಿದ್ದೇವೆ. ಆ ಸಮಯದಲ್ಲಿ ನಮ್ಮ ಪಡೆಗಳು ಎಲ್ಲ ರೀತಿಯಲ್ಲೂ ಶ್ರಮ ಹಾಕಿರುವುದು ನಿಮಗೆ ಗೊತ್ತೇ ಇದೆ. ಆದರೆ, (ಅಮೆರಿಕ) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಪ್ರವೇಶಿಸಿ, ಸಂಘರ್ಷವನ್ನು ಕೊನೆಗೊಳಿಸಿದರು. ಇದು ನಮ್ಮ ಪ್ರತೀಕಾರವನ್ನು ಸೀಮಿತಗೊಳ್ಳುವಂತೆ ಮಾಡಿತು. ರಾಜತಾಂತ್ರಿಕ ಮಧ್ಯಪ್ರವೇಶವು ನಮಗೆ ಹಿನ್ನಡೆ ತಂದಿತು’ ಎಂದು ಹೇಳುತ್ತಾರೆ. ಆದರೆ, ಇದು ಸುಳ್ಳು.
ವಿಡಿಯೊ ತುಣುಕಿನ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ಇಂಡಿಯಾ ಟುಡೇಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊ ಸಿಕ್ಕಿತು. ಆ ವಿಡಿಯೊವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ವಿಡಿಯೊವ್ನೇ ಹೋಲುತ್ತಿತ್ತು. ಅದು ಜ.13ರಂದು ನಡೆದ ಸೇನೆಯ ವಾರ್ಷಿಕ ಪತ್ರಿಕಾಗೋಷ್ಠಿಯ ವಿಡಿಯೊವಾಗಿತ್ತು. ಅದನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅದರಲ್ಲಿ ಎಲ್ಲೂ ದ್ವಿವೇದಿ ಅವರು ಈ ರೀತಿ ಹೇಳಿರುವುದು ಕಂಡು ಬರಲಿಲ್ಲ. ಅನುಮಾನ ಬಂದು, ವಿಡಿಯೊ ತುಣುಕಿನಿಂದ ಧ್ವನಿಯನ್ನು ಪ್ರತ್ಯೇಕಿಸಿ ಎಐ ಧ್ವನಿ ಪತ್ತೆ ಟೂಲ್ ಔರಿಜಿನ್ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ, ಅದು ಕೃತಕವಾಗಿ ಸೃಷ್ಟಿಸಿದ ಧ್ವನಿ ಎಂಬುದು ದೃಢಪಟ್ಟಿತು. ದ್ವಿವೇದಿ ಅವರ ಧ್ವನಿಯನ್ನು ತಿರುಚಿ, ಪತ್ರಿಕಾಗೋಷ್ಠಿಯಲ್ಲಿ ಆ ರೀತಿ ಮಾತನಾಡಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.