ADVERTISEMENT

Fact Check: ಲಾಲೂ ಅವರನ್ನು ನಿತೀಶ್‌ ಕುಮಾರ್ ಭೇಟಿಯಾಗಿದ್ದಾರೆ ಎಂಬುದು ಸುಳ್ಳು

ಫ್ಯಾಕ್ಟ್ ಚೆಕ್
Published 19 ಅಕ್ಟೋಬರ್ 2025, 23:30 IST
Last Updated 19 ಅಕ್ಟೋಬರ್ 2025, 23:30 IST
   

ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್‌ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡುತ್ತಿರುವ ಛಾಯಾಚಿತ್ರವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಚುನಾವಣೆಗೂ ಮುನ್ನ ಈ ಭೇಟಿ ನಡೆದಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಆದರೆ, ಇದು ಸುಳ್ಳು. ಇದು ಇತ್ತೀಚಿನ ಚಿತ್ರ ಅಲ್ಲ.

ಈ ಚಿತ್ರವನ್ನು ಗೂಗಲ್‌ ಲೆನ್ಸ್‌ ಬಳಸಿ ಹುಡುಕಿದಾಗ, ಇದೇ ಚಿತ್ರವನ್ನು ಹೊಂದಿದ್ದ ಹಲವು ಮಾಧ್ಯಮ ವರದಿಗಳು ಸಿಕ್ಕಿದವು. ವರದಿಗಳನ್ನು ಕೂಲಕಂಷವಾಗಿ ಪರಿಶೀಲಿಸಿದಾಗ, ಈ ಚಿತ್ರವು 2023ರ ಏಪ್ರಿಲ್‌ನಲ್ಲಿ ನಡೆದ ಭೇಟಿಯದ್ದು ಎಂದು ತಿಳಿದು ಬಂತು. ನಿತೀಶ್‌ ಕುಮಾರ್‌ ಅವರು ಆಗಿನ ತಮ್ಮ ಮೈತ್ರಿ ಪಕ್ಷ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಚಿತ್ರ ಅದು. ನಿತೀಶ್‌ ಎನ್‌ಡಿಎ ಮೈತ್ರಿ ತೊರೆದು ಮಹಾಘಟಬಂಧನ್‌ ಮೈತ್ರಿಕೂಟ ಸೇರಿದ ನಂತರ ಲಾಲೂ ಅವರನ್ನು ಭೇಟಿ ಮಾಡಿದ್ದಾಗ ಈ ಚಿತ್ರ ತೆಗೆಯಲಾಗಿತ್ತು.  2024ರ ಜನವರಿಯಲ್ಲಿ ಅವರ ಪಕ್ಷ ಮತ್ತೆ ಎನ್‌ಡಿಎಗೆ ಸೇರ್ಪಡೆಗೊಂಡಿತ್ತು. 2023ರಲ್ಲಿ ನಡೆದ ಈ ಭೇಟಿಯ ಚಿತ್ರ ಸಹಿತ ವರದಿಯನ್ನು ಪಿಟಿಐ ಸುದ್ದಿಸಂಸ್ಥೆ ಮಾಡಿತ್ತು. ಇದು ಇತ್ತೀಚಿನದ್ದಲ್ಲ. ಹಳೆಯ ಚಿತ್ರವನ್ನು ಹಂಚಿಕೊಂಡು ಚುನಾವಣೆಗೂ ಮುಂಚಿತವಾಗಿ ಇಬ್ಬರೂ ಭೇಟಿ ಮಾಡಿದ್ದಾರೆ ಎಂದು ತಪ್ಪಾಗಿ ಪ್ರತಿಪಾದಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT