ಫ್ಯಾಕ್ಟ್ ಚೆಕ್: ರಾಹುಲ್ ಗಾಂಧಿ I Love Mohammad ಪೋಸ್ಟರ್ ಪ್ರದರ್ಶಿಸಿಲ್ಲ
ಉತ್ತರ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಐ ಲವ್ ಮಹಮ್ಮದ್ ಎನ್ನುವ ಪೋಸ್ಟರ್ ವಿಚಾರದಲ್ಲಿ ಹಿಂಸಾಚಾರ ನಡೆದಿತ್ತು. ಇದೇ ಹಿನ್ನೆಲೆಯಲ್ಲಿಯೇ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರು ಕೂಡ ‘ಐ ಲವ್ ಮಹಮ್ಮದ್’ ಎಂದು ಬರೆದಿರುವ ಪೋಸ್ಟರ್ ಪ್ರದರ್ಶಿಸುತ್ತಿರುವ ಚಿತ್ರವು ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ನಿಜವಲ್ಲ.
ಚಿತ್ರವನ್ನು ಗೂಗಲ್ ಲೆನ್ಸ್‌ನಲ್ಲಿ ಪರಿಶೀಲಿಸಿದಾಗ, ಇದೇ ಚಿತ್ರವನ್ನು ಹಲವರು ಹಂಚಿಕೊಂಡಿರುವುದು ಕಂಡಿತು. ಮೊದಲನೆಯದಾಗಿ, ಪ್ರಿಯಾಂಕಾ ಆಗಲಿ, ರಾಹುಲ್ ಆಗಲಿ ಈ ‘ಐ ಲವ್ ಮಹಮ್ಮದ್’ ಪೋಸ್ಟರ್ ವಿವಾದದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಮುಂದಿನ ಹಂತ, ಇದು ನಿಜವಾದ ಚಿತ್ರವೊ ಅಥವಾ ಕೃತಕ ಬುದ್ಧಿಮತ್ತೆಯಿಂದ (ಎಐ) ರೂಪಿಸಿದ ಚಿತ್ರವೊ ಎನ್ನುವುದನ್ನು ಪರಿಶೀಲಿಸುವುದು. ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರಲ್ಲಿ ಹಲವಾರು ವ್ಯತ್ಯಾಸಗಳಿರುವುದು ಕಂಡುಬಂತು. ಉದಾಹರಣೆಗೆ, ರಾಹುಲ್ ಮತ್ತು ಪ್ರಿಯಾಂಕಾ ಅವರ ಕೈಗಳ ನಡುವೆ ಮತ್ತೊಂದು ಕೈ ಪೋಸ್ಟರ್ ಅನ್ನು ಹಿಡಿದಿರುವುದು ಕಾಣುತ್ತದೆ. ಅವರ ಹಿಂದಿರುವ ಮುಖಗಳಲ್ಲಿಯೂ ಕೆಲವು ವ್ಯತ್ಯಾಸಗಳಿವೆ. ಹೈವ್ ಮಾಡರೇಷನ್ ಮತ್ತು ವಾಸ್ ಇಟ್ ಎಐ ಎನ್ನುವ ಎಐ ಪತ್ತೆ ಸಾಧನಗಳಿಂದ ಪರಿಶೀಲಿಸಿದಾಗ, ಚಿತ್ರವು ಎಐನಿಂದ ರೂಪಿಸಿರುವುದು ಖಚಿತವಾಯಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.