ಗಣಪತಿ ವಿಗ್ರಹಕ್ಕೆ ಪೂಜೆ ಮಾಡುತ್ತಿರುವ ಅರ್ಚಕರೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬೀಳುವುದು, ನಂತರ ಗಣೇಶನ ವಿಗ್ರಹದಿಂದ ಧಾರ್ಮಿಕ ಧ್ವಜವೊಂದು ಅವರ ಮೇಲೆ ಬಿದ್ದಾಗ ಪವಾಡ ಸದೃಶವಾಗಿ ಅವರಿಗೆ ಪ್ರಜ್ಞೆ ಪುನಃ ಬಂದು, ಅವರು ಗಣೇಶನಿಗೆ ಪ್ರಾರ್ಥನೆ ಸಲ್ಲಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವರು ಇದನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು.
ವಿಡಿಯೊ ತುಣುಕಿನ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, 3RD EYE ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೊ ಪೋಸ್ಟ್ ಆಗಿರುವುದು ಕಂಡು ಬಂತು. ಈ ವರ್ಷದ ಜುಲೈ 11ರಂದು ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿತ್ತು. ಆ ಚಾನೆಲ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅದರಲ್ಲಿ ಪ್ರಕಟಿಸಲಾಗಿದ್ದ ಡಿಸ್‌ಕ್ಲೇಮರ್‌ನಲ್ಲಿ ಇದು ಪೂರ್ವಯೋಜಿತವಾಗಿ ಚಿತ್ರೀಕರಿಸಲಾಗಿರುವ ವಿಡಿಯೊ ಎಂಬುದು ತಿಳಿದು ಬಂತು. ಜನರಲ್ಲಿ ಜಾಗೃತಿ ಮೂಡಿಸುವ, ಮನರಂಜನೆ ನೀಡುವ, ಶಿಕ್ಷಣದ ಉದ್ದೇಶದಿಂದ ಈ ವಿಡಿಯೊ ಮಾಡಲಾಗಿದೆ ಎಂದು ಅದರಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ಇತರ ವಿಡಿಯೊಗಳನ್ನು ಪರಿಶೀಲಿಸಿದಾಗಲೂ ಆ ಚಾನೆಲ್‌ನಲ್ಲಿ ಪೂರ್ವಯೋಜಿತವಾಗಿ ಚಿತ್ರೀಕರಿಸಿದ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುವುದು ಕಂಡು ಬಂತು ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.