ಭಾರತಕ್ಕೆ ಭೇಟಿ ನೀಡಿದ್ದ ಅಫ್ಗಾನಿಸ್ತಾನದ ವಿದೇಶಾಂಗ ಸಚಿವ, ತಾಲಿಬಾನ್ ಸಂಘಟನೆಯ ಹಿರಿಯ ಮುಖಂಡ ಅಮೀರ್ ಮುತ್ತಾಕಿ ಅವರು, ‘ಭಾರತವು ತಾಲಿಬಾನ್‌ಗೆ ಹಣ ನೀಡಿದರೆ ನಾವು ಶಿವ ಮತ್ತು ವಿಷ್ಣು ದೇವಿ ದೇವಾಲಯವನ್ನು ಕಾಬೂಲ್, ಕಂದಹಾರ್ ಮತ್ತು ಹೆಲ್ಮಾಂಡ್‌ನಲ್ಲಿ ನಿರ್ಮಿಸುತ್ತೇವೆ ಎಂದು ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದೇನೆ. ಇದರಿಂದ ಭಾರತೀಯರು ಅಫ್ಗಾನಿಸ್ತಾನಕ್ಕೆ ತೀರ್ಥಯಾತ್ರೆ ಬರಬಹುದು. ನಾವು ಇಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದೇವೆ. ನಮ್ಮ ಮೇಲೆ ತೋರಿಸಿದ ಪ್ರೀತಿ ವಿಶ್ವಾಸಕ್ಕೆ ಮೋದಿ ಅವರಿಗೆ ಕೃತಜ್ಞರಾಗಿದ್ದೇವೆ’ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು.
ವಿಡಿಯೊ ತುಣುಕಿನ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿದಾಗ ಪಿಟಿಐ ಸುದ್ದಿ ಸಂಸ್ಥೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೊ ಸಿಕ್ಕಿತು. ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿರುವ ವಿಡಿಯೊ ತುಣುಕು ಮತ್ತು ಪಿಟಿಐ ಎಕ್ಸ್ ಖಾತೆಯಲ್ಲಿದ್ದ ವಿಡಿಯೊದಲ್ಲಿ ಸಾಕಷ್ಟು ಹೋಲಿಕೆ ಇತ್ತು. ಪಿಟಿಐನ ಎಲ್ಲ ಪೋಸ್ಟ್‌ಗಳನ್ನು ಪರಿಶೀಲಿಸಿದಾಗ, ಮುತ್ತಾಕಿ ಸುದ್ದಿಗೋಷ್ಠಿಯಲ್ಲಿ ದೇವಾಲಯಗಳ ಬಗ್ಗೆ ಪ್ರಸ್ತಾಪಿಸಿರುವ ಅಂಶಗಳು ಇರಲಿಲ್ಲ. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಗಳಿರಲಿಲ್ಲ. ಅನುಮಾನ ಬಂದು ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಮುತ್ತಾಕಿ ಅವರ ತುಟಿ ಚಲನೆಗೂ ವಿಡಿಯೊದಲ್ಲಿರುವ ಧ್ವನಿಗೂ ವ್ಯತ್ಯಾಸ ಕಂಡು ಬಂತು. ರೆಸೆಂಬಲ್ ಎಐ ಪತ್ತೆ ಟೂಲ್ ಮೂಲಕ ವಿಡಿಯೊವನ್ನು ಪರಿಶೀಲನೆಗೆ ಒಳಪಡಿಸಿದಾಗ, ನಕಲಿ ಧ್ವನಿಯನ್ನು ಸೇರಿಸಿ ವಿಡಿಯೊವನ್ನು ಎಡಿಟ್ ಮಾಡಿರುವುದು ದೃಢಪಟ್ಟಿತು ಎಂದು ಪಿಟಿಐ ‘ಫ್ಯಾಕ್ಟ್‌ಚೆಕ್’ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.